ಬುಧವಾರ, ಡಿಸೆಂಬರ್ 11, 2019
16 °C
ಮುಚ್ಲಕೋಡು ದೇಗುಲದಲ್ಲಿ ಎಡೆಸ್ನಾನ; ಪ್ರಸಾದದ ಎಲೆ ಮೇಲೆ ಉರುಳಿದ ಭಕ್ತರು

ಉಡುಪಿ ಕೃಷ್ಣಮಠದಲ್ಲಿ ನಡೆಯಲಿಲ್ಲ ಮಡೆ–ಎಡೆ ಸ್ನಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಸುಬ್ರಹ್ಮಣ್ಯ ಷಷ್ಟಿಯ ದಿನವಾದ ಸೋಮವಾರ ಶ್ರೀಕೃಷ್ಣಮಠದ ಸುಬ್ರಹ್ಮಣ್ಯ ದೇವರ ಗುಡಿಯಲ್ಲಿ ವಿಶೇಷ ಪೂಜೆ ನಡೆಯಿತು. ಸಾರ್ವಜನಿಕರ ವಿರೋಧದ ಹಿನ್ನೆಲೆಯಲ್ಲಿ ಈ ಬಾರಿಯೂ ಮಠದಲ್ಲಿ ಮಡೆಸ್ನಾನ, ಎಡೆಸ್ನಾನ ನಡೆಯಲಿಲ್ಲ. ಬದಲಾಗಿ ಭಕ್ತರು ಸುಬ್ರಹ್ಮಣ್ಯ ದೇವರ ದರ್ಶನ ಪಡೆದು ಉರುಳುಸೇವೆ ಮಾಡಿದರು.

ಮುಚ್ಲಕೋಡು ದೇಗುಲದಲ್ಲಿ ಎಡೆಸ್ನಾನ: ಪೇಜಾವರ ಮಠದ ಅಧೀನಕ್ಕೊಳಪಟ್ಟಿರುವ ಕುಕ್ಕಿಕಟ್ಟೆಯ ಮುಚ್ಚಕೋಡು ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಮಡೆ ಸ್ನಾನದ ಬದಲಾಗಿ ಎಡೆಸ್ನಾನ ನಡೆಯಿತು. ಮಧ್ಯಾಹ್ನ ದೇವರಿಗೆ ಅರ್ಪಿಸಿದ ಪ್ರಸಾದವನ್ನು ದೇವಸ್ಥಾನದ ಪೌಳಿಯ ಸುತ್ತ ಇಡುತ್ತಿದ್ದಂತೆ ಭಕ್ತರು ಎಡೆಸ್ನಾನ ಮಾಡಿದರು. 10ಕ್ಕೂ ಹೆಚ್ಚು ಮಂದಿ ಮಡಿಯುಟ್ಟು ಪ್ರಸಾದದ ಎಲೆಯ ಮೇಲೆ ಉರುಳು ಸೇವೆ ಮಾಡಿದರು. 

ಎಡೆಸ್ನಾನ ಸಂಬಂಧ ಮಾತನಾಡಿದ ಪೇಜಾವರ ಶ್ರೀಗಳು, ಮಡೆಸ್ನಾನಕ್ಕೆ ವಿರೋಧ ಕೇಳಿಬಂದಿದ್ದರಿಂದ ಶ್ರೀಕೃಷ್ಣಮಠದಲ್ಲಿ ಎರಡೂ ಪ್ರಕಾರದ ಸ್ನಾನಗಳನ್ನು ನಿಲ್ಲಿಸಲಾಗಿದೆ. ಆದರೆ, ಮುಚ್ಲಕೋಡು ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಇಚ್ಛೆಯುಳ್ಳ ಭಕ್ತರು ಎಡೆಸ್ನಾನ ಮಾಡಿದ್ದಾರೆ. ಮಡೆಸ್ನಾನವನ್ನು ಒಪ್ಪಲಾಗದು. ಆದರೆ, ಎಡೆಸ್ನಾನ ಭಕ್ತರ ಐಚ್ಛಿಕ ಎಂದರು.

ಉರುಳುಸೇವೆ: ಶ್ರೀಕೃಷ್ಣಮಠದೊಳಗಿರುವ ಸುಬ್ರಹ್ಮಣ್ಯ ದೇಗುಲದಲ್ಲಿ ಈ ಬಾರಿ ಎಡೆಸ್ನಾನ ನಡೆಯಲಿಲ್ಲ. ಬದಲಾಗಿ ಭಕ್ತರು ಮಧ್ವ ಸರೋವರದಲ್ಲಿ ಮಿಂದು, ದೇಗುಲದ ಸುತ್ತಲೂ ಉರುಳುಸೇವೆ ನಡೆಸಿದರು. ಪರ್ಯಾಯ ಪಲಿಮಾರು ವಿದ್ಯಾಧೀಶತೀರ್ಥರು ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಬೆಳಿಗ್ಗೆ ರಥಬೀದಿಯಲ್ಲಿ ಸುಬ್ರಹ್ಮಣ್ಯ ದೇವರ ಉತ್ಸವ ಮೂರ್ತಿಯ ವಿಶೇಷ ರಥೋತ್ಸವ ನಡೆಯಿತು. 

ಈ ಸಂದರ್ಭ ಮಾತನಾಡಿದ ಪಲಿಮಾರು ವಿದ್ಯಾಧೀಶ ಶ್ರೀಗಳು, ‘ವಿವಾದ ಬೇಡ ಎಂಬ ಕಾರಣಕ್ಕೆ ಶ್ರೀಕೃಷ್ಣಮಠದಲ್ಲಿ ಮಡೆ ಹಾಗೂ ಎಡಸ್ನಾನ ನಿಂತಿದೆ. ಬದಲಾಗಿ ಉರುಳುಸೇವೆ ನಡೆಯುತ್ತಿದೆ. ಕ್ಷೇತ್ರದಲ್ಲಿ ಆಶ್ಲೇಷ ಬಲಿ ಸೇರಿದಂತೆ ಹಲವು ಪೂಜೆಗಳು ನಡೆಯುತ್ತಿವೆ ಎಂದರು.

‘ತಾರಕಸುರನ ಉಪಟಳವನ್ನು ಮಟ್ಟಹಾಕಲು ದೇವತೆಗಳ ಸೇನಾನಿಯಾದ ಸುಬ್ರಹ್ಮಣ್ಯನನ್ನು ದೇವತೆಗಳೆಲ್ಲ ಕಳುಹಿಸಿಕೊಟ್ಟಿದ್ದರು. ಅದರಂತೆ, ಸುಬ್ರಹ್ಮಣ್ಯ ತಾರಕಾಸುರನ ವಧೆ ಮಾಡಿದ ಎಂಬ ಪ್ರತೀತಿ ಇದೆ. ಅದರಂತೆ, ಪ್ರಸ್ತುತ ಕಾಲಘಟ್ಟದಲ್ಲಿ  ಮನುಷ್ಯನನ್ನು ಕಾಡುವ ತಾರಕಾಸುರನಂತಹ ಸಮಸ್ಯೆಗಳನ್ನು ಸುಬ್ರಹ್ಮಣ್ಯನ ಪೂಜೆಯಿಂದ ನಿವಾರಿಸಿಕೊಳ್ಳಬಹುದು’ ಎಂದರು.

ಪ್ರತಿಕ್ರಿಯಿಸಿ (+)