ಅಧಿಕಾರ ಅನುಭವಿಸಿ ಪಕ್ಷ ಬಿಟ್ಟವರು ಸಾಕಷ್ಟಿದ್ದಾರೆ: ಎಂ.ಗಂಗಣ್ಣ

7

ಅಧಿಕಾರ ಅನುಭವಿಸಿ ಪಕ್ಷ ಬಿಟ್ಟವರು ಸಾಕಷ್ಟಿದ್ದಾರೆ: ಎಂ.ಗಂಗಣ್ಣ

Published:
Updated:
Deccan Herald

ಉಡುಪಿ: ಕಾಂಗ್ರೆಸ್‌ನಲ್ಲಿರುವ 10ಕ್ಕೂ ಹೆಚ್ಚು ಮಂತ್ರಿಗಳು ಹಿಂದೆ ಜೆಡಿಎಸ್‌ನಲ್ಲಿ ಅಪ್ಪಾಜಿಯ (ದೇವೇಗೌಡ) ಕೈಕೆಳಗೆ ಬೆಳೆದವರು. ಎಲ್ಲ ಸ್ಥಾನಮಾನ ಅನುಭವಿಸಿದವರು. ಬಳಿಕ ಅಧಿಕಾರಕ್ಕಾಗಿ ಪಕ್ಷಾಂತರ ಮಾಡಿದವರು ಎಂದು ಜೆಡಿಎಸ್‌ ರಾಜ್ಯ ಘಟಕದ ಉಪಾಧ್ಯಕ್ಷ ಎಂ.ಗಂಗಣ್ಣ ಹೇಳಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅಧಿಕಾರಕ್ಕಾಗಿ ಜೆಡಿಎಸ್‌ ಬಿಟ್ಟು ಬೇರೆ ಪಕ್ಷ ಸೇರಿದವರಿದ್ದಾರೆ. ಬಿಜೆಪಿ ಸೇರಿರುವ ಜಯಪ್ರಕಾಶ್ ಹೆಗ್ಡೆ ಹಾಗೂ ಕಾಂಗ್ರೆಸ್ ಸೇರಿರುವ ದೇವಿಪ್ರಸಾದ್ ಶೆಟ್ಟಿ ಜೆಡಿಎಸ್‌ ಪಕ್ಷದಲ್ಲಿ ಬೆಳೆದು ಬಂದವರು. ಪಕ್ಷ ತೊರೆದರೆ ಜೆಡಿಎಸ್‌ಗೆ ನಷ್ಟವಿಲ್ಲ; ಜನರ ಬೆಂಬಲ ಇದೆ ಎಂದರು.

‘ರಾಷ್ಟ್ರೀಯ ಪಕ್ಷಗಳಿಗೆ ಹೋಲಿಸಿದರೆ ಜೆಡಿಎಸ್‌ ಸಣ್ಣ ಪಕ್ಷವಾಗಿರಬಹುದು. ಆದರೆ, ಜನಪರ ಪಕ್ಷ. ಮತದಾರರು ಕೇವಲ ಹಣ ಇರುವ ಪಕ್ಷಕ್ಕೆ ಬೆಂಬಲ ನೀಡುವುದಿಲ್ಲ, ತಮ್ಮ ಪರವಾಗಿರುವ ಪಕ್ಷಕ್ಕೂ ಬೆಂಬಲ ನೀಡುತ್ತಾರೆ’ ಎಂದರು.

ರಾಜ್ಯ ಸಮ್ಮಿಶ್ರ ಸರ್ಕಾರದಲ್ಲಿ ಭಿನ್ನಾಭಿಪ್ರಾಯಗಳಿರಬಹುದು, ಆದರೆ, ಅದರಿಂದ ಸರ್ಕಾರಕ್ಕೆ ಅಪಾಯವಿಲ್ಲ. ರಾಜ್ಯದ ಅಭಿವೃದ್ಧಿಯ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಗಂಗಣ್ಣ ಅಭಿಪ್ರಾಯಪಟ್ಟರು.

ಕುಮಾರಸ್ವಾಮಿ ತಾವಾಗಿಯೇ ಸರ್ಕಾರ ರಚಿಸಲು ಮುಂದೆ ಹೋಗಿರಲಿಲ್ಲ. ಕಾಂಗ್ರೆಸ್ ಪಕ್ಷವೇ ಯಾವ ಷರತ್ತು ಹಾಕದೆ, ಕುಮಾರಸ್ವಾಮಿ ಅವರಿಗೆ ಸರ್ಕಾರ ರಚಿಸುವಂತೆ ಮನವಿ ಮಾಡಿತ್ತು. ಈಗ ಕೆಲವು ಷರತ್ತುಗಳನ್ನು ಹಾಕುತ್ತಿದ್ದಾರೆ. ಜೆಡಿಎಸ್‌ನಿಂದಲೂ ಷರತ್ತುಗಳನ್ನು ಹಾಕಲಾಗಿದೆ. ಸಮ್ಮಿಶ್ರ ಸರ್ಕಾರದಲ್ಲಿ ಇವೆಲ್ಲವನ್ನು ಸಹಿಸಿಕೊಳ್ಳುವುದು ಅನಿವಾರ್ಯ ಎಂದರು.‌

‘ಕರಾವಳಿ ಭಾಗದ ಜಿಲ್ಲೆಗಳಲ್ಲಿ ಪಕ್ಷದ ಸ್ಥಿತಿ ಅರಿಯಲು ಪ್ರವಾಸ ಮಾಡಲಾಗುತ್ತಿದ್ದೇನೆ. ಉತ್ತರ ಕನ್ನಡ ಜಿಲ್ಲೆಯ ತಾಲ್ಲೂಕುಗಳಲ್ಲಿ ಕಾರ್ಯಕರ್ತರ ಸಭೆ ನಡೆಸಿದ್ದೇನೆ. ಉಡುಪಿಯಲ್ಲಿಯೂ ಸಭೆ ನಡೆಸುತ್ತಿದ್ದೇನೆ. ಆರ್ಥಿಕ ಸಂಪನ್ಮೂಲ ಇಲ್ಲದಿದ್ದರೂ ಇಲ್ಲಿ ಪಕ್ಷ ಬೆಳೆಯುತ್ತಿದೆ. ಜನರು ಜೆಡಿಎಸ್ ಕಡೆ ಒಲವು ಹೊಂದಿದ್ದಾರೆ’ ಎಂದರು.

ಜಿಲ್ಲಾಧ್ಯಕ್ಷ ಯೋಗೀಶ್‌ ಶೆಟ್ಟಿ ಮಾತನಾಡಿ, ‘ಸಾಲಮನ್ನಾದ ಬಗ್ಗೆ ಬಿಜೆಪಿ ಜನರಲ್ಲಿ ಗೊಂದಲ ಮೂಡಿಸುತ್ತಿದೆ. ರೈತರು ಚಿಂತೆ ಮಾಡುವ ಅವಶ್ಯಕತೆ ಇಲ್ಲ. ನ.10ರ ಒಳಗೆ ರೈತರಿಗೆ ಸರ್ಕಾರದಿಂದ ಋಣಮುಕ್ತ ಪತ್ರವನ್ನು ನೀಡಲಾಗುತ್ತದೆ ಎಂದು ಭವರಸೆ ನೀಡಿದರು.

ಜಿಲ್ಲೆಯಲ್ಲಿನ ಮರುಳು ಸಮಸ್ಯೆಯ ಬಗ್ಗೆ ಮುಖ್ಯಮಂತ್ರಿ ಗಮನ ಸಳೆಯಲಾಗಿದೆ. ಶ್ರೀಘ್ರ ಸಂಪ್ರಾದಾಯಿಕ ಮರಳುಗಾರಿಕೆ ಆರಂಭವಾಗಲಿದೆ. ಒಂದುವೇಳೆ ವಿಳಂಬವಾದರೆ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಮುಖಂಡರಾದ ಪ್ರದೀಪ್, ದೀಪಕ್, ಇಲಿಯಾಸ್ ಇಬ್ರಾಹಿಂ, ವಾಸುದೇವ್ ಅವರೂ ಸುದ್ದಿಗೋಷ್ಠಿಯಲ್ಲಿ ಇದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !