ದೇವರ ಗರ್ಭಗುಡಿ ಮೇಲ್ಚಾವಣಿಗೆ ಸುವರ್ಣಾಚ್ಛಾದನ

ಮಂಗಳವಾರ, ಮಾರ್ಚ್ 26, 2019
22 °C
ಶ್ರೀಕೃಷ್ಣನ ದರ್ಶನ, ಪೂಜೆ, ಉತ್ಸವಗಳಿಗೆ ಅಡ್ಡಿ ಇಲ್ಲ: ಪಲಿಮಾರು ಶ್ರೀ

ದೇವರ ಗರ್ಭಗುಡಿ ಮೇಲ್ಚಾವಣಿಗೆ ಸುವರ್ಣಾಚ್ಛಾದನ

Published:
Updated:

ಉಡುಪಿ: ಶ್ರೀಕೃಷ್ಣ ಮಠದಲ್ಲಿರುವ ದೇವರ ಗರ್ಭಗುಡಿ ಪ್ರಾಂಗಣದ ಮೇಲ್ಛಾವಣಿಗೆ ಬಂಗಾರದ ಮಾಡು ಹೊದಿಸುವ ‘ಸುವರ್ಣ ಗೋಪುರ’ ಯೋಜನೆಗೆ ಬುಧವಾರ ಚಾಲನೆ ನೀಡಲಾಯಿತು.

ಮಧ್ಯಾಹ್ನ 12.10ರ ಶುಭಮುಹೂರ್ತದಲ್ಲಿ ಪರ್ಯಾಯ ಪಲಿಮಾರು ವಿದ್ಯಾಧೀಶ ಶ್ರೀ, ಕೃಷ್ಣಾಪುರ ಮಠದ ವಿದ್ಯಾಸಾಗರ ತೀರ್ಥರು, ಕಾಣಿಯೂರು ಮಠದ ವಿದ್ಯಾವಲ್ಲಭ ತೀರ್ಥರು, ಅದಮಾರು ಮಠದ ಕಿರಿಯ ಯತಿಗಳಾದ ಈಶಪ್ರಿಯ ಶ್ರೀಗಳ ಸಮ್ಮುಖದಲ್ಲಿ ಧಾರ್ಮಿಕ ವಿಧಿವಿಧಾನಗಳು ನೆರವೇರಿತು.

ಆರಂಭದಲ್ಲಿ ಯೋಜನೆ ಸುಸೂತ್ರವಾಗಿ ಅನುಷ್ಠಾನವಾಗಲಿ ಎಂದು ದೇವರಲ್ಲಿ ಅನುಜ್ಞೆ (ಪ್ರಾರ್ಥನೆ) ಪ್ರಕ್ರಿಯೆ ನಡೆಯಿತು. ಇದಕ್ಕೂ ಮುನ್ನ ಚಿತ್ರಾಪುರ ಗೋಪಾಲಕೃಷ್ಣ ಆಚಾರ್, ಹೆರ್ಗ ವೇದವ್ಯಾಸ ಭಟ್, ಅವಧಾನಿ ಸುಬ್ರಹ್ಮಣ್ಯ ಭಟ್ ಗುಂಡಿಬೈಲ್, ರಾಮಮೂರ್ತಿ ಭಟ್ ನೇತೃತ್ವದಲ್ಲಿ ನರಸಿಂಹ ಮಂತ್ರ ಹೋಮ, ಶ್ರೀಕೃಷ್ಣ ಮಂತ್ರ ಹೋಮ, ಶ್ರೀವಿಷ್ಣು ಗಾಯತ್ರಿ ಮಂತ್ರ ಹೋಮ, ಶ್ರೀತತ್ವ ಮಂತ್ರ ಹೋಮಗಳು ನೆರವೇರಿದವು. 

ಯತಿಗಳು ದೇವರಲ್ಲಿ ಅಪರಾಧ ಕೃಚ್ಛ್ರದ ಅಂಗವಾಗಿ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಭಕ್ತರಿಂದ ಮುಷ್ಠಿ ದ್ರವ್ಯ ಸಮರ್ಪಣೆ ನಡೆಯಿತು. ಅನುಜ್ಞಾ ಸ್ವೀಕರಣ ಪ್ರಸಾದ ಚೈತನ್ಯ ಸಂಕೋಚ ವಿಧಿವಿಧಾನಗಳು ನೆರವೇರಿದವು. ಬಳಿಕ ಶಾಸ್ತ್ರೋಕ್ತವಾಗಿ ಹೋರಿಯ ಬಾಲಕ್ಕೆ ದರ್ಬೆಯ ಹಗ್ಗವನ್ನು ಕಟ್ಟಿ ಶಿಖರವನ್ನು ಎಳೆಯುವ ಸುಪಿಕಾವರೋಹಣ ನಡೆಯಿತು.

ಈ ಸಂದರ್ಭ ಪಲಿಮಾರು ಮಠದ ವಿದ್ಯಾಧೀಶ ಶ್ರೀಗಳು ಮಾತನಾಡಿ, ಸುವರ್ಣ ಗೋಪುರ ನಿರ್ಮಾಣ ಕಾರ್ಯ ಮೇ ಅಂತ್ಯ ಅಥವಾ ಜೂನ್‌ ಆರಂಭದಲ್ಲಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಎಲ್ಲ ಕಾರ್ಯಗಳು ಮುಗಿದ ಬಳಿಕ ಶಿಖರ ಪ್ರತಿಷ್ಠೆ ಹಾಗೂ ಕುಂಭಾಭಿಷೇಕ ನೆರವೇರಲಿದೆ ಎಂದು ತಿಳಿಸಿದರು.

ಗರ್ಭಗುಡಿಯ ಮೇಲಿರುವ ಕಲಶ ತೆಗೆಯಲಾಗುತ್ತಿದ್ದು, ಎಲ್ಲರಿಗೂ ಕ್ಷೇಮವಾಗಬೇಕು ಎಂಬ ನಿಟ್ಟಿನಲ್ಲಿ ದೇವರಿಗೆ ಮುಷ್ಠಿಕಾಣಿಕೆ ಸಲ್ಲಿಸಲು ಅವಕಾಶ ನೀಡಲಾಗಿದೆ. ಭಕ್ತರು ಮುಷ್ಠಿಯಲ್ಲಿ ದೇವರಿಗೆ ಕಾಣಿಕೆ ಸಮರ್ಪಿಸಿದರೆ ತಮ್ಮನ್ನೇ ಸಮರ್ಪಿಸಿಕೊಂಡಂತೆ. 2ದಿನ ಮುಷ್ಠಿಕಾಣಿಕೆಗೆ ಅವಕಾಶವಿದ್ದು, ಭಕ್ತರು ದೇವರ ಅನುಗ್ರಹ ಪಡೆಯಬೇಕು ಎಂದರು.

ಮಠದ ದಿವಾನರಾದ ವೇದವ್ಯಾಸ ತಂತ್ರಿಗಳು ಉಪಸ್ಥಿತರಿದ್ದರು.

ಶ್ರೀಕೃಷ್ಣನ ದರ್ಶನಕ್ಕೆ ತೊಂದರೆ ಇಲ್ಲ
ಶ್ರೀಕೃಷ್ಠನ ದರ್ಶನಕ್ಕೆ ಬರುವ ಭಕ್ತರಿಗೆ ಯಾವ ತೊಂದರೆಗಳು ಆಗುವುದಿಲ್ಲ. ಹಿಂದಿನಿಂತೆಯೇ ಕನಕನ ಕಿಂಡಿಯ ಮೂಲಕ ಅಖಂಡ ಕಾಲ ದೇವರ ದರ್ಶನ ಮಾಡಬಹುದು. ಪೂಜೆ, ಉತ್ಸವಗಳು ಎಂದಿನಂತೆ ಸಾಂಗವಾಗಿ ನೆರವೇರಲಿವೆ. ಆದರೆ, ಕಾಮಗಾರಿ ನಡೆಯುವ ಸಂದರ್ಭ ಮಾತ್ರ ಗರ್ಭಗುಡಿಯನ್ನು ಮುಚ್ಚಲಾಗುತ್ತದೆ. ಉಳಿದ ಸಮಯದಲ್ಲಿ ಭಕ್ತರಿಗೆ ಸದಾ ತೆರೆದಿರುತ್ತದೆ ಎಂದು ಪಲಿಮಾರು ಶ್ರೀಗಳು ಸ್ಪಷ್ಟಪಡಿಸಿದರು.

‘ಹೋಮ ಹವನ’
ಸುವರ್ಣಗೋಪುರ ನಿರ್ಮಾಣ ಕಾರ್ಯ ಶೇ 70ರಷ್ಟು ಪೂರ್ಣಗೊಂಡಿದೆ. ಮಾಡಿಗೆ ಚಿನ್ನ ಹೊದಿಸುವ ಕಾರ್ಯಕ್ಕೆ ಚಾಲನೆ ಸಿಕ್ಕಿದೆ. ದೇವಸ್ಥಾನ ಅಥವಾ ಮಠದಲ್ಲಿ ಜೀರ್ಣೋದ್ಧಾರ ಕೆಲಸ ಮಾಡಬೇಕಾದರೆ ಧಾರ್ಮಿಕ ವಿಧಿವಿಧಾನಗಳನ್ನು ನಡೆಸಬೇಕು. ಅದರಂತೆ, ದೇವರಲ್ಲಿ ಪ್ರಾರ್ಥನೆ, ವಾಸ್ತು ಪೂಜೆ, ಪ್ರಾಯಶ್ಚಿತ ಹೋಮಗಳನ್ನು ನೆರವೇರಿಸಲಾಯಿತು ಎಂದು ಅವಧಾನಿ ಸುಬ್ರಹ್ಮಣ್ಯ ಭಟ್ ಗುಂಡಿಬೈಲ್ ಹೇಳಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !