ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬುಲ್‌ಟ್ರಾಲ್‌ ಮೀನುಗಾರಿಕೆ ವಿರುದ್ಧ ಕ್ರಮಕೈಗೊಳ್ಳಿ

ಬೇಸಗೆ ಸಾಂಪ್ರದಾಯಿಕ ನಾಡದೋಣಿ ಮೀನುಗಾರರ ಪ್ರತಿಭಟನೆ
Last Updated 4 ಅಕ್ಟೋಬರ್ 2019, 14:52 IST
ಅಕ್ಷರ ಗಾತ್ರ

ಉಡುಪಿ: ಕೇಂದ್ರ ಸರ್ಕಾರ ಅವೈಜ್ಞಾನಿಕ ಅಸಾಂಪ್ರದಾಯಿಕ ಮೀನುಗಾರಿಕೆಯನ್ನು ನಿಷೇಧಿಸಿದ್ದರೂ ಬುಲ್‌ ಟ್ರಾಲ್‌ ಮೀನುಗಾರಿಕೆಗೆ ಎಗ್ಗಿಲ್ಲದೆ ನಡೆಯುತ್ತಿದೆ ಎಂದು ಬೇಸಿಗೆ ಸಾಂಪ್ರದಾಯಿಕ ನಾಡದೋಣಿ ಮೀನುಗಾರರ ಸಂಘ ಶುಕ್ರವಾರ ಮಲ್ಪೆ ಬಂದರಿನ ಮೀನುಗಾರಿಕಾ ಇಲಾಖೆ ಎದುರು ಪ್ರತಿಭಟನೆ ನಡೆಸಿತು.

ಸಾಂಪ್ರದಾಯಿಕ ಮೀನುಗಾರರು ಆಳಸಮುದ್ರಕ್ಕೆ ತೆರಳಿ ಮೀನುಗಾರಿಕೆ ಮಾಡಲು ಸಾಧ್ಯವಿಲ್ಲ. ಹಾಗಾಗಿ, ಸಮುದ್ರದ ಬದಿಯಲ್ಲಿ ನಿರ್ಧಿಷ್ಟ ಪ್ರದೇಶದಲ್ಲಿ ಮಾತ್ರ ಮೀನುಗಾರಿಕೆ ಮಾಡುತ್ತೇವೆ. ಆದರೆ, ಈಗ ತ್ರಿಸೆವೆಂಟಿ ಬೋಟ್‌ಗಳು ಸಾಂಪ್ರದಾಯಿಕ ಮೀನುಗಾರಿಕೆ ನಡೆಯುವ ಜಾಗವನ್ನು ಅತಿಕ್ರಮಿಸಿ ಮೀನುಗಾರಿಕೆ ಮಾಡುತ್ತಿದ್ದಾರೆ. ಪರಿಣಾಮ ನಾಡದೋಣಿ ಮೀನುಗಾರರು ಮೀನು ಸಿಗದೆ ಬರಿಗೈಲಿ ತೀರಕ್ಕೆ ಮರಳುವಂತಾಗಿದೆ ಎಂದು ಮುಖಂಡ ಚಂದ್ರಶೇಖರ ಕರ್ಕೇರಾ ಆಕ್ರೋಶ ವ್ಯಕ್ತಪಡಿಸಿದರು.‌

ಜಿಲ್ಲೆಯಲ್ಲಿ 20,000 ಸಾವಿರಕ್ಕೂ ಹೆಚ್ಚು ಮಂದಿ ಸಾಂಪ್ರದಾಯಿಕ ಮೀನುಗಾರರು ಇದ್ದಾರೆ. ಬುಲ್ ಟ್ರಾಲ್‌ ಮೀನುಗಾರಿಕೆಯಿಂದ, ಮೀನುಗಾರಿಕೆ ಮಾಡಲಾಗದೆ ಎಲ್ಲರಿಗೂ ಸಮಸ್ಯೆಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈಚೆಗೆ ಸಮುದ್ರದಲ್ಲಿ ನಿಯಮಮೀರಿ ಬುಲ್‌ಟ್ರೋಲ್‌ ಮಾಡುತ್ತಿದ್ದ ಟ್ರಾಲ್‌ ಬೋಟ್‌ಗಳನ್ನು ಮೀನುಗಾರಿಕಾ ಇಲಾಖೆ ಹಾಗೂ ಕರಾವಳಿ ಕಾವಲುಪಡೆ ಅಧಿಕಾರಿಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಪತ್ತೆಹಚ್ಚಿದ್ದಾರೆ. ಆದರೆ, ಬೋಟ್‌ ಮಾಲೀಕರ ವಿರುದ್ಧ ಇದುವರೆಗೂ ಯಾವ ಕ್ರಮ ಜರುಗಿಸಿಲ್ಲ ಎಂದು ಮುಖಂಡ ಪ್ರವೀಣ್‌ ಅಸಮಾಧಾನ ವ್ಯಕ್ತಪಡಿಸಿದರು.

ಆಳಸಮುದ್ರ ಮೀನುಗಾರಿಕೆ ಮಾಡುವ ಬೋಟ್‌ಗಳು 12 ನಾಟಿಕಲ್ ಮೈಲಿನ ಒಳಗೆ ಮೀನು ಹಿಡಿಯುವಂತಿಲ್ಲ. ಈ ನಿಯಮಗಳನ್ನು ಗಾಳಿಗೆ ತೂರಿ ಅವೈಜ್ಞಾನಿಕವಾಗಿ ಮೀನುಗಾರಿಕೆ ನಡೆಯುತ್ತಿದೆ. ಇದರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕಾದ ಅಧಿಕಾರಿಗಳು ಮೌನ ವಹಿಸಿದ್ದಾರೆ ಎಂದು ರತ್ನಾಕರ್‌ ಕರ್ಕೇರಾ ದೂರಿದರು.

ಅಕ್ರಮ ಮೀನುಗಾರಿಕೆ ಮಾಡುವ ಬೋಟ್‌ಗಳ ಪರವಾನಗಿ ರದ್ದು ಮಾಡುವ ಅಧಿಕಾರ ಇಲಾಖೆಗಿದೆ. ಆದರೂ ಕ್ರಮ ತೆಗೆದುಕೊಳ್ಳುತ್ತಿಲ್ಲ. ಮೀನುಗಾರಿಕಾ ಇಲಾಖೆ ಸಂಕಷ್ಟದಲ್ಲಿ ಸಿಲುಕಿರುವ ನಾಡದೋಣಿ ಮೀನುಗಾರರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಎಂದು ನೋವು ತೋಡಿಕೊಂಡರು.

ಕೂಡಲೇ ಅಧಿಕಾರಿಗಳು ಬುಲ್‌ ಟ್ರಾಲ್‌ ಮೀನುಗಾರಿಕೆ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳದಿದ್ದರೆ ಅ.10ರಂದು ತೀವ್ರ ಪ್ರತಿಭಟನೆ ನಡೆಸಲಾಗುವುದು. ಅಂದು ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ರಾಜೇಶ್‌, ಲಕ್ಷ್ಮೀ ನಾರಾಯಣ, ವಾಸು ಕರ್ಕೇರಾ, ಹರೀಶ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT