ಬಿರುಗಾಳಿ, ಮಳೆ ತಂದ ಅನಾಹುತ

7
ಬಿರುಗಾಳಿ ಸಹಿತ ಮಳೆಗೆ ಜನಜೀವನ ಅಸ್ತವ್ಯಸ್ತ: ಮುಳುಗಡೆಯಾದ ಬೋಟ್‌ಗಳು

ಬಿರುಗಾಳಿ, ಮಳೆ ತಂದ ಅನಾಹುತ

Published:
Updated:
Deccan Herald

ಉಡುಪಿ: ಕಳೆದರೆಡು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ಉಡುಪಿ ಜಿಲ್ಲೆ ಅಕ್ಷರಶಃ ನಲುಗಿಹೋಗಿದೆ. ನದಿ ತೊರೆಗಳು ಉಕ್ಕಿ ಹರಿಯುತ್ತಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.

ಕಾರ್ಕಳ ತಾಲ್ಲೂಕಿನಲ್ಲಿ ಬಿರುಗಾಳಿ ಸಹಿತ ಮಳೆಗೆ ಜಯಂತಿ ನಗರದಲ್ಲಿರುವ ಶಾಲೆಯ ಹೆಂಚುಗಳು ಹಾರಿಹೋಗಿವೆ. ಮಳೆ ನೀರು ನುಗ್ಗಿ ಪೀಠೋಪಕರಣ ಹಾಗೂ ಪುಸ್ತಕಗಳು ಹಾಳಾಗಿವೆ. ಶಾಲೆಯ ಗೋಡೆ ಕುಸಿದಿದೆ. 

ಕುಕಂದೂರು ಗ್ರಾಮ ಪಂಚಾಯಿತಿ ಕಟ್ಟಡಕ್ಕೆ ನೀರು ನುಗ್ಗಿ, ಕಂಪ್ಯೂಟರ್‌ ಹಾಳಾಗಿದೆ. ನೆಕ್ರೆ, ಪರಾಪು ವ್ಯಾಪ್ತಿಯಲ್ಲಿ 60 ಮನೆಗಳಿಗೆ ಭಾಗಶಃ ಹಾನಿಯಾಗಿದೆ. ವಿದ್ಯುತ್ ಕಂಬಗಳು ಮುರಿದುಬಿದ್ದಿವೆ. ಮರಗಳು ನೆಲಕ್ಕುರುಳಿವೆ.‌‌

ಬ್ರಹ್ಮಾವರದ ಹೆಬ್ರಿ ರಾಜ್ಯ ಹೆದ್ದಾರಿಯ ಚಂತಾರು ರೈಲ್ವೆ ಸೇತುವೆ ಕೆಳಗೆ ಕೃತಕ ನೆರೆ ಸೃಷ್ಟಿಯಾಗಿದೆ. ಮಡಿಸಾಲು ಹೊಳೆ ಉಕ್ಕಿ ಹರಿಯುತ್ತಿದ್ದು ಆರೂರು, ಉಪ್ಪೂರು ಪ್ರದೇಶದ‌ಲ್ಲಿ ಪ್ರವಾಹ ಪರಿಸ್ಥಿತಿ ಇದೆ. ಇಲ್ಲಿನ ಸರ್ಕಾರಿ ಶಾಲೆ ನೀರಿನಿಂದ ಆವೃತ್ತವಾಗಿದೆ.

ಹೆಬ್ರಿಯಲ್ಲಿ ಸೀತಾನದಿ ನೀರು ರಸ್ತೆ ಮೇಲೆ ಹರಿಯುತ್ತಿದ್ದು ಉಡುಪಿಯಿಂದ ಶಿವಮೊಗ್ಗಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಲ್ಲಿ ಸಂಪರ್ಕ ಕಡಿತಗೊಂಡಿದೆ. ಪ್ರಯಾಣಿಕರು ಹೆಬ್ರಿಯ ಮೂಲಕ ಬದಲಿ ಮಾರ್ಗದಲ್ಲಿ ಸಂಚರಿಸುತ್ತಿದ್ದಾರೆ. 

ಉಡುಪಿ ತಾಲ್ಲೂಕಿನ ಮಲ್ಪೆ ಬಂದರಿನಿಂದ ಆಳಸಮುದ್ರ ಮೀನುಗಾರಿಕೆಗೆ ತೆರಳಿದ್ದ ಎರಡು ಬೋಟ್‌ಗಳಲ್ಲಿ ತಾಂತ್ರಿಕ ಸಮಸ್ಯೆ ಕಂಡುಬಂದು ಸುರತ್ಕಲ್‌ ಹಾಗೂ ಭಟ್ಕಳ ಭಾಗದ ಸಮುದ್ರದಲ್ಲಿ ಕೆಟ್ಟುನಿಂತಿವೆ. ಮೀನುಗಾರರನ್ನು ರಕ್ಷಿಸಿ ಕರೆತರಲಾಗಿದೆ. ಕಡಲು ಪ್ರಕ್ಷುಬ್ಧಗೊಂಡಿರುವುದರಿಂದ ಮೀನುಗಾರಿಕೆಗೆ ತೆರಳಿದ್ದ ಬೋಟ್‌ಗಳು ಬಂದರಿನತ್ತ ಮುಖಮಾಡಿವೆ. 

ಮಲ್ಪೆಯಿಂದ ತೆರಳಿದ್ದ ಹನುಮ ಸಾನಿಧ್ಯ ಹೆಸರಿನ ಬೋಟ್‌ ಕೋಡಿಬೆಂಕ್ರೆ ಸಮೀಪ ಕೆಟ್ಟುನಿಂತಿತ್ತು. ಬಳಿಕ ಅಲೆಯ ಅಬ್ಬರಕ್ಕೆ ಸಿಲುಕಿ ತೀರಕ್ಕೆ ಬೋಟ್‌ ಬಡಿದು ಮುಳುಗಡೆಯಾಗಿತ್ತು. ಸ್ಥಳೀಯರು ಬೋಟ್‌ನಲ್ಲಿದ್ದ ಮೀನುಗಾರರನ್ನು ರಕ್ಷಿಸಿ ಬೋಟ್‌ ಅನ್ನು ಮೇಲೆತ್ತಿದ್ದಾರೆ.

ಶಿರೂರಿನ ಆಳ್ವೆಗದ್ದೆ ಬಂದರಿನಲ್ಲಿ ಲಂಗರು ಹಾಕಿದ್ದ 6 ದೋಣಿಗಳು ಹಾಗೂ 2 ಪರ್ಸಿಯನ್‌ ಬೋಟ್‌ಗಳು ನೀರಿನಲ್ಲಿ ಕೊಚ್ಚಿಹೋಗಿವೆ. ಕೋಟ್ಯಂತರ ರೂಪಾಯಿ ಹಾನಿ ಸಂಭವಿಸಿದೆ.

ಕುಂದಾಪುರ ತಾಲ್ಲೂಕಿನ ಸೌಪರ್ಣಿಕ ನದಿ ಉಕ್ಕಿ ಹರಿಯುತ್ತಿದ್ದು, ಬಡಾಕೆರೆ, ನಾವುಂದ, ಮರವಂತೆ, ಅರೆಹೊಳೆ, ನಾಡ, ಪಡುಕೋಣೆ, ತೂದಳ್ಳಿ ಹೊಳೆಗಳು ತುಂಬಿ ಹರಿಯುತ್ತಿದ್ದು ಈ ಭಾಗದ ಮನೆಗಳಿಗೆ ನೀರುನುಗ್ಗಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ. 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !