ಭಾನುವಾರ, ಸೆಪ್ಟೆಂಬರ್ 19, 2021
24 °C
ರಾಷ್ಟ್ರಮಟ್ಟಕ್ಕೆ ಪ್ರಬಂಧ ಆಯ್ಕೆ: ಮರವಂತೆ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳ ಸಾಧನೆ

ಉಡುಪಿ: ಸುಸ್ಥಿರ ಜೀವನಕ್ಕೆ ಯೋಗ್ಯ ತಂತ್ರಜ್ಞಾನ ಪ್ರಬಂಧ ರಾಷ್ಟ್ರಮಟ್ಟಕ್ಕೆ ಆಯ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೈಂದೂರು: ರಾಜ್ಯ ವಿಜ್ಞಾನ ಪರಿಷತ್ ಆಶ್ರಯದಲ್ಲಿ 10 ರಿಂದ 12 ವರ್ಷದ ವಯೋಮಿತಿ ವಿದ್ಯಾರ್ಥಿಗಳಿಗಾಗಿ ನಡೆದ ಅಖಿಲ ಕರ್ನಾಟಕ ವಿಜ್ಞಾನ ಸಮಾವೇಶ –2021 ರಲ್ಲಿ ಜಿಲ್ಲಾ ಮಟ್ಟದಲ್ಲಿ ಸ್ಪರ್ಧಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದ ಮರವಂತೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳ ತಂಡ ಗ್ರಾಮೀಣ ಕಿರಿಯರ ವಿಭಾಗದಲ್ಲಿ ಮಂಡಿಸಿದ್ದ ‘ಸುಸ್ಥಿರ ಜೀವನಕ್ಕೆ ಯೋಗ್ಯ ತಂತ್ರಜ್ಞಾನ ’ ಪ್ರಬಂಧವು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದೆ.

ಶಾಲೆ ಮುಖ್ಯಶಿಕ್ಷಕ ಸತ್ಯನಾ ಕೋಡೇರಿ, ವಿಜ್ಞಾನ ಶಿಕ್ಷಕಿ ಚೈತ್ರಾ ಶೆಟ್ಟಿ ಹಾಗೂ ಶಿಕ್ಷಕಿ ನಿರ್ಮಲಾ ಪೂಜಾರಿ ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳಾದ ಶಿವಾನಿ ಪ್ರಭಾಕರ ಪೂಜಾರಿ ಹಾಗೂ ಅಪೇಕ್ಷಾ ಸ್ಥಳೀಯ ಗ್ರಾಮೀಣ ಭಾಗದ ಗುಡಿ ಕೈಗಾರಿಗಳಲ್ಲಿ ಕರಕುಶಲ ವಸ್ತುಗಳ ತಯಾರಿಕೆ ಕುರಿತು ಅಧ್ಯಯನ ನಡೆಸಿ, ಪ್ರಬಂಧ ಮಂಡಿಸಿದ್ದರು.

ವಿದ್ಯಾರ್ಥಿಗಳು ತಮ್ಮ ಪ್ರಬಂಧ ಅಧ್ಯಯನಕ್ಕಾಗಿ ಕುಂಭಾಸಿ ಗ್ರಾಮದ ಕೊರಗ ಸಮುದಾಯದ ಕುಲ ಕಸುಬು ಬುಟ್ಟಿ ಹಣೆಯುವುದನ್ನು ಆಯ್ಕೆ ಮಾಡಿಕೊಂಡಿದ್ದರು. ಕ್ಷೇತ್ರ ಅಧ್ಯಯನದ ವೇಳೆ ಈ ಪಾರಂಪರಿಕ ಕಲೆ ಅವನತಿಯತ್ತ ಸಾಗುತ್ತಿರುವುದನ್ನು ಗಮನಿಸಿದ್ದರು.

ಬೆತ್ತ, ಬಿದಿರು, ಬಿಳಲು ಮುಂತಾದ ಕಚ್ಚಾ ಸಾಮಗ್ರಿಗಳ ಕೊರತೆ. ಪ್ಲಾಸ್ಟಿಕ್ ಮತ್ತು ರಬ್ಬರ್ ಬುಟ್ಟಿಗಳ ಬಳಕೆ ಹೆಚ್ಚಳ. ಮಾರುಕಟ್ಟೆ ಕೊರತೆ. ಸರ್ಕಾರದ ಪ್ರೋತ್ಸಾಹ ಹಾಗೂ ಬೆಂಬಲದ ಕೊರತೆ. ಆರ್ಥಿಕ ಸಂಪನ್ಮೂಲದ ಕೊರತೆ. ದೊಡ್ಡ ಕೈಗಾರಿಕೆಗಳ ಪೈಪೋಟಿ. ಯಂತ್ರೋಪಕರಣಗಳ ಕೊರತೆ. ಕೃಷಿಯಲ್ಲಿ ಸಾಂಪ್ರದಾಯಿಕ ಸಾಮಗ್ರಿಗಳ ಬಳಕೆ ಕುಸಿತ. ದುಡಿಮೆಗೆ ಸರಿಯಾದ ಆದಾಯ ದೊರಕದೆ ಇರುವುದು. ಆನ್‌ಲೈನ್‌ ಮಾರುಕಟ್ಟೆ ಪ್ರಭಾವ. ಸಮುದಾಯದ ವಿದ್ಯಾವಂತರು ಪಾರಂಪರಿಕ ಕುಲ ಕಸುಬಿನಿಂದ ದೂರವಾಗುತ್ತಿರುವ ಅಂಶಗಳನ್ನು ವಿದ್ಯಾರ್ಥಿಗಳು ತಮ್ಮ ಅಧ್ಯಯನ ಪ್ರಬಂಧದಲ್ಲಿ ಉಲ್ಲೇಖಿಸಿದ್ದಾರೆ.

 ಪ್ರತಿ ಜಿಲ್ಲೆಯಿಂದ ತಲಾ 10 ಮಕ್ಕಳಂತೆ ರಾಜ್ಯದ 30 ಜಿಲ್ಲೆಗಳಿಂದ ಒಟ್ಟು 300 ವಿದ್ಯಾರ್ಥಿಗಳು ಆನ್‌ಲೈನ್ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ನಗರ ಹಿರಿಯ-9, ಗ್ರಾಮೀಣ ಹಿರಿಯ-9, ನಗರ ಕಿರಿಯ-6 ಹಾಗೂ ಗ್ರಾಮೀಣ ಕಿರಿಯ-6 ರಂತೆ ಒಟ್ಟು 30 ವಿದ್ಯಾರ್ಥಿಗಳು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಎಂದು ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶದ ರಾಜ್ಯ ಸಂಯೋಜಕ ಬಿ.ಎನ್‌.ಶ್ರೀನಾಥ್ ಹಾಗೂ ಗೌರವ ಕಾರ್ಯದರ್ಶಿ ಸಿ.ಕೃಷ್ಣೇ ಗೌಡ ತಿಳಿಸಿದ್ದಾರೆ.

17 ರಂದು ಪ್ರಶಸ್ತಿ ವಿತರಣೆ
ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿರುವ 30 ಬಾಲ ವಿಜ್ಞಾನಿಗಳಿಗೆ ಇದೇ 17 ರಂದು ಬೆಂಗಳೂರಿನ ವಿಜ್ಞಾನ ಭವನದ ಪ್ರೊ.ಎಂ.ಎ.ಸೇತುರಾವ್ ಸಭಾಂಗಣದಲ್ಲಿ ನಡೆಯುವ ಸಮಾರಂಭದಲ್ಲಿ ಆದಿ ಚುಂಚನಗಿರಿ ಸಂಸ್ಥಾನದ ನಿರ್ಮಲಾನಂದನಾಥ ಸ್ವಾಮೀಜಿ ಅಭಿನಂದನಾ ಪತ್ರ ಹಾಗೂ ನೆನಪಿನ ಕಾಣಿಕೆ ನೀಡಲಿದ್ದಾರೆ ಎಂದು ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶದ ರಾಜ್ಯ ಸಂಯೋಜಕ ಬಿ.ಎನ್‌.ಶ್ರೀನಾಥ್ ಹಾಗೂ ಗೌರವ ಕಾರ್ಯದರ್ಶಿ ಸಿ.ಕೃಷ್ಣೇ ಗೌಡ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.