ಗುರುವಾರ , ಅಕ್ಟೋಬರ್ 29, 2020
28 °C
ಸ್ವರ್ಣಾರಾಧನ ಕಾರ್ಯಕ್ರಮದಲ್ಲಿ ಸ್ವರ್ಣಾ ನದಿಗೆ ಆರತಿ ಮಾಡಿದ ಜಿಲ್ಲಾಧಿಕಾರಿ

‘ನದಿ ಮೂಲಗಳ ರಕ್ಷಣೆ ಸಮಾಜದ ಹೊಣೆ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ನದಿ ಮೂಲಗಳ ಉಳಿಸುವ ಹಾಗೂ ನದಿಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವ ಜವಾಬ್ದಾರಿ ಸಮಾಜದ್ದು. ಸುಸ್ಥಿರ ಅಭಿವೃದ್ಧಿಗೆ ನದಿ ಮೂಲಗಳ ಸಂರಕ್ಷಣೆ ಅಗತ್ಯ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಹೇಳಿದರು.

ಶುಕ್ರವಾರ ಮಣಿಪಾಲದ ಶೀಂಬ್ರಾ ಮಹಾ ಗಣಪತಿ ದೇವಸ್ಥಾನದ ಆವರಣದಲ್ಲಿ ಪರ್ಯಾವರಣ ಸಂರಕ್ಷಣಾ ಗತಿವಿಧಿ, ಸಂವೇದನಾ ಫೌಂಡೇಶನ್ ಹಾಗೂ ಸ್ವಚ್ಛ ಭಾರತ್ ಫ್ರೆಂಡ್ಸ್ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಸ್ವರ್ಣಾರಾಧನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸ್ವರ್ಣಾ ನದಿ ಉಡುಪಿ ನಗರ, ಕಾರ್ಕಳ ಹಾಗೂ ಹಲವು ಗ್ರಾಮಗಳಿಗೆ ಕುಡಿಯುವ ನೀರು ಪೂರೈಸುವ ಜೀವ ನದಿ. ಈಚೆಗೆ ಸುರಿದ ಭಾರಿ ಮಳೆಗೆ ಸ್ವರ್ಣೆಯಲ್ಲಿ ತುಂಬಿದ್ದ ಕಲ್ಮಶ ಕೊಚ್ಚಿಹೋಗಿ ನದಿ ಶುಭ್ರವಾಗಿದೆ. ನದಿ ಕಲುಷಿತವಾಗದಂತೆ, ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೀರಿಗೆ ಅಭಾವ ಎದುರಾಗದಂತೆ ಎಚ್ಚರ ವಹಿಸಬೇಕು ಎಂದು ಸಲಹೆ ನೀಡಿದರು.

ಉಡುಪಿ ನಗರದೊಳಗೆ ಹರಿಯುವ ಇಂದ್ರಾಣಿ ಕೂಡ ಕಲುಷಿತವಾಗಿದ್ದು, ಅದನ್ನು ಮೂಲಸ್ವರೂಪಕ್ಕೆ ತರಲು ನಗರಸಭೆ ಶ್ರಮಿಸುತ್ತಿದೆ. ನಗರದ ತ್ಯಾಜ್ಯ ಇಂದ್ರಾಣಿಯ ಒಡಲು ಸೇರದಂತೆ ಕ್ರಮ ಕೈಗೊಳ್ಳಲಾಗುವುದು. ಇದಕ್ಕಾಗಿ ನಗರಕ್ಕೆ ಹೊಸ ಒಳಚರಂಡಿ ಯೋಜನೆ ಅನುಷ್ಠಾನಕ್ಕೆ ₹ 400 ಕೋಟಿ ಪ್ರಸ್ತಾವ ಸಿದ್ಧಪಡಿಸಲಾಗಿದೆ. ಶೀಘ್ರವೇ ಯೋಜನೆ ಅನುಷ್ಠಾನಕ್ಕೆ ಬರಲಿದೆ ಎಂದರು.

‘ಕೋವಿಡ್‌ ಸೋಂಕಿಗೆ ಸದ್ಯಕ್ಕೆ ಲಸಿಕೆ ಸಿಗುವುದು ಕಷ್ಟ. ಲಸಿಕೆ ತಯಾರಾಗುವವರೆಗೂ ಹಿರಿಯರ ರಕ್ಷಣೆಯ ಜವಾಬ್ದಾರಿ ನಮ್ಮದು. ತುರ್ತು ಸಂದರ್ಭ ಹೊರತುಪಡಿಸಿ ಹಿರಿಯರು ಮನೆಯಿಂದ ಹೊರಗೆ ಹೋಗದಂತೆ, ಸೋಂಕು ತಗುಲದಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಜಿಲ್ಲೆಯಲ್ಲಿ ಕೋವಿಡ್‌ ಸೋಂಕು ತಡೆಗೆ ಜಿಲ್ಲಾಡಳಿತ ಹಾಗೂ ವೈದ್ಯರು 6 ತಿಂಗಳಿನಿಂದ ಶ್ರಮಿಸುತ್ತಿದ್ದಾರೆ. ಪರಿಣಾಮ, ರಾಜ್ಯದಲ್ಲೇ ಉಡುಪಿ ಜಿಲ್ಲೆಯಲ್ಲಿ ಸೋಂಕಿತರ ಸಾವಿನ ಪ್ರಮಾಣ ಕಡಿಮೆ ಇದೆ. ಇದರ ನಡುವೆಯೂ ಕೆಲವರು ಸೋಂಕಿನ ಬಗ್ಗೆ ವದಂತಿ ಹಬ್ಬಿಸುತ್ತಿರುವುದರಿಂದ ಗಂಭೀರ ಸ್ಥಿತಿಗೆ ತಲುಪಿದ ಬಳಿಕ ಆಸ್ಪತ್ರೆಗಳಿಗೆ ಬರುವವರು ಹೆಚ್ಚಾಗಿದ್ದಾರೆ ಎಂದರು.

ಕಾರ್ಯಕ್ರಮಕ್ಕೂ ಮುನ್ನ ಸ್ವರ್ಣಾ ನದಿಗೆ ಆರತಿ ಮಾಡಿ, ನದಿ ತೀರದಲ್ಲಿ ಜಿಲ್ಲಾಧಿಕಾರಿ ಗಿಡಗಳನ್ನು ನೆಟ್ಟರು. ಶೀಂಬ್ರ ಗಣಪತಿ ದೇವಸ್ಥಾನದ ಟ್ರಸ್ಟಿ ಅಜಿತ್ ಪೈ, ನಗರಸಭಾ ಸದಸ್ಯ ವಿಜಯ್ ಕೊಡವೂರು, ಡಾ. ನಾರಾಯಣ ಶೆಣೈ, ಕೆ.ಪ್ರಕಾಶ್ ಶೆಣೈ,  ಜಯರಾಮ್ ಬೊಳ್ಳಾಜೆ, ತೋನ್ಸೆ ಗಣೇಶ್ ಶೆಣೈ, ಶ್ಯಾಮಪ್ರಸಾದ್ ಕುಡ್ವ, ಜಗದೀಶ್ ಶೆಟ್ಟಿ, ಮೊಕ್ತೇಸರ ರಮೇಶ್, ಶಿವತ್ತಾಯ ಇದ್ದರು. ಸ್ವಚ್ಛಭಾರತ್ ಫ್ರೆಂಡ್ಸ್‌ನ ರಾಘವೇಂದ್ರ ಪ್ರಭು ಕರ್ವಾಲು ಸ್ವಾಗತಿಸಿದರು. ಗಣೇಶ್ ಪ್ರಸಾದ್ ವಂದಿಸಿದರು. ಪ್ರಕಾಶ್ ಮಲ್ಪೆ ಕಾರ್ಯಕ್ರಮ ನಿರೂಪಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.