ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ಸರ್ಕಾರದಿಂದ ಬಡವರ, ಕಾರ್ಮಿಕರ ನಿರ್ಲಕ್ಷ್ಯ

ನಿವೇಶನ ರಹಿತರ ಪ್ರತಿಭಟನೆಯಲ್ಲಿ ತಿರುನಾವುಕ್ಕರಸು ಆರೋಪ
Last Updated 18 ನವೆಂಬರ್ 2019, 14:11 IST
ಅಕ್ಷರ ಗಾತ್ರ

ಉಡುಪಿ: ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಶ್ರೀಮಂತರ, ಬಂಡವಾಳ ಶಾಹಿಗಳ ಪರವೇ ಹೊರತು ಬಡವರ, ಕಾರ್ಮಿಕರ ಪರ ಅಲ್ಲ. ಬಡವರಿಗೆ ಯೋಜನೆ ನೀಡುವ ಬದಲು ಇರುವ ಯೋಜನೆಗಳನ್ನೇ ಕಿತ್ತುಕೊಳ್ಳುವ ಕೆಲಸ ಮಾಡುತ್ತಿದೆ ಎಂದು ನವದೆಹಲಿ ಅಖಿಲ ಭಾರತ ಕೃಷಿ ಕೂಲಿಕಾರರ ಸಂಘದ ಅಧ್ಯಕ್ಷ ತಿರುನಾವುಕ್ಕರಸು ಆರೋಪಿಸಿದರು.

ಮನೆ, ನಿವೇಶನ ರಹಿತರಿಗೆ ನಿವೇಶನ ನೀಡುವಂತೆ ಒತ್ತಾಯಿಸಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಉಡುಪಿ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು.

ಪ್ರತಿಯೊಬ್ಬರಿಗೂ ನಿವೇಶನ ನೀಡುವುದು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಜವಾಬ್ದಾರಿ. ಆದರೆ ಕಳೆದ ಏಳು ದಶಕಗಳಿಂದ ಕಾಂಗ್ರೆಸ್‌ ಹಾಗೂ ಬಿಜೆಪಿ ಸರ್ಕಾರಗಳು ನಿವೇಶನ ರಹಿತರನ್ನು ಕಣ್ಣೆತ್ತಿಯು ನೋಡಿಲ್ಲ. ಈಗಿನ ಮೋದಿ ಸರ್ಕಾರವೂ ಅದೇ ಹಾದಿಯಲ್ಲಿ ಸಾಗಿದೆ ಎಂದು ದೂರಿದರು.

ಪ್ರಸ್ತುತ ಕೇಂದ್ರ ಸರ್ಕಾರವು ಬಂಡವಾಳ ಶಾಹಿಗಳಿಗೆ 17 ಲಕ್ಷ ಕೋಟಿ ನೀಡಿದ್ದು, 3,500 ಲಕ್ಷ ಕೋಟಿ ತೆರಿಗೆ ಮನ್ನಾ ಮಾಡಿದೆ. ಆದರೆ ಬಡವರಿಗೆ ಉದ್ಯೋಗ ನೀಡದೆ ವಂಚನೆ ಮಾಡಲಾಗುತ್ತಿದೆ. ಸಾಮಾಜಿಕ ಭದ್ರತೆಗೆ ಕೇಂದ್ರ ಸರ್ಕಾರ ನೀಡುತ್ತಿದ್ದ ಅನುದಾನವನ್ನು ಕಡಿತ ಮಾಡಲಾಗಿದೆ. ಸರ್ಕಾರ ಆರ್ಥಿಕ ಹಿಂಜರಿತಕ್ಕೆ ಒಳಗಾಗಿದೆ. ಸರ್ಕಾರದ ಖಜಾನೆ ಖಾಲಿಯಾಗಿದ್ದು, ಸರ್ಕಾರಿ ನೌಕರರಿಗೆ ಸಂಬಳ ಕೊಡಲು ಹಣ ಇಲ್ಲವಾಗಿದೆ ಎಂದು ಹೇಳಿದರು.

ಬಿಜೆಪಿ ಪಕ್ಷವು ಕಳೆದ ಲೋಕಸಭಾ ಚುನಾವಣೆ ಸಂದರ್ಭ ಬಂಡವಾಳಶಾಹಿಗಳಿಂದ 1150 ಕೋಟಿ ಪಾರ್ಟಿ -ಫಂಡ್‌ ರೂಪದಲ್ಲಿ ಪಡೆದುಕೊಂಡಿದೆ. ಆದ್ದರಿಂದ ಈ ಸರ್ಕಾರ ಎಂದಿಗೂ ಅವರ ಪರವಾಗಿಯೇ ಇರುತ್ತದೆ ಎಂದು ಟೀಕಿಸಿದರು.

ಸರ್ಕಾರ ಜಿಲ್ಲೆಯಲ್ಲಿ ಸ್ವಂತ ಮನೆ, ನಿವೇಶನ ಇಲ್ಲದವರನ್ನು ಗುರುತಿಸಿ ಅವರಿಗೆ ನಿವೇಶನ ಒದಗಿಸಲು ಜಾಗ ಗುರುತಿಸಿ ಹಕ್ಕು ಪತ್ರ ನೀಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಸಿಐಟಿಯು ಮುಖಂಡ ಬಾಲಕೃಷ್ಣ ಶೆಟ್ಟಿ, ಸಂಘದ ಜಿಲ್ಲಾಧ್ಯಕ್ಷ ಯು. ದಾಸಭಂಡಾರಿ, ಪ್ರಧಾನ ಕಾರ್ಯದರ್ಶಿ ವೆಂಕಟೇಶ ಕೋಣಿ, ಕೋಶಾಧಿಕಾರಿ ಕವಿರಾಜ್‌, ಪದಾಧಿಕಾರಿಗಳಾದ ವಿಠಲ ಪೂಜಾರಿ, ರಾಜೀವ ಪಡುಕೋಣೆ, ಉಮೇಶ್‌ ಕುಂದರ್‌, ನಾಗರತ್ನ ನಾಡ, ಪದ್ಮಾವತಿ ಶೆಟ್ಟಿ, ಸವಿತಾ ಶೆಟ್ಟಿ ಕೆರ್ವಾಸೆ, ಪದ್ಮ ಅಮೀನ್‌, ಜಯಶ್ರೀ ಕುಕ್ಕುಂದೂರು ಮೊದಲಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT