ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಜಾಬ್ ಹಿಂದೆ ಭಯೋತ್ಫಾದನಾ ಸಂಘಟನೆಗಳ ಕೈವಾಡ: ಆರ್‌.ಅಶೋಕ್‌

Last Updated 19 ಫೆಬ್ರುವರಿ 2022, 15:26 IST
ಅಕ್ಷರ ಗಾತ್ರ

ಉಡುಪಿ: ಉಡುಪಿಯಲ್ಲಿ ಶುರುವಾದ ಹಿಜಾಬ್‌ನ ಸಣ್ಣ ಕಿಡಿ ಪ್ರಪಂಚದಾದ್ಯಂತ ಹಬ್ಬಿರುವುದರ ಹಿಂದೆ ಭಯೋ‌ತ್ಪಾದನಾ ಸಂಘಟನೆಗಳ ಹಾಗೂ ವಿದೇಶಿ ದುಷ್ಟಶಕ್ತಿಗಳ ಕೈವಾಡವಿದೆ ಎಂದು ಕಂದಾಯ ಸಚಿವ ಆರ್‌.ಅಶೋಕ್ ಹೇಳಿದರು.

ಶನಿವಾರ ಬ್ರಹ್ಮಾವರ ತಾಲ್ಲೂಕಿನ ಕೊಕ್ಕರ್ಣೆಯಲ್ಲಿ ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ’ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ಮಾತನಾಡಿದ ಸಚಿವರು, ‘ಪಾಕಿಸ್ತಾನ, ಇರಾನ್, ಇರಾಕ್‌, ಅಫ್ಗಾನಿಸ್ತಾನ ದೇಶಗಳು ಹಿಜಾಬ್ ಪರವಾಗಿ ಹೇಳಿಕೆ ನೀಡಿರುವುದನ್ನು ಗಮನಿಸಿದರೆ ವಿವಾದದ ಹಿಂದೆ ಉಗ್ರಗಾಮಿಗಳ ಕೈವಾಡವಿರುವುದು ಕಾಣುತ್ತದೆ ಎಂದರು.

‘ಮಕ್ಕಳು ಶಾಲೆಗಳಿಗೆ ಹೋಗುವುದು ವಿದ್ಯೆ ಕಲಿಯಲು ಮಾತ್ರ. ಮತಾಂತರ ಹಾಗೂ ಧರ್ಮ ಪ್ರಚಾರ ಮಾಡುವುದಕ್ಕಲ್ಲ. ಶಾಲೆಗಳಲ್ಲಿ ಯಾವುದೇ ಧಾರ್ಮಿಕ ಆಚರಣೆಗಳಿಗೆ ಅವಕಾಶವಿಲ್ಲ. ಕೇಸರಿ ಶಾಲು ಅಥವಾ ಹಿಜಾಬ್ ಹಾಕುವಂತಿಲ್ಲ. ಹೈಕೋರ್ಟ್ ಮಧ್ಯಂತರ ಆದೇಶವನ್ನು ಉಲ್ಲಂಘಿಸಿದರೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಧರ್ಮಕ್ಕಿಂತ ದೇಶ ದೊಡ್ಡದು ಎಂಬ ತತ್ವವನ್ನು ಎಲ್ಲರೂ ಪಾಲಿಸಬೇಕು. ದೇಶದ ಅನ್ನ ತಿನ್ನುವ, ನೀರು ಕುಡಿಯುವವರು ನೆಲದ ಕಾನೂನುಗಳನ್ನು ಪಾಲಿಸುವುದು ನಿಜವಾದ ಧರ್ಮ ಎಂದು ಅಶೋಕ್ ಹೇಳಿದರು.

1 ಲಕ್ಷ ಎಕರೆ ಕುಮ್ಕಿ ಜಮೀನು ಹಸ್ತಾಂತರ:
ಕಾರ್ಕಳ ತಾಲ್ಲೂಕು ಕುಕ್ಕುಂದೂರಿನಲ್ಲಿ ಕಂದಾಯ ಮೇಳ ಉದ್ಘಾಟಿಸಿದ ಸಚಿವ ಅಶೋಕ್, ‘ಉಡುಪಿ ಜಿಲ್ಲೆಯಲ್ಲಿ ಒಂದು ಲಕ್ಷ ಎಕರೆ ಕುಮ್ಕಿ ಜಮೀನಿದ್ದು, ದಶಕಗಳಿಂದ ಉಳುಮೆ ಮಾಡುತ್ತಿರುವ ಫಲಾನುಭವಿಗಳಿಗೆ ನೀಡಲು ನಿರ್ಧರಿಸಲಾಗಿದೆ’ ಎಂದರು.

ಹಿಂದೆ ಜಿಲ್ಲಾಡಳಿತದಿಂದ ಅರಣ್ಯ ಇಲಾಖೆಗೆ ಹಸ್ತಾಂತರವಾಗಿರುವ ಕಂದಾಯ ಇಲಾಖೆಯ ಕುಮ್ಕಿ ಜಮೀನನ್ನು ವಾಪಾಸ್ ನೀಡುವಂತೆ ಸುಪ್ರೀಂಕೋರ್ಟ್‌ಗೆ ಅಫಿಡವಿಟ್‌ ಹಾಕಲಾಗಿದೆ. ಆದೇಶ ಬಂದ ಕೂಡಲೇ ಫಲಾನುಭವಿಗಳಿಗೆ ಹಂಚಿಕೆ ಮಾಡಲಾಗುವುದು ಎಂದು ಸಚಿವರು ತಿಳಿಸಿದರು.

ವಿಧಾನಸಭೆ ಅಧಿವೇಶನ ಮುಗಿದ ಕೂಡಲೇ ‘ಮನೆ ಮನೆಗೆ ಪಹಣಿ’ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಚಾಲನೆ ನೀಡಲಿದ್ದಾರೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT