ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈಬೀಸಿ ಕರೆಯುತ್ತಿದೆ ಸೇಂಟ್‌ ಮೇರಿಸ್‌ ಐಲ್ಯಾಂಡ್‌

ಅ.1ರಿಂದ ಪೂರ್ಣ ಪ್ರಮಾಣದಲ್ಲಿ ಸೌಲಭ್ಯಗಳು ಲಭ್ಯ
Last Updated 20 ಸೆಪ್ಟೆಂಬರ್ 2019, 5:55 IST
ಅಕ್ಷರ ಗಾತ್ರ

ಉಡುಪಿ: ಮಳೆಗಾಲದ ನಿಷೇಧ ಅವಧಿಯ ಬಳಿಕ ಮಲ್ಪೆ ಬೀಚ್‌ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ಕಡಲಿಗಿಳಿಯದಂತೆ ಬೀಚ್‌ನ ಉದ್ದಕ್ಕೂ ಹಾಕಲಾಗಿದ್ದ ತಡೆಬೇಲಿಯನ್ನು ತೆರವುಗೊಳಿಸಲಾಗಿದ್ದು, ಬಿಕೋ ಎನ್ನುತ್ತಿದ್ದ ಕಡಲತಡಿಯಲ್ಲಿ ಮತ್ತೆ ಪ್ರವಾಸಿಗರ ಕಲರವ ಆರಂಭವಾಗುತ್ತಿದೆ. ಆದರೂ, ನೀರಿನ ಒತ್ತಡ ಇರುವ ಕಾರಣದಿಂದ ಜಾಗ್ರತೆವಹಿಸುವಂತೆ ಪ್ರವಾಸಿಗರಿಗೆ ಎಚ್ಚರಿಕೆ ನೀಡಲಾಗುತ್ತಿದೆ.

ಸೇಂಟ್‌ ಮೇರಿಸ್‌ ಐಲ್ಯಾಂಡ್‌ಗೆ ಪ್ರಯಾಣ:

ಪ್ರಸಿದ್ಧ ಜೀವವೈವಿಧ್ಯ ತಾಣವಾದ ಸೇಂಟ್‌ ಮೇರಿಸ್ ಐಲ್ಯಾಂಡ್‌ಗೆ ಬೋಟ್‌ಗಳ ಸಂಚಾರ ಶುರುವಾಗಿದ್ದು, ಸಧ್ಯ ನಾಲ್ಕು ಸಣ್ಣ ಬೋಟ್‌ಗಳು ಪ್ರವಾಸಿಗರನ್ನು ದ್ವೀಪಕ್ಕೆ ಕರೆಯೊಯ್ಯುತ್ತಿವೆ. ದೊಡ್ಡ ಮೂರು ಬೋಟ್‌ಗಳು ಶೀಘ್ರವೇ ಕಾರ್ಯಾರಂಭ ಮಾಡಲಿವೆ ಎಂದು ಮಲ್ಪೆ ಬೀಚ್‌ನ ಅಭಿವೃದ್ಧಿ ಸಮಿತಿ ಕಾರ್ಯ ನಿರ್ವಾಹಕ ಅಧಿಕಾರಿ ಸುದೇಶ್ ಶೆಟ್ಟಿ ಮಾಹಿತಿ ನೀಡಿದರು.

ಸೈಕ್ಲಿಂಗ್ ಝೋನ್‌:

ಪ್ರವಾಸಿಗರನ್ನು ಸೆಳೆಯಲು ಈ ಬಾರಿ ವಾಟರ್ ಸ್ಫೋರ್ಟ್ಸ್‌ಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಜೆಟ್‌ಸ್ಕೀ, ಬನಾನ ರೈಡ್‌, ಬಂಪಿ ರೈಡ್‌, ಸ್ಯಾಂಡ್‌ ಅಪ್‌ ರೈಡ್‌, ಕಾಯಾ ಕಿಂಗ್‌ ಜಲ ಕ್ರೀಡೆಗಳ ರೋಮಾಂಚನ ಅನುಭವವನ್ನು ಪಡೆಯಬಹುದು. ಜತೆಗೆ, ಸ್ವಿಮ್ಮಿಂಗ್ ಝೋನ್ ನಿರ್ಮಿಸಲಾಗಿದೆ. ಐಲ್ಯಾಂಡ್‌ನಲ್ಲಿ ಪ್ರವಾಸಿಗರು ಸೈಕಲ್‌ ತುಳಿಯುತ್ತಾ ಸೌಂದರ್ಯವನ್ನು ಕಣ್ತುಂಬಿಕೊಳ್ಳಬಹುದು. ಈ ಎಲ್ಲ ಸೌಲಭ್ಯಗಳು ಅ.1ರಿಂದ ಪೂರ್ಣ ಪ್ರಮಾಣದಲ್ಲಿ ಆರಂಭವಾಗಲಿದೆ ಎಂದು ತಿಳಿಸಿದರು.

ಪ್ರವಾಸಿಗರಿಗೆ ಮಾಹಿತಿ ನೀಡಲು ಗೈಡ್‌ಗಳ ವ್ಯವಸ್ಥೆ ಮಾಡಲಾಗಿದೆ. ಇಡೀ ದ್ವೀಪವನ್ನು ಸುತ್ತಿಸಿ ಅಲ್ಲಿನ ಜೀವವೈವಿಧ್ಯಗಳ ಕುರಿತು ಸಮಗ್ರ ಮಾಹಿತಿ ನೀಡಲಿದ್ದಾರೆ. ಜತೆಗೆ, ಫೊಟೊಗ್ರಫಿ ಶಿಬಿರ ಹಾಗೂ ಕಲಾ ಶಿಬಿರಗಳನ್ನು ಮಾಡುವ ಉದ್ದೇಶವಿದೆ. ಮಳೆಗಾಲದ ಅವಧಿಯಲ್ಲಿ ಹಾನಿಗೊಳಗಾದ ಪಾದಚಾರಿ ಮಾರ್ಗ, ಅತಿಥಿ ಝೋನ್‌ ದುರಸ್ತಿ ಕಾರ್ಯ ನಡೆಯುತ್ತಿದೆ ಎಂದರು.

ಮೂರು ಬೀಚ್‌ಗಳ ವಿಂಗಡಣೆ:

ಐಲ್ಯಾಂಡ್‌ನ ಸೌಂದರ್ಯವನ್ನು ಮೂರು ಭಾಗಗಳಾಗಿ ವಿಂಗಡಿಸಿ ಪ್ರವಾಸಿಗರಿಗೆ ತೋರಿಸಲಾಗುವುದು. ಬೋಲ್ಡರ್‌ ಬೀಚ್‌ನಲ್ಲಿ ದ್ವೀಪಗಳಲ್ಲಿ ಮಾತ್ರ ಕಾಣಸಿಗುವ ದೊಡ್ಡ ಬಂಡೆಗಳ ರಾಶಿಗಳನ್ನು ನೋಡಬಹುದು. ಸೀಶೆಲ್‌ ಬೀಚ್‌ನಲ್ಲಿ ಅಪರೂಪದ ಕಪ್ಪೆಚಿಪ್ಪುಗಳ ರಾಶಿಯನ್ನು ವೀಕ್ಷಿಸಬಹುದು. ಸನ್‌ಸೆಟ್‌ ಬೀಚ್‌ನಲ್ಲಿ ಸೂರ್ಯಾಸ್ತಮಾನದ ಸುಂದರ ದೃಶ್ಯವನ್ನು ಕಣ್ತುಂಬಿಕೊಳ್ಳಬಹುದು.

ಪ್ಲಾಸ್ಟಿಕ್ ಮುಕ್ತ ಬೀಚ್‌:

ದ್ವೀಪ ಪ್ಲಾಸ್ಟಿಕ್ ಮುಕ್ತವಾಗಬೇಕು ಎಂಬ ಕಾರಣಕ್ಕೆ ಪ್ಲಾಸ್ಟಿಕ್ ನಿಷೇಧಿಸಲಾಗಿದೆ. ಸ್ಟೀಲ್‌ ಬಾಕ್ಸ್‌ನಲ್ಲಿ ಆಹಾರ ಪದಾರ್ಥಗಳನ್ನು ಕೊಂಡೊಯ್ಯಲು ಅವಕಾಶವಿದೆ. ಧೂಮಪಾನ, ಮದ್ಯಪಾನ ನಿಷಿದ್ಧವಿದೆ. ದ್ವೀಪದಲ್ಲಿ ಸಿಗುವ ಅಪರೂಪದ ಸೀಶೆಲ್‌ಗಳನ್ನು, ಕಲ್ಲುಗಳನ್ನು ಪ್ರವಾಸಿಗರು ತರುವಂತಿಲ್ಲ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT