ಕುಂದಾಪುರ: ‘ಪ್ರತಿಫಲಾಕ್ಷೆ ಇಲ್ಲದೆ ಸಮಾಜಕ್ಕೆ ಕೊಡುಗೆ ನೀಡುವ ದಾನಿಗಳು ಸಮಾಜದಲ್ಲಿ ಚಿರಸ್ಥಾಯಿಯಾಗಿ ಉಳಿಯುತ್ತಾರೆ. ಕಾಯ ಅಳಿದರೂ ಕೀರ್ತಿ ಉಳಿದಿದೆ ಎನ್ನುವಂತೆ, ಕೊಟ್ಟ ಕೊಡುಗೆಗಳೆಲ್ಲಾ ಸಾರ್ಥಕತೆ ಕಾಣುತ್ತವೆ’ ಎಂದು ಸಾಲಿಗ್ರಾಮದ ಶಬರಿ ಕ್ಲಿನಿಕ್‌ನ ಡಾ.ಗಣೇಶ್ ಯು. ಹೇಳಿದರು.
ತೆಕ್ಕಟ್ಟೆಯ ಹಯಗ್ರೀವದಲ್ಲಿ ಕೈಲಾಸ ಕಲಾಕ್ಷೇತ್ರ ಟ್ರಸ್ಟ್ ಆಶ್ರಯದಲ್ಲಿ ಭಾನುವಾರ ನಡೆದ ಬಿ.ಎಮ್. ರಾಮಕೃಷ್ಣ ಹತ್ವಾರ್ ಅವರ ಸಂಸ್ಮರಣಾ ಕಾರ್ಯಕ್ರಮದಲ್ಲಿ, ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.
‘ಪ್ರತಿ ವರ್ಷ ನೂರಾರು ಮಕ್ಕಳು, ಹಿರಿಯರು ಸಾಂಸ್ಕೃತಿಕ ಕಲೆಯನ್ನು ಕಲಿಸುವುದಕ್ಕೆ ನೆರಳಾದ ಕೊಡುಗೈ ದಾನಿ ಬಿ.ಎಮ್.ರಾಮಕೃಷ್ಣ ನೀಡಿರುವ ಸೇವೆಯನ್ನು ಗುರುತಿಸಿ, ವರ್ಷಕೊಮ್ಮೆಯಾದರೂ ಅವರನ್ನು ನೆನಪಿಸಿಕೊಳ್ಳುವ ಕೆಲಸ ಅವರಿಂದ ನೆರವು ಪಡೆದುಕೊಂಡಿರುವ ಸಂಘ-ಸಂಸ್ಥೆಗಳಿಂದ ಆಗಬೇಕು’ ಎಂದರು.
ಕೈಲಾಸ ಕಲಾಕ್ಷೇತ್ರದ ಅಧ್ಯಕ್ಷ ಹೆರಿಯ ಮಾಸ್ಟರ್ ಮಾತನಾಡಿ, ‘ಯಕ್ಷಗಾನದ ಮೇಲೆ ಒಲವಿದ್ದ ಹತ್ವಾರರು ಬೆಟ್ಟಿನಮನೆಯಲ್ಲಿ ಅನೇಕ ಕಲಾವಿದರನ್ನು ಕರೆಸಿ, ಯಕ್ಷಗಾನ ಪ್ರದರ್ಶನ ಸಂಘಟಿಸಿ ಪ್ರತಿ ವರ್ಷ ಅದ್ಭುತ ಕಾರ್ಯಕ್ರಮ ನೆರವೇರಿಸಿ, ಈ ಭಾಗದಲ್ಲಿ ಯಕ್ಷಕಲೆಯನ್ನು ಹಸಿರಾಗಿ ಉಳಿಸಿದವರು. ಪರಿಸರದ ಅನೇಕ ಶಾಲಾ ಕಾಲೇಜುಗಳಿಗೆ ದೊಡ್ಡ ಕೊಡುಗೆ ನೀಡಿ ಓದುವ ಮಕ್ಕಳಿಗೆ ನೆರಳಾದವರು’ ಎಂದು ಸ್ಮರಿಸಿದರು.
ಪ್ರಾಚಾರ್ಯ ದೇವದಾಸ್ ರಾವ್ ಕೂಡ್ಲಿ, ಗುರುಗಳಾದ ಲಂಬೋದರ ಹೆಗಡೆ ನಿಟ್ಟೂರು, ಮಂಜುನಾಥ ಕೆದಲಾಯ ಹಳ್ಳಾಡಿ, ಹತ್ವಾರರ ಸಹೋದರ ಬೆಟ್ಟಿನಮನೆ ವಾದಿರಾಜ ಹತ್ವಾರ್, ಸಂಗೀತ ವಿದುಷಿ ಶಾರದ ವಿ. ಹೊಳ್ಳ, ಉದ್ಯಮಿ ಗೋಪಾಲ ಪೂಜಾರಿ ಕುಂದಾಪುರ ಇದ್ದರು.
ಮಾ. ರಚಿತ್ ಸ್ವಾಗತಿಸಿದರು, ಉಪನ್ಯಾಸಕ ಶಂಕರನಾರಾಯಣ ಉಪಾಧ್ಯಾಯ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಯಶಸ್ವಿ ಕಲಾವೃಂದದ ಕಲಾವಿದರಿಂದ ಚಿಣ್ಣರ ಯಕ್ಷ ಗಾಯನ ರಂಗದಲ್ಲಿ ಪ್ರಸ್ತುತಿಗೊಂಡಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.