ಭಾನುವಾರ, ಆಗಸ್ಟ್ 25, 2019
21 °C
ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ಅಧ್ಯಕ್ಷ ಡಾ.ರವೀಂದ್ರನಾಥ್ ಶಾನುಭಾಗ್

‘ಇಂದ್ರಾಣಿ ಉಳಿಸಿ’ ಹೋರಾಟಕ್ಕೆ ಬೆಂಬಲ

Published:
Updated:
Prajavani

ಉಡುಪಿ: ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಹೈಕೋರ್ಟ್‌ ಹಾಗೂ ಸುಪ್ರೀಂಕೋರ್ಟ್‌ನಲ್ಲಿಯೇ ಹಾಕಬೇಕು ಎಂಬ ನಿಯಮವಿಲ್ಲ. ಸ್ಥಳೀಯ ನ್ಯಾಯಾಲಯಗಳ ಮೊರೆ ಹೋಗಬಹುದು ಎಂದು ಹೈಕೋರ್ಟ್‌ ವಕೀಲರಾದ ಬಸವಪ್ರಭು ಹೊಸ್ಕೇರಿ ತಿಳಿಸಿದರು.

ಇಂದ್ರಾಣಿ ಉಳಿಸಿ ಹೋರಾಟದ ಅಂಗವಾಗಿ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನವು ವೈಕುಂಠ ಬಾಳಿಗ ಕಾನೂನು ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಸಾರ್ವಜನಿಕ ಹಿತಾಸಕ್ತಿ ದಾವೆ ಕುರಿತ ಕಾರ್ಯಾಗಾರದಲ್ಲಿ ಮಾನತಾಡಿದರು.

ಉಡುಪಿ ನಗರಕ್ಕೆ ಸಮರ್ಪಕ ಒಳಚರಂಡಿ ವ್ಯವಸ್ಥೆ ಕಲ್ಪಿಸುವ ವಿಚಾರದಲ್ಲಿ ಖಂಡಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಬಹುದು. ಕರ್ನಾಟಕ ಮುನ್ಸಿಪಲ್‌ ಕಾಯ್ದೆಯಡಿ ಪ್ರಕಾರ 87 ಐ ಪ್ರಕಾರ ನಗರಕ್ಕೆ ಒಳಚರಂಡಿ ವ್ಯವಸ್ಥೆ ಕಲ್ಪಿಸುವುದು ನಗರಸಭೆಯ ಮೂಲ ಕರ್ತವ್ಯ. ಹಣಕಾಸಿನ ಸಮಸ್ಯೆ ಕಾರಣದಿಂದ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ ಎಂದರು.

ಸರಿಯಾದ ರಸ್ತೆಯನ್ನು ಹೊಂದುವುದು ನಾಗರಿಕರ ಮೂಲಭೂತ ಹಕ್ಕು ಎಂದು ನ್ಯಾಯಾಲಯ ತೀರ್ಪು ನೀಡಿದೆ. ಇದರ ಅನ್ವಯ ಒಳಚರಂಡಿ ವ್ಯವಸ್ಥೆ ಕಲ್ಪಿಸುವಂತೆ ಕೇಳುವುದು ವ್ಯಕ್ತಿಯ ಮೂಲಭೂತ ಹಕ್ಕಾಗುವ ಸಾಧ್ಯತೆ ಹೆಚ್ಚಿದೆ. ಸಾರ್ವಜನಿಕರ ಸಮಸ್ಯೆಗಳಿಗೆ ಸಾರ್ವಜನಿಕರೇ ಪ್ರಶ್ನೆಮಾಡಿ ನ್ಯಾಯ ಪಡೆಯಬಹುದು ಎಂದರು.

ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲು ಮಾಡುವ ಮುನ್ನ ಅರ್ಜಿದಾರರು ಸಂಬಂಧಪಟ್ಟ ಇಲಾಖೆಗಳ ಜತೆ ನಡೆಸಿದ ಪತ್ರ ವ್ಯವಹಾರ, ಸಂವಾದದ ದಾಖಲೆಗಳನ್ನು ಇಟ್ಟುಕೊಳ್ಳಬೇಕು. ದಾಖಲೆಗಳು ಪೂರಕವಾಗಿ ತೀರ್ಪು ಬರಲು ನೆರವಾಗುತ್ತದೆ ಎಂದು ಸಲಹೆ ನೀಡಿದರು.

ಲೀಗಲ್‌ ಸರ್ವೀಸಸ್‌ ಅಥಾರಿಟಿಯಲ್ಲಿ ನಗರದ ಯಾವುದೇ ಸಮಸ್ಯೆಗಳ ವಿರುದ್ಧ ನ್ಯಾಯಾಲಯದಲ್ಲಿ ಅರ್ಜಿ ದಾಖಲಿಸಲು ಅವಕಾಶವಿದೆ. ಇದಕ್ಕೆ ಹಣ ಖರ್ಚುಮಾಡಬೇಕಿಲ್ಲ. ಎಲ್ಲವೂ ಸರ್ಕಾರವೇ ನೋಡಿಕೊಳ್ಳಲಿದೆ ಎಂದರು.

ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ಅಧ್ಯಕ್ಷ ಡಾ.ರವೀಂದ್ರನಾಥ್ ಶಾನುಭಾಗ್ ಮಾತನಾಡಿ, ಸಮಾಜಕ್ಕೆ ಕೆಡಕುಂಟು ಮಾಡುವ ಯಾವುದೇ ವಿಚಾರದಲ್ಲೂ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಲು ಅವಕಾಶ ಇದೆ. ಧನಿ ಇಲ್ಲದ ಸಮುದಾಯದ ಪರವಾಗಿಯೂ ಪಿಐಎಲ್‌ ಹಾಕಿ ನ್ಯಾಯ ಪಡೆಯಬಹುದು ಎಂದರು.

ಏಷ್ಯಾಡ್‌ ಗೇಮ್ಸ್‌ನಲ್ಲಿ ಬಾಲ ಕಾರ್ಮಿಕರ ಬಳಕೆ ಕುರಿತು ಸಾರ್ವಜನಿಕರೊಬ್ಬರು ಬರೆದ ಪತ್ರವನ್ನು ಪಿಐಎಲ್‌ ಆಗಿ ಪರಿಗಣಿಸಿದ ಅಂದಿನ ಸುಪ್ರೀಂಕೋರ್ಟ್‌ ನ್ಯಾಯಮೂರ್ತಿ ಪಿ.ಎನ್‌.ಭಗವತಿ ಐತಿಹಾಸಿಕ ತೀರ್ಪು ನೀಡಿದರು.

ಈ ಘಟನೆಯಿಂದ ಪ್ರೇರಿತರಾಗಿ ಮಂಗಳೂರಿನಲ್ಲಿ 300 ಶಿಕ್ಷಕರಿಗೆ ಪಿಎಫ್‌ ವಂಚನೆ ನಡೆದಿದೆ ಎಂದು ಸುಪ್ರೀಂಕೋರ್ಟ್‌ಗೆ ಪತ್ರ ಬರೆಯಲಾಗಿತ್ತು. ಅರ್ಜಿಯನ್ನು ಮಾನ್ಯ ಮಾಡಿದ ನ್ಯಾಯಮೂರ್ತಿಗಳು ಬಡ್ಡಿಸಹಿತ ಪಿಎಫ್‌ ಪಾವತಿಗೆ ಆದೇಶಿಸಿದರು. ಇದು ದಕ್ಷಿಣ ಭಾರತದ ಮೊದಲ ಪಿಐಎಲ್‌ ಎಂಬ ಹೆಗ್ಗಳಿಕೆ ಪಡೆಯಿತು ಎಂದರು.

Post Comments (+)