ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯಾಯದಾನ ಪ್ರಕ್ರಿಯೆ ಸುಧಾರಣೆಯಾಗಲಿ: ಸುಪ್ರೀಂಕೋರ್ಟ್‌ ನ್ಯಾಯಮೂರ್ತಿ ನಜೀರ್‌

Last Updated 30 ಡಿಸೆಂಬರ್ 2022, 12:40 IST
ಅಕ್ಷರ ಗಾತ್ರ

ಉಡುಪಿ: ಕ್ರಿಮಿನಲ್‌ ಪ್ರಕರಣಗಳ ನ್ಯಾಯದಾನ ಪ್ರಕ್ರಿಯೆಯಲ್ಲಿ ಸುಧಾರಣೆಯಾಗಬೇಕಾದ ಅಗತ್ಯತೆ ಇದೆ ಸುಪ್ರೀಂಕೋರ್ಟ್‌ ನ್ಯಾಯಮೂರ್ತಿ ಎಸ್.ಅಬ್ದುಲ್ ನಝೀರ್ ಅಭಿಪ್ರಾಯಪಟ್ಟರು.

ಗುರುವಾರ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಅನೆಕ್ಸ್ ನ್ಯಾಯಾಲಯ ಸಂಕೀರ್ಣ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿ ‘ಶೇ 95ರಷ್ಟು ಕ್ರಿಮಿನಲ್‌ ಪ್ರಕರಣಗಳಲ್ಲಿ ಆರೋಪಿಗಳು ಖುಲಾಸೆಯಾಗುತ್ತಿದ್ದಾರೆ. ಪೊಲೀಸರು ಸಲ್ಲಿಸುವ ದೋಷಪೂರಿತ ಆರೋಪ ಪಟ್ಟಿಯಿಂದ ಮಾಡದ ತಪ್ಪಿಗೆ ನಿರಪರಾಧಿಗಳು ಶಿಕ್ಷೆ ಅನುಭವಿಸುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಸಾಧಾರಣವಾಗಿ ಕ್ರಿಮಿನಲ್‌ ಪ್ರಕರಣ ಇತ್ಯರ್ಥವಾಗಲು 5 ರಿಂದ 10 ವರ್ಷ ತಗುಲುತ್ತದೆ. ಈ ಅವಧಿಯಲ್ಲಿ ಆರೋಪಿಯು ನ್ಯಾಯಾಂಗ ಬಂಧನ ಹಾಗೂ ಪೊಲೀಸ್‌ ವಶದಲ್ಲಿ ಇರಬೇಕಾಗುತ್ತದೆ. ಪ್ರಕರಣ ವಿಚಾರಣೆಗೆ ಬಂದಾಗಲೆಲ್ಲ ವಕೀಲರಿಗೆ ಶುಲ್ಕ ಪಾವತಿಸಬೇಕಾಗುತ್ತದೆ.

ಆರೋಪಿಯ ಜತೆಗೆ ಕುಟುಂಬದ ಸದಸ್ಯರೂ ಮಾನಸಿಕ ಹಿಂಸೆ ಅನುಭವಿಸಬೇಕಾಗುತ್ತದೆ. ಆರ್ಥಿಕ ನಷ್ಟ ಭರಿಸಬೇಕಾಗುತ್ತದೆ. ಅಂತಿಮವಾಗಿ ಆರೋಪಿಯು ನಿರಪರಾಧಿಯಾಗಿ ಬಿಡುಗಡೆಯಾದರೂ ಒಂದು ರೀತಿಯಲ್ಲಿ ಶಿಕ್ಷೆ ಅನುಭವಿಸಿದಂತಾಗಿರುತ್ತದೆ.

ಪ್ರಕರಣದ ವಿಚಾರಣೆಯ ಅವಧಿಯಲ್ಲಿ ಆರೋಪಿ ಹಾಗೂ ಕುಟುಂಬದ ಸದಸ್ಯರು ಅನುಭವಿಸುವ ನೋವು, ಹಿಂಸೆ, ಆರ್ಥಿಕ ನಷ್ಟಕ್ಕೆ ಬೆಲೆ ತೆರುವವರು ಯಾರು ಎಂದು ನ್ಯಾಯಮೂರ್ತಿ ಅಬ್ದುಲ್ ನಜೀರ್ ನ್ಯಾಯದಾನ ಪ್ರಕ್ರಿಯೆಲ್ಲಿನ ಹುಳುಕುಗಳನ್ನು ಪ್ರಶ್ನಿಸಿದರು.

‘ಬೇಲ್ ಇಸ್‌ ದ ರೂಲ್‌ ಅಂಡ್‌ ಜೈಲ್‌ ಇಸ್‌ ಆನ್‌ ಎಕ್ಸ್‌ಪ್ಷನ್‌’ ಎಂಬ ನಿಯಮ ಪಾಲನೆಯಾಗಬೇಕು. ಕ್ರಿಮಿನಲ್‌ ಪ್ರಕರಣಗಳಲ್ಲಿ ಪೊಲೀಸರು ಸರಿಯಾದ ದಿಕ್ಕಿನಲ್ಲಿ ತನಿಖೆ ನಡೆಸಿ ದೋಷಾರೋಪಣೆ ಸಲ್ಲಿಸಬೇಕು ಎಂದು ಸಲಹೆ ನೀಡಿದರು.

ಸ್ವಸ್ಥ ಸಮಾಜದ ಲಕ್ಷಣವಲ್ಲ: ಸಿವಿಲ್‌ ಪ್ರಕರಣಗಳಿಗಿಂತ ಕ್ರಿಮಿನಲ್‌ ಪ್ರಕರಣಗಳು ಹೆಚ್ಚಾಗುತ್ತಿರುವುದು ಸ್ವಸ್ಥ ಸಮಾಜದ ಲಕ್ಷಣವಲ್ಲ. ಸಾರ್ವಜನಿಕರು ಕಾನೂನನ್ನು ಕೈಗೆತ್ತಿಕೊಳ್ಳುತ್ತಿದ್ದಾರೆ ಎಂದರ್ಥ. ಪೊಲೀಸ್ ಠಾಣೆಗಳಲ್ಲಿ ಸಿವಿಲ್‌ ವ್ಯಾಜ್ಯಗಳನ್ನು ಇತ್ಯರ್ಥಪಡಿಸುವ ಅಧಿಕಾರ ಪೊಲೀಸರಿಗೆ ಇಲ್ಲ ಎಂದು ಕಟುವಾಗಿ ಎಚ್ಚರಿಕೆ ನೀಡಿದರು.

ಬಹುದಿನಗಳ ಬೇಡಿಕೆಯಾಗಿದ್ದ ಅನೆಕ್ಸ್‌ ನ್ಯಾಯಾಲಯ ಸಂಕೀರ್ಣ ಉಡುಪಿಯಲ್ಲಿ ನಿರ್ಮಾಣ ವಾಗುತ್ತಿರುವುದು ಖುಷಿಯ ವಿಚಾರ. ಮಂಗಳೂರಿನಲ್ಲೂ ಶೀಘ್ರ ನಿರ್ಮಾಣವಾಗಲಿ. ಕಾರ್ಕಳದಿಂದ ಬೈಂದೂರಿಗೆ ಹೆಚ್ಚುವರಿ ನ್ಯಾಯಾಲಯ ಸ್ಥಳಾಂತರಿಸಿರುವುದರಿಂದ ಸಾರ್ವಜನಿಕರಿಗೆ ಹೆಚ್ಚು ಅನುಕೂಲವಾಗಿದೆ. ಬೈಂದೂರಿನಲ್ಲಿ 3,500ಕ್ಕೂ ಹೆಚ್ಚು ಪ್ರಕರಣಗಳ ವಿಚಾರಣೆ ನಡೆಯುತ್ತಿದ್ದು ಅಲ್ಲಿಗೆ ಹಿರಿಯ ವಿಭಾಗೀಯ ನ್ಯಾಯಾಲಯ ಸ್ಥಾಪಿಸಿದರೆ ಮತ್ತಷ್ಟು ಅನುಕೂಲವಾಗಲಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT