ಶನಿವಾರ, ನವೆಂಬರ್ 23, 2019
17 °C
ಯಕ್ಷಗಾನಕ್ಕೆ ತಂತ್ರಜ್ಞಾನದ ಸ್ಪರ್ಶ ನೀಡಿದ ಟೆಕ್ಕಿಗಳು

ಹಿಮ್ಮೇಳಕ್ಕೆ ಶ್ರುತಿಯಾದ ‘ಯಕ್ಷನಾದ’

Published:
Updated:
Prajavani

ಉಡುಪಿ: ಕರಾವಳಿಯ ಗಂಡುಕಲೆ ಯಕ್ಷಗಾನಕ್ಕೆ ತಂತ್ರಜ್ಞಾನದ ಸ್ಪರ್ಶ ಸಿಕ್ಕಿದೆ. ಯಕ್ಷಗಾನದ ಹಿಮ್ಮೇಳಕ್ಕೆ ಶ್ರುತಿಯಾಗಿ ಹಾರ್ಮೋನಿಯಂ ಪೆಟ್ಟಿಗೆಯ ಬದಲು ಇನ್ಮುಂದೆ ‘ಯಕ್ಷನಾದ’ ಮೊಬೈಲ್‌ ಆ್ಯಪ್‌ ಬಳಸಬಹುದು. ನೈಜ ಶ್ರುತಿಪೆಟ್ಟಿಗೆಯ ಸ್ವರಗಳಿಗೆ ಸಮನಾಗಿದೆ ಯಕ್ಷನಾದ ಆ್ಯಪ್‌ನ ಸ್ವರಗಳು.

ಮೂಲ್ಕಿಯ ಅತಿಕಾರಿಬೆಟ್ಟು ಗ್ರಾಮದ ಶ್ರೀನಿವಾಸ್‌ ಕಾಮತ್ ಹಾಗೂ ಸಂದೀಪ್ ಕಾಮತ್ ಸಹೋದರರು ವಿಶಿಷ್ಟವಾದ ಆ್ಯಪ್‌ ಸಿದ್ಧಪಡಿಸಿದ್ದಾರೆ. ಆ್ಯಪ್‌ ಗೂಗಲ್‌ ಪ್ಲೇಸ್ಟೋರ್‌ನಲ್ಲಿ ಉಚಿತವಾಗಿ ಲಭ್ಯವಿದ್ದು, ಆ್ಯಂಡ್ರಾಯ್ಡ್‌ ಸೌಲಭ್ಯವಿರುವ ಮೊಬೈಲ್‌ನಿಂದ ಡೌನ್‌ಲೋಡ್ ಮಾಡಿಕೊಂಡು ಬಳಸಬಹುದು.

ಸೆ.27ರಂದು ಆ್ಯಪ್‌ ಬಿಡುಗಡೆ ಮಾಡಲಾಗಿದ್ದು, ಈಗಾಗಲೇ 500ಕ್ಕೂ ಹೆಚ್ಚು ಮಂದಿ ಡೌನ್‌ಲೋಡ್ ಮಾಡಿಕೊಂಡಿದ್ದಾರೆ. ಜತೆಗೆ, ಆ್ಯಪ್‌ ಬಗ್ಗೆ ಕಲಾವಿದರಿಂದ ಉತ್ತಮ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.

ಯಕ್ಷಗಾನ ಹಾಗೂ ಅದರ ಹಿಮ್ಮೇಳಕ್ಕೆ ಬಳಸುವ ಶ್ರುತಿಗೆ ಸಂಬಂಧಿಸಿ ಈಗಾಗಲೇ ಸಾಕಷ್ಟು ಆ್ಯಪ್‌ಗಳಿವೆಯಾದರೂ, ಅತ್ಯಂತ ಸರಳವಾಗಿದೆ ಎಂಬುದು ‘ಯಕ್ಷನಾದ’ದ ವಿಶೇಷತೆ. ‘ಯಕ್ಷ ಶ್ರುತಿ’ ಎಂಬ ಆ್ಯಪನ್ನು ಈ ಹಿಂದೆಯೇ ಅಭಿವೃದ್ಧಿಪಡಿಸಲಾಗಿದ್ದು, ಬಳಕೆಯಲ್ಲಿಯೂ ಇತ್ತು. ಆದರೆ ಆ್ಯಂಡ್ರಾಯ್ಡ್ ಅಪ್ಡೇಟ್ ಆದ ಬಳಿಕ ಅದು ಕಾರ್ಯನಿರ್ವಹಿಸುತ್ತಿಲ್ಲ.

ಯಕ್ಷನಾದ ಆ್ಯಪ್‌ ಹೇಗೆ ಉಪಯುಕ್ತ ?

ಯಕ್ಷಗಾನದ ಹಿಮ್ಮೇಳಕ್ಕೆ ಶೃತಿ ಬಹಳ ಮುಖ್ಯ. ಭಾಗವತರು ಹಾಡುವಾಗ ನಿರಂತರ ಶ್ರುತಿ ನುಡಿಸುತ್ತಿರಬೇಕು. ಇದಕ್ಕಾಗಿಯೇ ರಾತ್ರಿಯಿಡೀ ಹಾರ್ಮೋನಿಯಂ ಬಾರಿಸಲು ಒಬ್ಬರು ಕಲಾವಿದರು ಅಗತ್ಯವಾಗಿ ಬೇಕಿತ್ತು. ಈಗ ಯಕ್ಷನಾದ ಆ್ಯಪ್‌ನ ಅಪ್ಲಿಕೇಷನ್‌ ಅನ್ನು ಶೃತಿಯಾಗಿ ಬಳಸಿಕೊಳ್ಳಬಹುದು ಎನ್ನುತ್ತಾರೆ ಆ್ಯಪ್‌ ಸಿದ್ಧಪಡಿಸಿದ ಶ್ರೀನಿವಾಸ್‌ ಕಾಮತ್‌.

ಕೆಲ ವರ್ಷಗಳ ಹಿಂದೆ ವಿದ್ಯುತ್ ಚಾಲಿತ ಶ್ರುತಿಪೆಟ್ಟಿಗೆ ಮಾರುಕಟ್ಟೆಗೆ ಬಂತು. ಆದರೆ, ಯಕ್ಷಗಾನಕ್ಕೆ ಇದು ಒಗ್ಗುತ್ತಿಲ್ಲ, ನೈಜ ಹಾರ್ಮೋನಿಯಂ ಸ್ವರವನ್ನು ಹೊಮ್ಮಿಸುತ್ತಿಲ್ಲ ಎಂಬ ಆಕ್ಷೇಪಗಳು ಕೇಳಿಬಂತು. ಹಾಗಾಗಿ, ಹಾರ್ಮೋನಿಯಂನ ನೈಜ ಶ್ರುತಿಯನ್ನು ಸ್ಫುಟವಾಗಿ ಮುದ್ರಿಸಿ ‘ಯಕ್ಷನಾದ’ ಆ್ಯಪ್‌ಗೆ ಅಳವಡಿಸಲಾಯ್ತು ಎಂದು ಆ್ಯಪ್‌ ರೂಪುಗೊಂಡ ಬಗೆಯನ್ನು ವಿವರಿಸಿದರು.

ಚೌಕಿ ಪೂಜೆ ಸಮಯದಲ್ಲಿ ಸಾಮಾನ್ಯವಾಗಿ ವಿದ್ಯುತ್ ಸಂಪರ್ಕ ಇರುವುದಿಲ್ಲ. ಈ ಸಂದರ್ಭ ಹಿಮ್ಮೇಳಕ್ಕೆ ಶ್ರುತಿಯಾಗಿ ಆ್ಯಪ್‌ ನೆರವಿಗೆ ಬರುತ್ತದೆ. ಸ್ಪೀಕರ್‌ಗೆ ಆ್ಯಪ್‌ ಸಂಪರ್ಕ ಕೊಟ್ಟರೆ ರಂಗಸ್ಥಳದಲ್ಲೂ ಯಕ್ಷಗಾನವನ್ನು ಸುಲಭವಾಗಿ ಪ್ರದರ್ಶಿಸಬಹುದು ಎನ್ನುತ್ತಾರೆ ಕಾಮತ್‌.

ತೆಂಕು ಹಾಗೂ ಬಡಗುತಿಟ್ಟಿನ ಯಕ್ಷಗಾನಕ್ಕೆ ಬೇಕಾದ 12 ಶ್ರುತಿಗಳನ್ನು ಸೇರಿಸಲಾಗಿದೆ. ಎರಡೂ ಪ್ರಕಾರಗಳ ಭಾಗವತರು ಇದನ್ನು ಬಳಸಬಹುದು. ಜತೆಗೆ, ಶಾಸ್ತ್ರೀಯ ಸಂಗೀತದಲ್ಲೂ ಶೃತಿಯಾಗಿ ಬಳಕೆ ಮಾಡಬಹುದು. ಬ್ಯಾಂಡ್‌ಸೆಟ್‌ ವಾದ್ಯದ ಸಂದರ್ಭವೂ ಆ್ಯಪ್‌ ಉಪಯೋಗ ಸಾಧ್ಯವಿದೆ ಎನ್ನುತ್ತಾರೆ ಅವರು.

ಪ್ರತಿಕ್ರಿಯಿಸಿ (+)