ಉಡುಪಿ: ಮುಂದಿನ ರಾಜ್ಯಮಟ್ಟದ ಸಮಗ್ರ ಯಕ್ಷಗಾನ ಸಮ್ಮೇಳನವನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಸುವ ನಿರ್ಣಯವನ್ನು ಭಾನುವಾರ ಉಡುಪಿಯ ಎಂಜಿಎಂ ಕಾಲೇಜು ಮೈದಾನದಲ್ಲಿ ನಡೆದ ಯಕ್ಷಗಾನ ಸಮ್ಮೇಳನದ ಸಮಾರೋಪದಲ್ಲಿ ತೆಗೆದುಕೊಳ್ಳಲಾಯಿತು.
ಸಮ್ಮೇಳನದ ಪ್ರಮುಖ ನಿರ್ಣಯಗಳು:
*ಯಕ್ಷಗಾನ ಸಮ್ಮೇಳನದಲ್ಲಿ ಮಂಡಿಸಿದ ನಿರ್ಣಯಗಳು ಸಮ್ಮೇಳನಾಧ್ಯಕ್ಷರು ಸೂಚಿಸಿರುವ ಯಕ್ಷಗಾನ ಸಂಬಂಧಿ ಪ್ರಸ್ತಾವಗಳನ್ನು ಸರ್ಕಾರ ಪರಿಗಣಿಸಿ ಸೂಕ್ತ ಸಮಿತಿ ರಚಿಸಿ ವರದಿ ಪಡೆದು ಕಾಲಮಿತಿಗೊಳಪಟ್ಟು ಜಾರಿಗೊಳಿಸಬೇಕು.
* ಸಾಂಸ್ಕೃತಿಕವಾಗಿ ಕರ್ನಾಟಕದ ಭಾಗವೇ ಆಗಿರುವ ಕಾಸರಗೋಡನ್ನು ಸರ್ಕಾರದ ಸಾಂಸ್ಕೃತಿಕ ನೀತಿಯನ್ನು ಸದಾ ವಿಶೇಷ ಪರಿಗಣನೆಯಲ್ಲಿಟ್ಟು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಬೇಕು.
*ಸರ್ಕಾರದ ವಿವಿಧ ಅಧಿಕೃತ ಪ್ರಶಸ್ತಿ, ಸಾಂಸ್ಕೃತಿಕ ಉತ್ಸವ, ಮನ್ನಣೆ, ವಿವಿಧ ಸಮಿತಿಗಳ, ಅಕಾಡೆಮಿಗಳ ಸದಸ್ಯತ್ವಗಳಲ್ಲಿ ಕಾಸರಗೋಡಿಗೆ ಸೂಕ್ತ ಪ್ರಾತಿನಿಧ್ಯ ಸಿಗಬೇಕು.
*ಸಮಗ್ರ ಕರ್ನಾಟಕದ ಯಕ್ಷಗಾನ ಮತ್ತು ಇತರ ಸಾಂಪ್ರದಾಯಿಕ ಬಯಲಾಟಗಳ ವೃತ್ತಿನಿರತ ಕಲಾವಿದರು, ರಂಗಕರ್ಮಿಗಳು ಮತ್ತು ರಂಗ ಸಹಾಯಕರಿಗೆ ಕಲ್ಯಾಣ ಕಾರ್ಯಕ್ರಮ ಯೋಜನೆ ಜಾರಿಗೊಳಿಸಿ ಸಹಾಯಧನ, ಕ್ಷೇಮನಿಧಿ, ನಿವೃತ್ತಿ ಮಾಸಾಶನ, ಆರೋಗ್ಯ ವಿಮೆ ಕೊಡಬೇಕು.
*ಸಮ್ಮೇಳನದ ಮಾದರಿಯಲ್ಲಿ ವಿಸ್ತೃತ ಆಯಾಮಗಳೊಂದಿಗೆ ನಿಶ್ಚಿತ ಅವಧಿಯ ಅಂತರದಲ್ಲಿ ಸಮಗ್ರ ಯಕ್ಷಗಾನ ಸಮ್ಮೇಳನವನ್ನು ಮುಂದೆಯೂ ನಿರಂತರವಾಗಿ ನಡೆಸಬೇಕು.
*ಕಲಾವಿದರ ಗೌರವ ಮಾಸಾಶನವನ್ನು ಐದು ಸಾವಿರಕ್ಕೆ ಏರಿಸಬೇಕು.
*ಯಕ್ಷ ರಂಗಾಯಣವನ್ನು ಯಕ್ಷಗಾನ ಅಸ್ತಿತ್ವದಲ್ಲಿರುವ ಇತರ ಜಿಲ್ಲೆಗಳಿಗೂ ವಿಸ್ತರಿಸಬೇಕು.
*ರಾಷ್ಟ್ರೀಯ ನಾಟಕ ಶಾಲೆಯ ಮಾದರಿಯಲ್ಲಿ ರಾಷ್ಟ್ರೀಯ ಯಕ್ಷಗಾನ ಶಾಲೆ ರಚನೆ ಆಗಬೇಕು.
*ರಾಜ್ಯಮಟ್ಟದ ಸಮಗ್ರ ಯಕ್ಷಗಾನ ಸಮ್ಮೇಳನಕ್ಕೆ ನಾಂದಿ ಹಾಡಿರುವ ಸರ್ಕಾರ ಮುಂದೆ ವಿಶ್ವ ಯಕ್ಷಗಾನ ಸಮ್ಮೇಳನ ನಡೆಸಬೇಕು
*ಕೇರಳದಲ್ಲಿ ಕಥಕ್ಕಳಿ, ಒಡಿಶಾದಲ್ಲಿ ಒಡಿಸ್ಸಿ ಕಲೆಯನ್ನು ರಾಜ್ಯದ ಪ್ರಾತಿನಿಧಿಕ ಕಲೆ ಎಂದು ಪರಿಗಣಿಸಿರುವಂತೆ ಕರ್ನಾಟಕ ರಾಜ್ಯದಲ್ಲಿಯೂ ಯಕ್ಷಗಾನ ಕಲೆಯನ್ನು ಪ್ರಾತಿನಿಧಿಕ ಕಲೆ ಎಂದು ಪರಿಗಣಿಸಬೇಕು.
*ಶೈಕ್ಷಣಿಕ ಪಠ್ಯಗಳಲ್ಲಿ ಹಂತಹಂತವಾಗಿ ಪರಿಚಯಾತ್ಮಕವಾಗಿ ಯಕ್ಷಗಾನದ ವಿಷಯಗಳನ್ನು ಸೇರಿಸಬೇಕು ಔಪಚಾರಿಕ ಶಿಕ್ಷಣದಲ್ಲಿ ಡಿಪ್ಲೊಮೋ, ಸರ್ಟಿಫಿಕೇಟ್ ಕೋರ್ಸ್ ಆರಂಭಕ್ಕೆ ಪ್ರಾಶಸ್ತ್ಯ ನೀಡಬೇಕು.
*ಪ್ರತಿ ವರ್ಷ ನಡೆಯುವ ಯಕ್ಷಗಾನ ಸಮ್ಮೇಳನವನ್ನು ಎಲ್ಲರಿಗೂ ಅನುಕೂಲವಾಗುವಂತೆ 6 ತಿಂಗಳು ಮೊದಲೇ ದಿನಾಂಕ ನಿರ್ಧರಿಸಬೇಕು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.