ಶುಕ್ರವಾರ, ಏಪ್ರಿಲ್ 16, 2021
31 °C
ಪಲಿಮಾರು ಮಠದ ವಿದ್ಯಾಧೀಶ ತೀರ್ಥ ಸ್ವಾಮೀಜಿ ಅಭಿಪ್ರಾಯ

ಸುಬ್ರಹ್ಮಣ್ಯ ದೇಗುಲದಲ್ಲಿ ಪೂಜಾ ಪದ್ಧತಿ ಬದಲಾವಣೆ ಬೇಡ: ವಿದ್ಯಾಧೀಶ ತೀರ್ಥ ಶ್ರೀ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಡುಪಿ: ದೇವಾಲಯಗಳಲ್ಲಿ ಹಿಂದಿನಿಂದಲೂ ಅನೂಚಾನವಾಗಿ ನಡೆದುಕೊಂಡ ಬಂದ ಪೂಜಾ ಪದ್ಧತಿಯಂತೆ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿಯೂ ನಡೆಯಬೇಕು. ಪೂಜಾ ಪದ್ಧತಿ ಬದಲಾವಣೆ ಸಲ್ಲದು ಎಂದು ಪಲಿಮಾರು ಮಠದ ವಿದ್ಯಾಧೀಶ ತೀರ್ಥ ಸ್ವಾಮೀಜಿ ಹೇಳಿದರು.

ಭಾನುವಾರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿ, ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಪೂಜಾ ಪ್ರತಿಷ್ಠಾ ಕಾಲದಿಂದಲೂ ನಡೆದುಕೊಂಡುಬಂದಿರುವಂತೆ ಈಗಲೂ ಪೂಜಾ ಪದ್ಧತಿಗಳು ಮುಂದುವರಿಯಬೇಕು. ರುದ್ರ ದೇವರ ಮೇಲೆ ದ್ವೇಷವಿಲ್ಲ, ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ರುದ್ರ ಪಾರಾಯಣ ನಡೆಸುತ್ತಿದ್ದೇನೆ ಎಂದರು.

ಸುಬ್ರಹ್ಮಣ್ಯ ಸ್ಕಂದಕೇಂದ್ರಿತ ದೇವಸ್ಥಾನವಾಗಿದ್ದು, ಸ್ಕಂದನ ಸ್ಮರಣೆ ನಡೆಯುತ್ತದೆ. ಹಾಗಾಗಿ, ಶಿವನ ಕಡೆಗಣನೆ ಎಂಬ ಪ್ರಶ್ನೆ ಉದ್ಭವಿಸುವುದಿಲ್ಲ. ಪೂಜಾ ಬದಲಾವಣೆ ಅಗತ್ಯವಿಲ್ಲ ಎಂದು ಸ್ವಾಮೀಜಿ ಅಭಿಪ್ರಾಯಪಟ್ಟರು.

ಸೋಮವಾರ ಸಭೆ:

ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಪೂಜಾ ಪದ್ಧತಿಯ ಬಗ್ಗೆ ಎರಡು ಬಣಗಳ ಮಧ್ಯೆ ಗೊಂದಲಗಳಿವೆ. ಸೋಮವಾರ ಎರಡೂ ಬಣಗಳನ್ನು ಕರೆದು ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಲಾಗುವುದು ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಶಿವನ ಅಂಶವಿರುವ ದೇವಸ್ಥಾನಗಳಲ್ಲಿ ಶಿವರಾತ್ರಿ ಆಚರಣೆ ನಡೆಯಲಿದೆ. ಪೂಜಾ ಪದ್ಧತಿ ವಿಚಾರವಾಗಿ ಆಗಮ ಪಂಡಿತರು, ವೇದ ಪಂಡಿತರು ಒಟ್ಟಾಗಿ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದರು.

ರಾಜ್ಯದಲ್ಲಿ ಅವಧಿ ಮುಗಿದಿರುವ ದೇವಸ್ಥಾನಗಳಿಗೆ ವ್ಯವಸ್ಥಾಪನ ಸಮಿತಿ ನೇಮಕ ಮಾಡುವ ಕುರಿತು ಜಿಲ್ಲಾ ಧಾರ್ಮಿಕ ಪರಿಷತ್ ನಿರ್ಧಾರ ತೆಗೆದುಕೊಳ್ಳಲಿದೆ. ಜಿಲ್ಲಾಧಿಕಾರಿ ನೇತೃತ್ವದಲ್ಲಿ ಪ್ರತಿತಿಂಗಳು 5ನೇ ತಾರೀಕು ಧಾರ್ಮಿಕ ಪರಿಷತ್‌ ಸಭೆ ನಡೆಸಲು ಸೂಚನೆ ನೀಡಲಾಗಿದೆ ಎಂದು ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.