ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಂದಾಪುರ | ಕಾಲುಗಳಿಗೆ ಸರಪಳಿ ಕಟ್ಟಿಕೊಂಡು ನದಿಯಲ್ಲಿ 25 ಕಿ.ಮೀ. ಈಜಿದ

ಗಂಗೊಳ್ಳಿಯಲ್ಲಿ ಗುರಿ ಮುಟ್ಟಿದ ಈಜುಗಾರನನ್ನು ಸ್ವಾಗತಿಸಿ, ಅಭಿನಂದಿಸಿದ ನಾಗರಿಕರು
Last Updated 2 ಡಿಸೆಂಬರ್ 2019, 20:00 IST
ಅಕ್ಷರ ಗಾತ್ರ

ಕುಂದಾಪುರ: ಕಾಲುಗಳಿಗೆ ಸರಪಳಿ ಬಿಗಿದುಕೊಂಡು ನಿರಂತರ 3 ಗಂಟೆ 5 ನಿಮಿಷಗಳ ಕಾಲ ಪಂಚಗಂಗಾವಳಿ ನದಿಯಲ್ಲಿ ಅಂದಾಜು 25 ಕಿ.ಮೀ. ದೂರ ಈಜುವ ಮೂಲಕ ಭಂಡಾರ್‌ಕಾರ್ಸ್‌ ಕಾಲೇಜಿನ ಪ್ರಥಮ ವರ್ಷದ ಪದವಿ ವಿದ್ಯಾರ್ಥಿ ಸಂಪತ್‌ ಡಿ.ಖಾರ್ವಿ ದಾಖಲೆ ನಿರ್ಮಿಸಿದ್ದಾರೆ.

ಸ್ಥಳೀಯ ಖಾರ್ವಿಕೇರಿಯ ನಿವಾಸಿ ದೇವರಾಯ್‌ ಖಾರ್ವಿ ಅವರ ಪುತ್ರ ಸಂಪತ್‌ ತನ್ನ ಕಾಲುಗಳಿಗೆ ಸರಪಳಿ ಬಿಗಿದುಕೊಂಡು ನದಿಯಲ್ಲಿ ಈಜುವ ಸಾಹಸಕ್ಕೆ ಮುಂದಾಗಿದ್ದರು. ಭಾನುವಾರ ಮಧ್ಯಾಹ್ನ 2ಕ್ಕೆ ಬಸ್ರೂರು ರೈಲ್ವೆ ಸೇತುವೆ ಬಳಿಯ ವರಾಹಿ ನದಿಯ ಬಳಿಯಲ್ಲಿ ಖಾರ್ವಿಕೇರಿಯ ಶ್ರೀ ಮಹಾಕಾಳಿ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಪ್ರಕಾಶ್‌ ಖಾರ್ವಿ ಅವರಿಂದ ಸರಪಳಿಯನ್ನು ಬಿಗಿಸಿಕೊಂಡು ನದಿಗೆ ಇಳಿದು, ಈಜಲು ಆರಂಭಿಸಿದ್ದರು.

ಬಸ್ರೂರಿನಿಂದ ಗಂಗೊಳ್ಳಿಗೆ ಸಾಗುವ ಪಂಚಗಂಗಾವಳಿ ನದಿಯಲ್ಲಿ 3 ಗಂಟೆ 5 ನಿಮಿಷಗಳ ಕಾಲ ಸುಲಲಿತವಾಗಿ ಈಜಿದ ಅವರು ಸಂಜೆ 5 ಗಂಟೆ 5 ನಿಮಿಷಕ್ಕೆ 25 ಕಿ.ಮೀ. ದೂರದ ಗಂಗೊಳ್ಳಿ ಬಂದರು ತಲುಪಿದರು. ಸರಪಳಿ ಬಿಗಿದುಕೊಂಡು ನದಿಯಲ್ಲಿ ಈಜುವ ಸಾಹಸ ಮಾಡಿದ್ದ ಅವರಿಗೆ ತಂದೆ ದೇವರಾಯ್‌ ಖಾರ್ವಿ, ಸ್ಥಳೀಯರಾದ ಸುಬ್ರಹ್ಮಣ್ಯ ಖಾರ್ವಿ, ಮಣಿ ಖಾರ್ವಿ, ರಂಜಿತ್ ಖಾರ್ವಿ, ಹರೀಶ ಖಾರ್ವಿ ಮುಂತಾದವರು ರಕ್ಷಣಾ ವ್ಯೂಹವನ್ನು ಮಾಡಿ ಅವರನ್ನು ಹಿಂಬಾಲಿಸಿದ್ದರು.

ನದಿಯಲ್ಲಿ ಈಜುತ್ತಾ ಸಾಗುತ್ತಿದ್ದ ಸಂಪತ್‌ ಅವರನ್ನು ದೋಣಿಯಲ್ಲಿ ಸಾಗಿದ ಅಭಿಮಾನಿಗಳು ಚೆಂಡೆ, ಡೋಲು, ಜಾಗಟೆಗಳನ್ನು ಬಡಿಯವ ಮೂಲಕ ಹುರಿದುಂಬಿಸಿದರು. ಸಂಪತ್‌ ಅವರ ಸಾಹಸವನ್ನು ನೋಡಲು ಪಂಚಗಂಗಾವಳಿ ತೀರದಲ್ಲಿ ಹಾಗೂ ಗಂಗೊಳ್ಳಿಯಲ್ಲಿ ದೊಡ್ಡ ಸಂಖ್ಯೆಯಲ್ಲಿ ಸಾರ್ವಜನಿಕರು ಸೇರಿದ್ದರು.

ಗಂಗೊಳ್ಳಿಯಲ್ಲಿ ಸನ್ಮಾನ:ಪಂಚಗಂಗಾವಳಿ ನದಿಯಲ್ಲಿ ಯಶಸ್ವಿಯಾಗಿ ಈಜು ನಡೆಸಿ ಗಂಗೊಳ್ಳಿ ಬಂದರು ತಲುಪಿದ ಸಂಪತ್‌ ಅವರ ಕಾಲುಗಳಿಗೆ ತೊಡಿಸಿದ ಬಂಧನವನ್ನು ಗಂಗೊಳ್ಳಿ ಠಾಣಾಧಿಕಾರಿ ವಾಸಪ್ಪ ನಾಯ್ಕ್ ಬಿಡಿಸಿ, ಅಭಿನಂದಿಸಿದರು. ಈ ಸಂದರ್ಭದಲ್ಲಿ ಯುವ ಬ್ರಿಗೇಡ್ ಕುಂದಾಪುರದ ವತಿಯಿಂದ ಸನ್ಮಾನ ಮಾಡಲಾಯಿತು.

ಮನೆಯವರೇ ಸ್ಫೂರ್ತಿ: ಸಂಪತ್‌ ಅವರ ಈ ಸಾಹಸಕ್ಕೆ ಸ್ಫೂರ್ತಿಯಾದವರು ಅವರ ತಂದೆ ದೇವರಾಯ್‌ ಖಾರ್ವಿ ಹಾಗೂ ಚಿಕ್ಕಪ್ಪ ದಯಾನಂದ ಖಾರ್ವಿ. ಪಂಚಗಂಗಾವಳಿ ನದಿ ತೀರಕ್ಕೆ ಹೊಂದಿಕೊಂಡಿರುವ ಖಾರ್ವಿಕೇರಿಯ ನಿವಾಸಿಯಾದ ಅವರಿಗೆ ಬಾಲ್ಯದಿಂದಲೇ ಈಜುವ ಹವ್ಯಾಸ ಇತ್ತು. ತಂದೆ ಹಾಗೂ ಚಿಕ್ಕಪ್ಪನ ಗರಡಿಯಲ್ಲಿ ಈಜಿನ ಪಟ್ಟುಗಳನ್ನು ಅಭ್ಯಾಸ ಮಾಡಿಕೊಂಡಿದ್ದ ಅವರು ತಮ್ಮ ಬಿಡುವಿನ ವೇಳೆಯಲ್ಲಿ ಸ್ಥಳೀಯ ಮಕ್ಕಳಿಗೂ ಈಜು ಕಲಿಸಿಕೊಡುತ್ತಿದ್ದಾರೆ. ಪಂಚಗಂಗಾವಳಿಯ ನದಿಯಲ್ಲಿ 25 ಕಿ.ಮೀ ದೂರವನ್ನು ಸಾಗುವ ಮೂಲಕ ಈಜು ಕಲಿತ ನದಿಗೆ ಭಾನುವಾರ ಗೌರವ ಸಲ್ಲಿಸಿದ್ದಾರೆ.

ಈ ಸಂದರ್ಭದಲ್ಲಿ ಸರ್ಕಾರಿ ಆಸ್ಪತ್ರೆ ವೈದ್ಯ ಡಾ.ವಿಜಯ ಶಂಕರ್, ಕಾರ್ಯಕ್ರಮದ ಸಂಘಟಕ, ಪತ್ರಕರ್ತ ಮಝರ್‌, ಈಜು ತರಬೇತುದಾರ ಅಶೋಕ್‌ ಬಸ್ರೂರು, ದೈಹಿಕ ಶಿಕ್ಷಣ ಶಿಕ್ಷಕ ಆನಂದ ಪೂಜಾರಿ, ತಲ್ಲೂರು ಗ್ರಾಮ ಪಂಚಾಯಿತಿ ಸದಸ್ಯ ಸುನೀಲ್ ಖಾರ್ವಿ, ಹರ್ಷವರ್ಧನ್, ಅಶೋಕ್ ಕೆರೆಕಟ್ಟೆ, ಮಾನಸ ಜ್ಯೋತಿಯ ಮುಖ್ಯಸ್ಥೆ ಶೋಭಾ ಮಧ್ಯಸ್ಥ, ವಿನೋದ್ ಶಾಂತಿನಿಕೇತನ್, ಗುರುರಾಜ್ ಖಾರ್ವಿ ಇದ್ದರು.

‘ಕೈ–ಕಾಲುಗಳಿಗೆ ಸರಪಳಿ ಕಟ್ಟಿಕೊಂಡು ಈಜುವ ಆಸೆ’

‘ಬಾಲ್ಯದಿಂದಲೇ ಈಜಿನ ಬಗ್ಗೆ ಅಪಾರ ಒಲವು ಬೆಳೆಸಿಕೊಂಡಿದ್ದೆ. ಅವಕಾಶ ಸಿಕ್ಕಾಗಲೆಲ್ಲಾ ಗಂಟೆಗಟ್ಟಲೆ ನೀರಿನಲ್ಲಿ ಕಾಲ ಕಳೆಯುತ್ತಿದ್ದೆ. ಆದರೆ, ಈ ಸಾಧನೆಗಾಗಿ ಕೇವಲ 10 ದಿನಗಳ ಕಾಲ ಅಭ್ಯಾಸ ಮಾಡಿದ್ದೆ. ಮುಂದಿನ ದಿನಗಳಲ್ಲಿ ಕೈ ಕಾಲುಗಳಿಗೆ ಸರಪಳಿ ಕಟ್ಟಿಕೊಂಡು ಈಜುವ ಮೂಲಕ ಇಂಡಿಯಾ ಬುಕ್‌ ಆಫ್‌ ರೆಕಾರ್ಡ್‌ ಮಾಡಬೇಕು ಎನ್ನುವ ಗುರಿ ಇದೆ’ ಎನ್ನುತ್ತಾರೆ ಸಂಪತ್‌ ಖಾರ್ವಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT