ಎಂಎಸ್ಸಿ ವಿದ್ಯಾರ್ಥಿನಿ ಸಾವು

7
ಕಾಕ್ತೋಟ: ದೈವಸ್ಥಾನದ ಆವರಣ ಗೋಡೆ ಕುಸಿತ

ಎಂಎಸ್ಸಿ ವಿದ್ಯಾರ್ಥಿನಿ ಸಾವು

Published:
Updated:
ಧನ್ಯಾ ಕೆ.

ಬೈಂದೂರು: ಹೇರೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಉಳ್ಳೂರು ಗ್ರಾಮದ ಕಾಕ್ತೋಟ ಎಂಬಲ್ಲಿ ಶುಕ್ರವಾರ ದೈವಸ್ಥಾನದ ಆವರಣ ಗೋಡೆ ಕುಸಿದು, ಅದರಡಿ ಸಿಲುಕಿ ಸ್ನಾತಕೊತ್ತರ ಪದವಿ ವಿದ್ಯಾರ್ಥಿನಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.

ಸೇನಾಪುರಮನೆ ಚಂದ್ರಶೇಖರ ಶೆಟ್ಟಿ ಮತ್ತು ಹೇಮಾ ದಂಪತಿಯ ಪುತ್ರಿ ಧನ್ಯಾ ಕೆ.(22) ಮೃತಳು. ಮನೆಯಿಂದ 100 ಮೀಟರ್‌ ಅಂತರದಲ್ಲಿದ್ದ ಜಟ್ಟಿಗೇಶ್ವರ ದೈವಸ್ಥಾನಕ್ಕೆ ಧನ್ಯಾ ಹೋಗುತ್ತಿದ್ದಾಗ ಅದರ ಪೂರ್ವ ಪಾರ್ಶ್ವದ ಆವರಣ ಕುಸಿದು ಆಕೆಯ ಮೇಲೆ ಬಿದ್ದಿದೆ. ಅದೇ ವೇಳೆಗೆ ಬಿರುಸಾಗಿ ಮಳೆ ಸುರಿಯುತ್ತಿತ್ತು. ಕಲ್ಲುಗಳ ಅಡಿ ಸಿಲುಕಿದ್ದ ಆಕೆಯ ಮೇಲೆ ನೀದು ಹರಿದ ಕಾರಣ ಉಸಿರುಗಟ್ಟಿ ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ.

ಅದೇ ದಾರಿಯಲ್ಲಿ ಕಿರಿಮಂಜೇಶ್ವರ ಸರ್ಕಾರಿ ಪ್ರೌಢಶಾಲೆಗೆ ಹೋಗುತ್ತಿದ್ದ 10ನೇ ತರಗತಿ ವಿದ್ಯಾರ್ಥಿ ಕೃತನ್ ಶೆಟ್ಟಿಯು ಕುಸಿದ ಆವರಣ ಗೋಡೆಯ ಕಲ್ಲುಗಳ ಅಡಿ ಕೊಡೆ, ತಲೆ ನೋಡಿ ಆಕೆಯ ಮನೆಯವರಿಗೆ ವಿಷಯ ತಿಳಿಸಿದ್ದಾನೆ. ಸ್ಥಳೀಯರು ತಕ್ಷಣ ಬಂದು ಕಲ್ಲುಗಳನ್ನು ಸರಿಸಿ, ಆಕೆಯನ್ನು ಮೇಲೆತ್ತಿದರೂ ಅಷ್ಟೊತ್ತಿಗೆ ಮೃತಪಟ್ಟಿದ್ದಳು.

ಪ್ರತಿಭಾನ್ವಿತ ವಿದ್ಯಾರ್ಥಿನಿ: ಹೈದರಾಬಾದಿನಲ್ಲಿ ಹೋಟೆಲ್ ಕಾರ್ಮಿಕನಾಗಿ ದುಡಿಯುತ್ತಿರುವ ಚಂದ್ರಶೇಖರ ಶೆಟ್ಟರ ಮೂವರು ಪುತ್ರಿಯರಲ್ಲಿ ಧನ್ಯಾ ಕೊನೆಯವಳು. ಕಲಿಕೆಯಲ್ಲಿ ಪ್ರತಿಭಾವಂತಳಾಗಿರುವ ಆಕೆ ಮಂಗಳಗಂಗೋತ್ರಿಯಲ್ಲಿ ಸಂಖ್ಯಾಶಾಸ್ತ್ರದಲ್ಲಿ ಪ್ರಥಮ ವರ್ಷದ ಎಂಎಸ್ಸಿ ಮುಗಿಸಿದ್ದಾಳೆ. ಈಗ ರಜೆ ಇರುವುದರಿಂದ ಮನೆಗೆ ಬಂದಿದ್ದಳು. ದೈವಭಕ್ತೆಯಾಗಿದ್ದ ಅವಳು ಪ್ರತಿದಿನ ಬೆಳಿಗ್ಗೆ ಮನೆ ಸಮೀಪದ ನಾಗ ಮತ್ತು ಜಟ್ಟಿಗೇಶ್ವರ ದೈವಕ್ಕೆ ಕೈಮುಗಿಯುವ ರೂಡಿ ಬೆಳೆಸಿಕೊಂಡಿದ್ದಳು. ಇಂದು ಅದೇ ಉದ್ದೇಶಕ್ಕೆ ಬರುತ್ತಿದ್ದಾಗ ದುರಂತ ಸಂಭವಿಸಿದೆ.

ಆಕೆಯ ದೇಹ ಆವರಣದ ಕೊನೆಯ ಭಾಗದ ಅಡಿ ಸಿಲುಕಿತ್ತು. ಎರಡು ಹೆಜ್ಜೆ ಮುಂದೆ ಹೋಗಿದ್ದರೆ ಅಪಾಯ ಸಂಭವಿಸುತ್ತಿರಲಿಲ್ಲ. ಆಕೆಗೆ ಅವಳಿ– ಜವಳಿ ಅಕ್ಕಂದಿರಿದ್ದು, ಒಬ್ಬಾಕೆಗೆ ವಿವಾಹವಾಗಿದೆ. ಮತ್ತೊಬ್ಬಳಿಗೆ ವರ ನಿಶ್ಚಯವಾಗಿದೆ.

ಎತ್ತರದ ಗೋಡೆ: ನಡೆದು ಹೋಗಬೇಕಾಗಿದ್ದ ದಾರಿಗಿಂತ ಎರಡೂವರೆ ಮೀಟರು ಎತ್ತರದಲ್ಲಿ ದೈವಸ್ಥಾನವಿದೆ. ಕಳೆದ ವರ್ಷ ದಾರಿಯ ಬುಡದಿಂದ ದೈವಸ್ಥಾನದ ಅಂಗಳದ ಮಟ್ಟದ ವರೆಗೆ ಗೋಡೆ ಕಟ್ಟಿ, ಮರಳಿನ ಅಭಾವದ ಕಾರಣ ಅಲ್ಲಿಗೇ ನಿಲ್ಲಿಸಲಾಗಿತ್ತು. ಈ ವರ್ಷ ಅದರ ಮೇಲೆ ಒಂದೂವರೆ ಮೀಟರು ಎತ್ತರದ ಆವರಣ ಕಟ್ಟಲಾಗಿದೆ. ಇಂದು ಆವರಣದ 12 ಮೀಟರ್ ಉದ್ದದ, 4 ಮೀಟರು ಎತ್ತರದ ಇಡೀ ಆವರಣ ಗೋಡೆ ಕುಸಿದು ಬಿದ್ದಿದೆ. ನಿರ್ಮಾಣ ಸಂದರ್ಭ ಆವರಣದ ದೃಢತೆಗೆ ಗಮನ ನೀಡದಿದ್ದುದು ಕುಸಿತಕ್ಕೆ ಕಾರಣ ಎನ್ನುವುದು ಸೇರಿದ್ದವರ ಅಭಿಪ್ರಾಯ. ಇಷ್ಟೇ ಎತ್ತರದ ಉತ್ತರ ದಿಕ್ಕಿನ ಆವರಣದ ತಳಮಟ್ಟದಲ್ಲಿ ಧನ್ಯಾಳ ದೊಡ್ಡಮ್ಮನ ಮನೆ ಇದೆ. ಆ ಆವರಣವೂ ಅಪಾಯಕಾರಿ ಎಂದು ಭಾವಿಸಿದ ಜನರು, ಅದನ್ನು ಶುಕ್ರವಾರ ಕೆಡಹಿದರು.

 ಸರ್ಕಲ್‌ ಇನ್‌ಸ್ಪೆಕ್ಟರ್ ಪರಮೇಶ್ವರ ಗುನಗ, ಎಸ್‌ಐ ತಿಮ್ಮೇಶ್ ಬಿ. ಎನ್. ಮತ್ತು ಸಿಬ್ಬಂದಿ ಬಂದು ಮಹಜರು ನಡೆಸಿದರು. ಬಳಿಕ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಬೈಂದೂರಿಗೆ ಒಯ್ಯಲಾಯಿತು. ಹೆಚ್ಚುವರಿ ಎಸ್‌ಪಿ ಕುಮಾರಚಂದ್ರ ಆಸ್ಪತ್ರೆಗೆ ಬಂದು ಶವದ ಪರಿಶೀಲನೆ ನಡೆಸಿದರು.

ಹಿರಿಯ ಸಹಕಾರಿ ಧುರೀಣ ಎಸ್. ಪ್ರಕಾಶ್ಚಂದ್ರ ಶೆಟ್ಟಿ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಗೌರಿ ದೇವಾಡಿಗ, ಶಂಕರ ಪೂಜಾರಿ, ತಾಲ್ಲೂಕು ಪಂಚಾಯಿತಿ ಸದಸ್ಯರಾದ ಮಹೇಂದ್ರಕುಮಾರ್, ವಿಜಯ ಶೆಟ್ಟಿ, ತಹಶೀಲ್ದಾರ್ ಕಿರಣ್ ಗೌರಯ್ಯ, ಅಭಿವೃದ್ಧಿ ಅಧಿಕಾರಿ ಗಿರಿಜಾ ವೀರಶೇಖರ್, ಗ್ರಾಮಲೆಕ್ಕಿಗ ಮಂಜು ಸ್ಥಳದಲ್ಲಿ ಇದ್ದರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !