ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿಯಲ್ಲಿ ಮೊದಲ ದಿನವೇ ನೀರಸ: ಬಸ್‌ಗಳು ಖಾಲಿ

ಕುಂದಾಪುರ, ಕಾರ್ಕಳ, ಕಾಪು ಮಾರ್ಗಗಳಲ್ಲಿ ಮಾತ್ರ ಸಂಚಾರ
Last Updated 13 ಮೇ 2020, 14:52 IST
ಅಕ್ಷರ ಗಾತ್ರ

ಉಡುಪಿ: ಜಿಲ್ಲೆಯಲ್ಲಿ ಲಾಕ್‌ಡೌನ್‌ ಜಾರಿಯಾದ ನಂತರ ಮೊದಲ ಬಾರಿಗೆ ಬಸ್‌ ಸಂಚಾರ ಆರಂಭವಾಗಿದ್ದು, ಮೊದಲ ದಿನವೇ ಪ್ರಯಾಣಿಕರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಬಸ್‌‌ ಸಾಮರ್ಥ್ಯದ ಅರ್ಧದಷ್ಟು ಸೀಟುಗಳೂ ಭರ್ತಿಯಾಗಿರಲಿಲ್ಲ. ಕೆಲವು ಮಾರ್ಗಗಳಿಗೆ ಪ್ರಯಾಣಿಕರೇ ಇರಲಿಲ್ಲ.

ಸುಮಾರು ಒಂದೂವರೆ ತಿಂಗಳ ಬಳಿಕ ಬಸ್‌ಗಳು ರಸ್ತೆಗಿಳಿಯುತ್ತಿರುವುದರಿಂದ ದಟ್ಟಣೆ ಹೆಚ್ಚಬಹುದು ಎಂಬ ನಿರೀಕ್ಷೆ ಇತ್ತು. ಬಸ್‌ನ ಒಳಗೆ ಅಂತರ ಕಾಯ್ದುಕೊಳ್ಳುವುದು ಹೇಗೆ ಎಂಬ ಆತಂಕವಿತ್ತು. ಆದರೆ, ಬುಧವಾರ ಒಂದು ಬಸ್‌ನಲ್ಲಿ ಹೆಚ್ಚೆಂದರೆ 10 ರಿಂದ 12 ಪ್ರಯಾಣಿಕರು ಮಾತ್ರ ಸಂಚರಿಸಿದರು ಎಂದು ಕೆಎಸ್‌ಆರ್‌ಟಿಸಿ ಸಿಬ್ಬಂದಿ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಜಿಲ್ಲಾಡಳಿತ ಉಡುಪಿಯಿಂದ ಕುಂದಾಪುರ, ಕಾರ್ಕಳ, ಹೆಬ್ರಿ, ಕಾಪು, ಮಣಿಪಾಲ, ಬಾರ್ಕೂರು, ಮಲ್ಪೆ, ಹೂಡೆ, ಬ್ರಹ್ಮಾವರ ಭಾಗಗಳಿಗೆ ಸಂಚರಿಸಲು 20 ಬಸ್‌ಗಳ ವ್ಯವಸ್ಥೆ ಮಾಡಿತ್ತು. ಆದರೆ, ಹೆಚ್ಚಿನ ಮಾರ್ಗಗಳಿಗೆ ಪ್ರಯಾಣಿಕರು ಇರಲಿಲ್ಲ ಎಂದು ಸಿಬ್ಬಂದಿ ತಿಳಿಸಿದರು.

ಬೆಳಿಗ್ಗೆ ಕುಂದಾಪುರ, ಕಾರ್ಕಳ, ಕಾಪು ಮಾರ್ಗವಾಗಿ ಕೆಲವು ಬಸ್‌ಗಳು ಸಂಚರಿಸಿದವು. ಮಧ್ಯಾಹ್ನದ ಬಳಿಕ ಕೆಲವು ಮಾರ್ಗಗಳಿಗೆ ಪ್ರಯಾಣಿಕರು ಇರಲಿಲ್ಲವಾದ್ದರಿಂದ ಬಸ್‌ಗಳನ್ನು ಓಡಿಸಲಿಲ್ಲ. ಕುಂದಾಪುರಕ್ಕೆ ಮೂರು ಟ್ರಿಪ್‌ ಹಾಗೂ ಕಾರ್ಕಳ ತಾಲ್ಲೂಕುಗಳಿಗೆ 2 ಟ್ರಿಪ್‌ ಬಸ್‌ಗಳು ಸಂಚರಿಸಿದವು ಎಂದು ತಿಳಿಸಿದರು.

ಉಡುಪಿಯಿಂದ ನೆರೆಯ ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗೆ ಹೆಚ್ಚು ಪ್ರಯಾಣಿಕರು ಸಂಚರಿಸುತ್ತಾರೆ. ಎರಡೂ ಜಿಲ್ಲೆಗಳು ಲಾಕ್‌ಡೌನ್‌ ಆಗಿರುವುದರಿಂದ ದಟ್ಟಣೆ ಇಲ್ಲವಾಗಿದೆ. ಜಿಲ್ಲೆಯೊಳಗೆ ಸಂಚರಿಸಲು ಸಾರ್ವಜನಿಕರು ಹೆಚ್ಚಾಗಿ ಸ್ವಂತ ವಾಹನಗಳನ್ನು ಬಳಸುವುದರಿಂದ ಪ್ರಯಾಣಿಕರ ಸಂಖ್ಯೆ ಕುಸಿದಿದೆ ಎಂದು ಚಾಲಕರು ತಿಳಿಸಿದರು.

ಸಾರ್ವಜನಿಕರಲ್ಲಿ ಕೊರೊನಾ ಸೋಂಕಿನ ಭಯ ದೂರವಾಗಿಲ್ಲ. ಬಸ್‌ಗಳಲ್ಲಿ ಅಂತರ ಕಾಯ್ದುಕೊಳ್ಳುವುದು ಕಷ್ಟ ಎಂಬ ಕಾರಣಕ್ಕೆ ಸಂಖ್ಯೆ ಇಳಿಮುಖವಾಗಿರಬಹುದು. ಪರಿಸ್ಥಿತಿ ಸುಧಾರಿಸಿದ ಬಳಿಕ ಸಾರಿಗೆ ವ್ಯವಸ್ಥೆ ಸಹಜ ಸ್ಥಿತಿಗೆ ಬರಬಹುದು ಎಂದು ಅಭಿಪ್ರಾಯಪಟ್ಟರು ಚಾಲಕರು.

6 ಖಾಸಗಿ ಬಸ್‌ಗಳು ಮಾತ್ರ ಸಂಚಾರ

16 ಖಾಸಗಿ ಬಸ್‌ಗಳಿಗೆ ಸಂಚರಿಸಲು ಸಾರಿಗೆ ಇಲಾಖೆ ಅನುಮತಿ ನೀಡಿದ್ದರೂ ಪ್ರಯಾಣಿಕರಿಲ್ಲದ ಪರಿಣಾಮ 6 ಬಸ್‌ಗಳು ಮಾತ್ರ ಸಂಚರಿಸಿದವು. ಬುಧವಾರ ಉಡುಪಿ–ಕುಂದಾಪುರ ಮಾರ್ಗದಲ್ಲಿ ಮಾತ್ರ ಬಸ್‌ಗಳು ಓಡಾಡಿದವು ಎಂದು ಚಾಲಕರು ತಿಳಿಸಿದರು.

ಬೆಳಿಗ್ಗೆ ಕೆಲವರು ಮಾಸ್ಕ್‌ ಧರಿಸದೆ ಬಂದಿದ್ದರು. ಅವರಿಗೆ ಮಾಸ್ಕ್‌ ಕೊಡಲಾಯಿತು. ಬಸ್‌ ಸಾಮರ್ಥ್ಯದ ಅರ್ಧದಷ್ಟು ಆಸನಗಳಲ್ಲಿ ಮಾತ್ರ ಪ್ರಯಾಣಿಕರು ಇರಬೇಕು ಎಂದು ಅಧಿಕಾರಿಗಳು ಸೂಚನೆ ನೀಡಿದ್ದರು. ಆದರೆ, ಪ್ರತಿ ಟ್ರಿಪ್‌ನಲ್ಲೂ ಬಸ್‌ನಲ್ಲಿ ಕೇವಲ 10 ರಿಂದ 12 ಜನ ಮಾತ್ರ ಇದ್ದರು. ಆದರೂ ನಿಗಧಿಯಂತೆ ₹ 45 ದರ ಪಡೆಯಲಾಯಿತು ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT