ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿಗೆ ಕಾಂಗ್ರೆಸ್‌ ಮಾತ್ರ ಪರ್ಯಾಯ: ಸಿದ್ದರಾಮಯ್ಯ

ಕರಾವಳಿಯಲ್ಲಿ ಪಕ್ಷಕ್ಕೆ ಬಲತುಂಬಲು ಪಾದಯಾತ್ರೆ
Last Updated 6 ನವೆಂಬರ್ 2019, 14:12 IST
ಅಕ್ಷರ ಗಾತ್ರ

ಉಡುಪಿ: ಮತದಾರರಿಗೆ ಬಿಜೆಪಿ ಭ್ರಮನಿರಸನ ಮಾಡಿದೆ. ಬಿಜೆಪಿಗೆ ಪರ್ಯಾಯ ಕಾಂಗ್ರೆಸ್‌ ಪಕ್ಷ ಮಾತ್ರ ಎಂಬ ಭಾವನೆ ಮೂಡುತ್ತಿದೆ. ಸಂವಿಧಾನ, ಪ್ರಜಾಪ್ರಭುತ್ವ ಉಳಿಯಬೇಕಾದರೆ ಕಾಂಗ್ರೆಸ್‌ ಮತ್ತೆ ಅಧಿಕಾರಕ್ಕೇರಬೇಕು. ಇದಕ್ಕೆ ಕಾರ್ಯಕರ್ತರ ಬಲ ಬೇಕು ಎಂದು ಸಿದ್ದರಾಮಯ್ಯ ಹೇಳಿದರು.

ನಗರದ ಪುರಭವನದಲ್ಲಿ ಬುಧವಾರ ನಡೆದ ಕಾಂಗ್ರೆಸ್ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಕರಾವಳಿಯಲ್ಲಿ ಕಾಂಗ್ರೆಸ್‌ ಬಲ ಕುಂದಿರುವುದು ಸತ್ಯ. ಹಿಂದೆ ಉಳ್ಳಾಲದಿಂದ ಉಡುಪಿವರೆಗೆ ಮಾಡಿದ್ದ ಸದ್ಭಾವನಾ ಯಾತ್ರೆಯನ್ನು ಮತ್ತೊಮ್ಮೆ ಮಾಡಿ ಪಕ್ಷವನ್ನು ಬಲಪಡಿಸೋಣ ಎಂದರು.‌

ಬಿಜೆಪಿ ಸುಳ್ಳಿನ ಪಕ್ಷ. ಜನರ ತಲೆಗೆ ಸುಳ್ಳುಗಳನ್ನು ತುಂಬಿ ಅಧಿಕಾರಕ್ಕೆ ಬಂದಿದ್ದಾರೆ. ಸಿದ್ದರಾಮಯ್ಯ, ರಾಹುಲ್ ಗಾಂಧಿ ಮುಸ್ಲಿಮರ ಪರ, ಹಿಂದೂ ವಿರೋಧಿಗಳು ಎಂದು ಬಿಂಬಿಸಿದ್ದಾರೆ. ನಾವು ಬಿಜೆಪಿಗರಂತೆ ಡೋಂಗಿ ಹಿಂದುಗಳಲ್ಲ, ಅಪ್ಪಟ ಹಿಂದೂಗಳು.ಮುಸ್ಲಿಂ, ಕ್ರಿಶ್ಚಿಯನ್‌, ಹಿಂದೂಗಳನ್ನು ಒಟ್ಟಾಗಿ ಕರೆದೊಯ್ಯುವ ಪಕ್ಷ ಕಾಂಗ್ರೆಸ್‌ ಎಂದರು.

ಬಿಜೆಪಿಗೆ ಜನತಂತ್ರ ವಿಕೇಂದ್ರೀಕರಣದ ಮೇಲೆ ನಂಬಿಕೆ ಇಲ್ಲ. ಹಿಂದುಳಿದವರು, ಅಲ್ಪಸಂಖ್ಯಾತರು, ದಲಿತರು ಹಾಗೂ ಮಹಿಳೆಯರ ಕೈಗೆ ಅಧಿಕಾರ ಸಿಗುವುದು ಇಷ್ಟವಿಲ್ಲ. ಹಾಗಾಗಿಯೇ ಮೀಸಲಾತಿ ರದ್ದುಪಡಿಸಿ ಎಂದು ಬಿಜೆಪಿ ಮುಖಂಡ ರಾಮಾಜೋಯಿಸ್‌ ಸುಪ್ರೀಂಕೋರ್ಟ್‌ನಲ್ಲಿ ರಿಟ್‌ ಅರ್ಜಿ ಸಲ್ಲಿಸಿದ್ದರು ಎಂದು ಕುಟುಕಿದರು.

6 ವರ್ಷಗಳ ಅಧಿಕಾರಾವಧಿಯಲ್ಲಿ ಹೆಸರಿಸಬಹುದಾದ ಯಾವ ಉತ್ತಮ ಕೆಲಸವನ್ನೂ ಬಿಜೆಪಿ ಮಾಡಿಲ್ಲ. ನೋಟು ಅಮಾನ್ಯ, ಜಿಎಸ್‌ಟಿ ಹೆಸರಿನಲ್ಲಿ ಬಡವರಿಗೆ ತೊಂದರೆ ನೀಡಿದ್ದು ಅವರ ಸಾಧನೆ ಎಂದು ವ್ಯಂಗ್ಯವಾಡಿದರು.

ರೈತರ ಆದಾಯ ದುಪ್ಪಟ್ಟಾಗಲಿಲ್ಲ. ಜಿಡಿಪಿ ಪಾತಾಳಕ್ಕೆ ಕುಸಿದಿದೆ. ವಿದೇಶಗಳಿಂದ ಕಪ್ಪುಹಣ ಹೊರತರಲಿಲ್ಲ. ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ ಭಾರತ ನೇಪಾಳ, ಪಾಕಿಸ್ತಾನಕ್ಕಿಂತ ಹಿಂದೆ ಬಿದ್ದಿದೆ. ಬಡತನ, ನಿರುದ್ಯೋಗ ಹೆಚ್ಚಾಗುತ್ತಿದೆ. ಕೈಗಾರಿಕೆಗಳು ಮುಚ್ಚುತ್ತಿವೆ. ಮೋದಿ ಅವರಂಥ ಸುಳ್ಳುಗಾರ ಪ್ರಧಾನಿಯನ್ನು ದೇಶದ ಇತಿಹಾಸದಲ್ಲಿ ಕಾಣಲು ಸಾಧ್ಯವಿಲ್ಲ ಎಂದರು.

ಸ್ವಾತಂತ್ರ್ಯಕ್ಕಾಗಿ ಹೋರಾಡಿದವರು ಬಿಜೆಪಿಯಲ್ಲಿ ಯಾರೂ ಇಲ್ಲ. ಹಾಗಾಗಿ, ಕಾಂಗ್ರೆಸ್‌ ಅನ್ಯಾಯ ಮಾಡಿದೆ ಎಂದು ಸರ್ದಾರ್ ವಲ್ಲಭಬಾಯ್ ಪಟೇಲರನ್ನು ಹೈಜಾಕ್ ಮಾಡಿದರು. ಅಂಬೇಡ್ಕರ್, ಗಾಂಧೀಜಿ ಅವರನ್ನೂ ನಮ್ಮವರು ಎಂದರು. ಸಂವಿಧಾನ ಬದಲಿಸಲು ಹೊರಟವರಿಗೆ, ಗಾಂಧೀಜಿಯನ್ನು ಕೊಂದ ಗೋಡ್ಸೆಯನ್ನು ಪೂಜಿಸುವವರಿಗೆ ನಿಜವಾಗಿಯೂ ನೈತಿಕತೆ ಇದೆಯಾ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ಆಹಾರ ಭದ್ರತಾ ಕಾಯ್ದೆಯನ್ನು ಜಾರಿಗೆ ತಂದಿದ್ದು ಯುಪಿಎ ಸರ್ಕಾರ. ರಾಜ್ಯದಲ್ಲಿ ಬಡವರಿಗೆ ಉಚಿತವಾಗಿ ಅಕ್ಕಿ ಕೊಟ್ಟಿದ್ದು ಕಾಂಗ್ರೆಸ್‌ ಸರ್ಕಾರ. ಆದರೂ, ಅನ್ನಭಾಗ್ಯ ಯೋಜನೆಯ ಲಾಭ ಪಡೆಯಲು, ಜನರನ್ನು ದಾರಿ ತಪ್ಪಿಸಲು ಬಿಜೆಪಿ ವ್ಯವಸ್ಥಿತವಾಗಿ ಸುಳ್ಳುಗಳನ್ನು ಹರಡುತ್ತಿದೆ ಎಂದರು.

ಇದೇವೇಳೆ ಕಾಂಗ್ರೆಸ್‌ ಪಕ್ಷದಿಂದ ಅತಿಹೆಚ್ಚುಬಾರಿ ಗೆದ್ದುಬಂದ ಹಿರಿಯ ಮುಖಂಡರನ್ನು ಸನ್ಮಾನಿಸಲಾಯಿತು. ಸಮಾರಂಭಕ್ಕೂ ಮುನ್ನ ಕೊರಂಗ್ರಪಾಡಿಯಲ್ಲಿ ರಾಜೀವ್‌ಗಾಂಧಿ ಪಂಚಾಯತ್ ರಾಜ್ ಸಂಘಟನೆಯಿಂದ ನಿರ್ಮಿಸಲಾದ ಗಾಂಧೀ ಕುಟೀರವನ್ನು ಬಡ ಮಹಿಳೆಗೆ ಹಸ್ತಾಂತರ ಮಾಡಲಾಯಿತು.

ಕಾರ್ಯಕ್ರಮದಲ್ಲಿ ರಾಜ್ಯ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ಪುಷ್ಪಾ ಅಮರ್‌ನಾಥ್‌, ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಮುಖಂಡರಾದ ವಿನಯಕುಮಾರ್ ಸೊರಕೆ, ಪ್ರಮೋದ್ ಮಧ್ವರಾಜ್‌, ವಿಶುನಾಥನ್‌, ನಾರಾಯಣಸ್ವಾಮಿ, ಗೋಪಾಲ ಪೂಜಾರಿ, ಐವನ್‌ ಡಿಸೋಜಾ, ಯು.ಆರ್.ಸಭಾಪತಿ, ಜಿ.ಎ.ಭಾವಾ, ಎಂ.ಎ.ಗಫೂರ್, ರಂಗಸ್ವಾಮಿ, ರೋಷನಿ ಒಲಿವೆರಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT