ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾವಿನ ಸವಿಯೊಂದಿಗೆ ರೈತರ ಪರಿಚಯ

Last Updated 10 ಮೇ 2018, 19:30 IST
ಅಕ್ಷರ ಗಾತ್ರ

ಮಾವಿನ ರಸಾಸ್ವಾದದಲ್ಲಿ ಮೈಮರೆಯವ ಮಾವಿನ ಋತು ಇದು. ಮಾವು ಚಪ್ಪರಿಸುವ ಸುಂದರ ಸವಿಗಾಲವೂ ಹೌದು. ಮಾವಿನ ಸ್ವಾದ ಸವಿಯಲು ವಯಸ್ಸಿನ ಅಡ್ಡಿಯಿಲ್ಲ. ದೊಡ್ಡವರಿರಲಿ, ಚಿಕ್ಕವರಿರಲಿ ಮಾವಿನ ಸ್ವಾದದಲ್ಲಿ ಮೈಮರೆಯುತ್ತಾರೆ. ಮಾವನ್ನು ಸವಿದ ನಂತರ ಏನು ಮಾಡುವುದು ಕೆಲವರು ಯಾವುದಕ್ಕೂ ಇರಲಿ ಆದರೆ ಗಿಡವಾಗಲಿ, ಇಲ್ಲದಿದ್ದರೆ ಕಳೆದುಕೊಳ್ಳುವುದು ಏನು? ಎನ್ನತ್ತಾ ಮನೆಯ ಹೂಕುಂಡದಲ್ಲಿ ತಿಂದು ಮುಗಿಸಿದ ಹಣ್ಣಿನ ವಾಟೆಯನ್ನು ಹಾಕುತ್ತಾರೆ. ಆದರೆ ಯಾರೊಬ್ಬರು ಈ ರಸವತ್ತಾದ ಮಾವಿನ ಹಣ್ಣನ್ನು ಬೆಳೆದಿದ್ದು ಎಲ್ಲಿ? ಇದನ್ನು ಬೆಳೆಸಿದವರಾರು ಎನ್ನುವ ಕುರಿತು ಯೋಚಿಸುವುದಿಲ್ಲ. ಆದರೆ ‘ಟಾಟಾ ಟೆಸ್ಕೊ ಎಂಟರ್‌ಪ್ರೈಸಸ್‌’ ಸಂಸ್ಥೆ ಮಾವಿನ ಬಾಕ್ಸ್‌ಗಳು ಈ ಕುರಿತ ಯೋಚನೆಗೆ ಒಡ್ಡುತ್ತವೆ.

ಹೌದು ಸಂಸ್ಥೆಯ ಸ್ಟಾರ್ ಬಜಾರ್‌ ಮಳಿಗೆಗಳಲ್ಲಿನ ಮಾವಿನ ಹಣ್ಣುಗಳ ಬಾಕ್ಸ್‌ಗಳ ಮೇಲೆ ಅದನ್ನು ಬೆಳೆದ ರೈತರ ಹೆಸರು, ವಿಳಾಸ ಮತ್ತು ಫೋಟೊವನ್ನು ಮುದ್ರಿಸಿದೆ. ಮಾತ್ರವಲ್ಲದೆ ಅ ಬಾಕ್ಸ್‌ನ ಒಳಗೊಂದು ಪತ್ರವಿದ್ದು ಅದರಲ್ಲಿ ಗ್ರಾಹಕರಿಗೆ ತಮ್ಮ ಪ್ರತಿಕ್ರಿಯೆ ನೀಡಲು ಅವಕಾಶ ಕಲ್ಪಿಸಿದೆ. ಮಾವಿನ ಹಣ್ಣುಗಳು ರುಚಿಯಾಗಿದ್ದರೆ ಪತ್ರಮುಖೇನ ಅಭಿನಂದನೆಗಳನ್ನು ಸಲ್ಲಿಸಬಹುದು. ರೈತರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಮಾತನಾಡಲೂ ಸಂಸ್ಥೆ ಅವಕಾಶ ಒದಗಿಸಿದೆ.

‘ಫ್ರೆಶ್ ಬಜಾರ್‌’ ಎಂಬ ಹೆಸರಿನೊಂದಿಗೆ 2017ರ ಫೆಬ್ರುವರಿಯಲ್ಲಿ ನೂತನ ಯೋಜನೆಯೊಂದನ್ನು ಸಂಸ್ಥೆ ಆರಂಭಿಸಿತ್ತು. ರೈತರನ್ನು ಮಳಿಗೆಗಳಿಗೆ ಕರೆಸಿ ಗ್ರಾಹಕರೊಂದಿಗೆ ಸಂವಾದ ಸಾಧಿಸಿತ್ತು. ಅದರ ಮುಂದುವರೆದ ಭಾಗವಾಗಿ ಈ ವರ್ಷದ ಮಾವಿನ ಋತುವಿನಲ್ಲಿ ಫ್ರೆಶ್‌ ಬಜಾರ್ ಹೆಸರಿನಲ್ಲಿಯೇ ಮಾವನ್ನು ಬೆಳೆಯುವ ರೈತರು, ಹಾಗೂ ತೋಪುಗಳನ್ನು ಗ್ರಾಹಕರಿಗೆ ಪರಿಚಯಿಸುತ್ತಿದೆ.

‘6 ಮತ್ತು 12 ರತ್ನಗಿರಿ ಮಾವಿನ ಹಣ್ಣುಗಳಿರುವ ಬಾಕ್ಸ್‌ಗಳ ಮೇಲೆ ಅದನ್ನು ಬೆಳೆದ ರೈತರ ಹೆಸರು, ವಿಳಾಸವಿರುತ್ತದೆ. ಸದ್ಯ ಮಹಾರಾಷ್ಟ್ರದ ರತ್ನಗಿರಿ ರೈತರನ್ನು ಮಾತ್ರ ಈ ಯೋಜನೆಗೆ ಒಳಪಡಿಸಲಾಗಿದೆ. ಮುಂದಿನ ವರ್ಷಗಳಿಂದ ಕೋಲಾರ, ಚಿಕ್ಕಾಬಳ್ಳಾಪುರ ಸೇರಿದಂತೆ ರಾಜ್ಯದ ವಿವಿಧೆಡೆಗಳ ರೈತರನ್ನು ಈ ಪ್ರಕ್ರಿಯೆಗೆ ಸೇರಿಸಿಕೊಳ್ಳಲಾಗುವುದು’ ಎನ್ನುತ್ತಾರೆ ಸಂಸ್ಥೆಯ ಸಪ್ಲೈ ಚೈನ್‌ ಆಪರೇಟರ್‌ ನಿರ್ದೇಶಕಿ ಸುಮಾ.

‘ಕಳೆದ 5 ವರ್ಷಗಳಿಂದ ಸಂಸ್ಥೆ ರೈತರೊಂದಿಗೆ ನೇರ ಸಂಪರ್ಕ ಹೊಂದಿದೆ. ಸಾವಯವ ಕೃಷಿಕರನ್ನು ಬೆಂಬಲಿಸುವ ಉದ್ದೇಶದಿಂದ ಸಾವಯವ ಪದ್ಧತಿಯಲ್ಲಿ ಬೆಳೆದ ಮಾವಿನ ಹಣ್ಣುಗಳನ್ನು ಖರೀದಿಸುತ್ತಿದ್ದೇವೆ. ಆದರೆ ಈ ವರ್ಷ ಹೊಸ ಪ್ರಯತ್ನ ಮಾಡಲು ಯೋಚಿಸಿದಾಗ ರೈತರು ಮತ್ತು ಗ್ರಾಹಕರ ನಡುವಿನ ಸಂಪರ್ಕ ಸೇತುವಾಗಿ ಕಾರ್ಯನಿರ್ವಹಿಸಲು ನಿರ್ಧರಿಸಿದೆವು’ ಎಂದು ಮಾಹಿತಿ ನೀಡುತ್ತಾರೆ ಅವರು.

ಮಾವಿನ ಬಾಕ್ಸ್‌ಗಳಲ್ಲಿರುವ ಕರಪತ್ರಗಳು ಕೃಷಿಯನ್ನು ಆರಂಭಿಸ ಬಯಸುವ ಕೃಷಿಕರಿಗೆ ಕೈದೀವಿಗೆಯಂತಿದೆ. ಬಾಕ್ಸ್‌ಗಳ ಮೇಲೆ ರೈತರ ಸಂಪೂರ್ಣ ವಿಳಾಸ ಇರುತ್ತದೆ. ಆಸಕ್ತರು ರೈತರ ತೋಟಗಳಿಗೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಬಹುದು.

ಬಾಕ್ಸ್‌ ಒಳಗಡೆ ಇರುವ ಪೋಸ್ಟ್‌ ಕಾರ್ಡ್‌ನಲ್ಲಿ ‘ಟಾಟಾ ಟೆಸ್ಕೊ’ ಸಂಸ್ಥೆಯ ವಿಳಾಸವಿರುವುದರಿಂದ ಗ್ರಾಹಕರು ಬರೆದ ಪತ್ರಗಳು ಮೊದಲು ಕಚೇರಿ ತಲುಪುತ್ತವೆ. ನಂತರ ಸಂಸ್ಥೆಯೇ ಅದನ್ನು ಗ್ರಾಹಕರಿಗೆ ತಲುಪಿಸುತ್ತದೆ. ಸಂಸ್ಥೆಯ ಸಾಮಾಜಿಕ ಮಾಧ್ಯಮಗಳು ಹಾಗೂ ಜಾಲತಾಣಗಳ ಮೂಲಕ ಗ್ರಾಹಕರು ತಾವು ಕಳುಹಿಸಿದ ಪ್ರತಿಕ್ರಿಯೆ ರೈತರನ್ನು ತಲುಪಿದೆಯೇ ಎನ್ನುವುದನ್ನು ಖಾತರಿಪಡಿಸಿಕೊಳ್ಳಬಹುದು.

‘ಸದ್ಯ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ವ್ಯಾಪಾರದಲ್ಲಿಯೂ ಲಾಭವಾಗಿದ್ದು ಕಳೆದ ವರ್ಷಕ್ಕೆ ಹೋಲಿಸಿದರೆ ಶೇ 25 ವ್ಯಾಪಾರದಲ್ಲಿ ಏರಿಕೆಯಾಗಿದೆ. ಮಾತ್ರವಲ್ಲದೆ ರೈತರು ಹಾಗೂ ಗ್ರಾಹಕರ ನಡುವೆ ನೂತನ ಬಾಂಧವ್ಯ ಸಾಧ್ಯವಾಗಿದೆ. ಕರ್ನಾಟಕ ಮತ್ತು ಮಹರಾಷ್ಟ್ರದ 200 ರೈತರೊಂದಿಗೆ ನೇರ ಸಂಪರ್ಕ ಹೊಂದಿದೆ. ಮಳಿಗೆಗಳಲ್ಲಿ ಸಾವಯವ ಹಣ್ಣುಗಳು ದೊರೆಯುತ್ತವೆ’ ಎನ್ನುತ್ತಾರೆ ಸುಮಾ.

ನಗರದಲ್ಲಿರುವ ಎಲ್ಲ ಸ್ಟಾರ್‌ ಬಜಾರ್ ಮಾರುಕಟ್ಟೆಯಲ್ಲಿಯೂ ಈ ಬಾಕ್ಸ್‌ಗಳು ಲಭ್ಯ. ಸದ್ಯ ನಗರದಲ್ಲಿ 18 ಮಳಿಗೆಗಳಿವೆ. 6 ರತ್ನಗಿರಿ ಮಾವಿನ ಹಣ್ಣುಗಳಿರುವ ಬಾಕ್ಸ್‌ ಬೆಲೆ ₹ 399  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT