ಶನಿವಾರ, ಜುಲೈ 24, 2021
26 °C
ಉಡುಪಿ ಯುನೈಟೆಡ್‌ ಕ್ರಿಶ್ಚಿಯನ್‌ ಫೋರಂ ಫಾರ್ ಹ್ಯೂಮನ್ ರೈಟ್ಸ್ ನಿರ್ಧಾರ

ಜೂನ್‌ 30ರವರೆಗೆ ಚರ್ಚ್‌ಗಳಲ್ಲಿ ಸಾಮೂಹಿಕ ಪ್ರಾರ್ಥನೆ ಇಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಡುಪಿ: ಭಕ್ತರ ಆರೋಗ್ಯ ಹಾಗೂ ಸುರಕ್ಷತೆಯ ದೃಷ್ಟಿಯಿಂದ ಜಿಲ್ಲೆಯ ಚರ್ಚ್‌ಗಳಲ್ಲಿ ಜೂನ್ 30ರವರೆಗೆ ಸಾಮೂಹಿಕ ಪೂಜೆ, ಪ್ರಾರ್ಥನೆ ನಡೆಸದಿರಲು ನಿರ್ಧರಿಸಲಾಗಿದೆ ಎಂದು ಉಡುಪಿ ಯುನೈಟೆಡ್‌ ಕ್ರಿಶ್ಚಿಯನ್‌ ಫೋರಂ ಫಾರ್ ಹ್ಯೂಮನ್ ರೈಟ್ಸ್ ತಿಳಿಸಿದೆ.

ಉಡುಪಿಯ ಕೆಥೋಲಿಕ್‌ ಧರ್ಮಾಧ್ಯಕ್ಷರ ನಿವಾಸದಲ್ಲಿ ನಡೆದ ಕೆಥೋಲಿಕ್‌ ಧರ್ಮಪ್ರಾಂತ, ಚರ್ಚ್ ಆಫ್ ಸೌತ್ ಇಂಡಿಯ (ಸಿಎಸ್‌ಐ), ಯುನೈಟೆಡ್ ಬಾಸೆಲ್ ಮಿಷನ್ ಚರ್ಚಸ್ (ಯುಬಿಎಂ), ಫುಲ್ ಗೊಸ್ಪೆಲ್ ಪಾಸ್ಟರ್ಸ್ ಅಸೋಸಿಯೇಷನ್‌ ಹಾಗೂ ಇತರ ಕ್ರೈಸ್ತ ಸಭೆಗಳ ಧಾರ್ಮಿಕ ನಾಯಕರಿದ್ದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಯಿತು.

ಜೂನ್‌ 30ರ ಬಳಿಕ ಕೋವಿಡ್‌ ಸೋಂಕಿನ ಪರಿಸ್ಥಿತಿ ಪರಿಶೀಲಿಸಿ, ನಿರ್ಧಾರ ತೆಗೆದುಕೊಳ್ಳಲಾಗುವುದು. ಸದ್ಯ ವೈಯಕ್ತಿಕ ಭೇಟಿಗೆ ಚರ್ಚ್‌ಗಳು ತೆರೆದಿರಲಿವೆ. ಆದರೆ, ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿ ಚರ್ಚ್‌ಗೆ ಬರಬೇಕು. ಸೋಂಕು ಮತ್ತೊಬ್ಬರಿಗೆ ಹರಡದಂತೆ ಎಚ್ಚರಿಕೆ ವಹಿಸುವುದು, ಪರರಿಗೆ ತೋರಿಸುವ ಪ್ರೀತಿ ಹಾಗೂ ಕಾಳಜಿಯ ಗುರುತು ಎಂದು ಕ್ರೈಸ್ತ ಧಾರ್ಮಿಕ ಮುಖಂಡರು ಸಭೆಯಲ್ಲಿ ತಿಳಿಸಿದರು.

ರಾಜ್ಯ ಸರ್ಕಾರ ಮುಚ್ಚಲ್ಪಟ್ಟಿದ್ದ ಚರ್ಚ್‌ಗಳನ್ನು ಜೂನ್ 8ರಿಂದ ತೆರೆಯಲು ಅವಕಾಶ ನೀಡಿದ್ದು ಸ್ವಾಗತಾರ್ಹ. ಆದರೆ, ಲಾಕ್‌ಡೌನ್ ಆರಂಭದಲ್ಲಿ ಕನಿಷ್ಠದಲ್ಲಿದ್ದ ಸೋಂಕು ಪ್ರಸ್ತುತ ಎರಡೂವರೆ ಲಕ್ಷ ಮೀರಿದೆ. ನಿತ್ಯ ಹತ್ತು ಸಾವಿರಕ್ಕೂ ಹೆಚ್ಚು ಮಂದಿಗೆ ಸೋಂಕು ತಗುಲುತ್ತಿದೆ.

ಉಡುಪಿ ಜಿಲ್ಲೆಯಲ್ಲಿ ಆರಂಭದಲ್ಲಿ ಬೆರಳೆಣಿಕೆಯಷ್ಟಿದ್ದ ಕೊರೊನಾ ಪೀಡಿತರ ಸಂಖ್ಯೆ ಸಾವಿರ ಆಸುಪಾಸಿನಲ್ಲಿದೆ. ಈ ಎಲ್ಲ ವಿಷಯಗಳನ್ನು ಮನಗಂಡು ಸದ್ಯ ಚರ್ಚ್‌ಗಳಲ್ಲಿ ಸಾಮೂಹಿಕ ಪ್ರಾರ್ಥನೆ, ಪೂಜೆ ನಡೆಸದಿರಲು ನಿರ್ಧರಿಸಲಾಗಿದೆ ಎಂದು ಉಡುಪಿ ಧರ್ಮಾಧ್ಯಕ್ಷರಾದ ಡಾ. ಜೆರಾಲ್ಡ್ ಲೋಬೊ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು