ಶನಿವಾರ, ನವೆಂಬರ್ 23, 2019
23 °C
ಕೇಂದ್ರ, ರಾಜ್ಯ ಸರ್ಕಾರಗಳ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

ಒಂದು ದೇಶ, ಒಂದು ಭಾಷೆ: ಆಘಾತಕಾರಿ ನಿರ್ಧಾರ

Published:
Updated:
Prajavani

ಪಡುಬಿದ್ರಿ: ‘ರಷ್ಯಾಕ್ಕೆ ಸುಮಾರು ₹7,200 ಕೋಟಿ ಸಾಲ ನೀಡುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು
ರಾಜ್ಯದಲ್ಲಿ ಪ್ರವಾಹ ಉಂಟಾಗಿ ಜನರು ತತ್ತರಿಸಿದ್ದರೂ ರಾಜ್ಯಕ್ಕೆ ಚಿಕ್ಕಾಸು ಬಿಡುಗಡೆ ಮಾಡದೇ ದ್ರೋಹ ಮಾಡಿ
ದ್ದಾರೆ’ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಅಸಮಾಧಾನ ವ್ಯಕ್ತಪಡಿಸಿದರು.

ಕಾಪು ಬ್ಲಾಕ್ ಕಾಂಗ್ರೆಸ್‌ನ ದಕ್ಷಿಣ ಮತ್ತು ಉತ್ತರ ವಲಯ ಸಮಿತಿಗಳ ವತಿಯಿಂದ ಕಾಪುವಿನಲ್ಲಿ ನಡೆದ ಬೃಹತ್ ಪ್ರತಿಭಟನಾ ಮೆರವಣಿಗೆ ಮತ್ತು ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

‘ಕೇಂದ್ರ ಸರ್ಕಾರದ ಒಂದೇ ದೇಶ, ಒಂದೇ ಮತ, ಒಂದೇ ಭಾಷೆ ಎಂಬ ಕಲ್ಪನೆಯು ಆಘಾತಕಾರಿಯಾದ ನಿರ್ಧಾರ. ಯಾರೊಂದಿಗೂ ಚರ್ಚಿಸದೇ ಏಕಮುಖ ನಿರ್ಧಾರ ತೆಗೆದುಕೊಳ್ಳಲು ಕೇಂದ್ರ ಸರ್ಕಾರ ಮುಂದಾಗಿರುವುದು ನಾಚಿಕೆಗೇಡಿನ ವಿಚಾರವಾಗಿದೆ. ದಕ್ಷಿಣ ಭಾರತದಲ್ಲಿ ಹತ್ತಾರು ಭಾಷೆಗಳಿವೆ. ಈ ಭಾಷೆಗಳನ್ನು ಅವಲಂಬಿತರಾಗಿರುವ ಕೋಟ್ಯಂತರ ಜನರಿದ್ದಾರೆ. ಹಿಂದಿ ಹೇರಿಕೆಯ ಮೂಲಕ ದಕ್ಷಿಣ ಭಾರತ ರಾಜ್ಯಗಳ ಭಾಷಾ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುವ ಪ್ರಯತ್ನ ಕೇಂದ್ರ ಸರ್ಕಾರ ನಡೆಸುತ್ತಿದೆ’ ಎಂದು ಹೇಳಿದರು.

‘ರಾಜ್ಯದಲ್ಲಿ ಉಂಟಾದ ಪ್ರವಾಹಕ್ಕೆ ಹಣ ಬಿಡುಗಡೆ ಮಾಡುವಲ್ಲಿ ರಾಜ್ಯ ಸರ್ಕಾರ ಕೇಂದ್ರಕ್ಕೆ ಒತ್ತಡ ಹಾಕುವಲ್ಲಿ ವಿಫಲವಾಗಿದೆ. ಈ ಸರ್ಕಾರದಿಂದ ಜನರ ಏನನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ. ಈ ಸರ್ಕಾರ ಹೆಚ್ಚು ದಿನ ಬರುವುದಿಲ್ಲ’ ಎಂದು ಭವಿಷ್ಯ ನುಡಿದರು.

ಕಾಂಗ್ರೆಸ್ ಮುಖಂಡರಾದ ಗೋಪಾಲ ಪೂಜಾರಿ ಬೈಂದೂರು, ಶಕುಂತಳಾ ಶೆಟ್ಟಿ ಪುತ್ತೂರು, ಯು.ಆರ್.ಸಭಾಪತಿ, ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ವಿಲ್ಸನ್ ರೋಡ್ರಿಗಸ್, ಕಾಪು ಬ್ಲಾಕ್ ಕಾಂಗ್ರೆಸ್ ದಕ್ಷಿಣ ವಲಯ ಸಮಿತಿ ಅಧ್ಯಕ್ಷ ನವೀನ್‌ಚಂದ್ರ ಸುವರ್ಣ, ಉತ್ತರ ವಲಯ ಸಮಿತಿ ಪ್ರವೀಣ್ ಶೆಟ್ಟಿ ಕೊರಂಗ್ರಪಾಡಿ, ಕಾಪು ನಗರ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಸಾಧಿಕ್, ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಗೀತಾ ವಾಗ್ಲೆ, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಿಶ್ವಾಸ್ ಅಮೀನ್, ಯು.ಸಿ. ಶೇಖಬ್ಬ, ದಿನೇಶ್ ಕೋಟ್ಯಾನ್, ಸುನೀತಾ ಶೆಟ್ಟಿ, ಶಿವಾಜಿ ಸುವರ್ಣ, ವೆರೋನಿಕಾ ಕರ್ನೇಲಿಯೋ, ಎಂ.ಪಿ. ಮೊಯ್ದಿನಬ್ಬ, ವೈ. ಸುಕುಮಾರ್, ಹರೀಶ್ ಕಿಣಿ, ರಮೇಶ್ ಕಾಂಚನ್, ದಿನೇಶ್ ಪುತ್ರನ್, ದಿವಾಕರ ಕುಂದರ್, ಗಣೇಶ್ ಕೋಟ್ಯಾನ್, ಹರೀಶ್ ಕಿಣಿ, ದೀಪಕ್ ಕುಮಾರ್ ಎರ್ಮಾಳ್, ರಾಜೇಶ್ ರಾವ್, ಅಬ್ದುಲ್ ಅಜೀಜ್ ಹೆಜಮಾಡಿ, ಪ್ರಭಾ ಶೆಟ್ಟಿ, ಹರೀಶ್ ನಾಯಕ್, ಫಾರೂಕ್ ಚಂದ್ರನಗರ, ಅಮೀರ್ ಮಹಮ್ಮದ್ ಉಪಸ್ಥಿತರಿದ್ದರು.

ಜಾಥಾ, ಮನವಿ ಸಲ್ಲಿಕೆ : ಕಾಪು ವಿದ್ಯಾನಿಕೇತನ ಶಾಲೆಯ ಬಳಿಯಿಂದ ಪೇಟೆಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಿತು. ಪೇಟೆಯಲ್ಲಿ ಸಭೆ ನಡೆದ ಬಳಿಕ ತಹಶೀಲ್ದಾರ್ ಕಚೇರಿಗೆ ತೆರಳಿ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.

ಪ್ರತಿಕ್ರಿಯಿಸಿ (+)