ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕದಿಕೆ ತೀರದಲ್ಲಿ ಸಮುದ್ರದ ಅಲೆಗಳಿಂದ ವಿದ್ಯುತ್

ವಿದ್ಯುತ್ ಉತ್ಪಾದನೆ ಹಾಗೂ ಸಂಶೋಧನಾ ಘಟಕ ನಿರ್ಮಾಣ: ಸುಸಿ ಸಂಸ್ಥಾಪಕ ವಿಜಯ ಕುಮಾರ್ ಹೆಗ್ಡೆ
Last Updated 9 ನವೆಂಬರ್ 2020, 15:23 IST
ಅಕ್ಷರ ಗಾತ್ರ

ಉಡುಪಿ: ಸಮುದ್ರದ ಅಲೆಗಳಿಂದ ವಿದ್ಯುತ್ ಉತ್ಪಾದಿಸುವ ಪ್ರಯತ್ನ ಅಂತಿಮ ಹಂತಕ್ಕೆ ಬಂದಿದ್ದು, ಕದಿಕೆಯ ಸಮುದ್ರದಲ್ಲಿ ಪೂರ್ಣ ಪ್ರಮಾಣದ ವಿದ್ಯುತ್ ಉತ್ಪಾದನಾ ಘಟಕ ಹಾಗೂ ಸಂಶೋಧನಾ ಕೇಂದ್ರ ಸ್ಥಾಪಿಸಲಾಗುತ್ತಿದೆ. ಜನವರಿ ಹೊತ್ತಿಗೆ ವಿದ್ಯುತ್ ಉತ್ಪಾದನೆ ನಡೆಯಲಿದೆ ಎಂದು ಸುಸಿ ಗ್ಲೋಬಲ್‌ ರಿಸರ್ಚ್‌ ಸೆಂಟರ್‌ನ ಸಂಸ್ಥಾಪಕ ವಿಜಯ ಕುಮಾರ್ ಹೆಗ್ಡೆ ತಿಳಿಸಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮುದ್ರದ ಅಲೆಗಳಿಂದ ವಿದ್ಯುತ್ ಉತ್ಪಾದಿಸುವ ಪ್ರಯತ್ನ 2003ರಲ್ಲಿ ಆರಂಭವಾಗಿ, 2004ರಲ್ಲಿ ಪೇಟೆಂಟ್‌ ದೊರೆಯಿತು. ಅಂದಿನಿಂದ ಸಂಶೋಧನೆಗಳನ್ನು ನಡೆಸುತ್ತಿದ್ದು, ಕೋಟ್ಯಂತರ ರೂಪಾಯಿಗಳನ್ನು ವ್ಯಯಿಸಲಾಗಿದೆ. ಈಗ ವಿದ್ಯುತ್ ಉತ್ಪಾದನಾ ಪ್ರಕ್ರಿಯೆ ಅಂತಿಮ ಹಂತ ತಲುಪಿದೆ. ಸುಸಿ ಸಂಸ್ಥೆಯ ಜತೆಗೆ ಬೆಂಗಳೂರಿನ ಈಸ್ಟ್‌ ವೆಸ್ಟ್‌ ಗ್ರೂಪ್‌ ಆಫ್‌ ಇನ್‌ಸ್ಟಿಟ್ಯೂಟ್‌ ಕೈಜೋಡಿಸಿದೆ ಎಂದು ಮಾಹಿತಿ ನೀಡಿದರು.

ವಾಣಿಜ್ಯ ಬಳಕೆಗೆ ವಿದ್ಯುತ್ ಉತ್ಪಾದಿಸಲು ಸರ್ಕಾರಕ್ಕೆ ‘ಕಾರ್ಯಸಾಧ್ಯತೆ’ ವರದಿ ಸಲ್ಲಿಕೆ ಮಾಡುವುದು ಕಡ್ಡಾಯವಾಗಿರುವುದರಿಂದ ಕದಿಕೆ ಸಮುದ್ರ ಕಿನಾರೆಯಲ್ಲಿ ವಿದ್ಯುತ್ ಉತ್ಪಾದನಾ ಘಟಕ ಅಳವಡಿಸಲಾಗುತ್ತಿದೆ. ಈ ಘಟಕ ನಿರ್ಮಾಣಕ್ಕೆ ಸುಮಾರು ₹ 3.5 ಕೋಟಿ ವೆಚ್ಚವಾಗಿದೆ. ಸ್ಥಳೀಯ ಗ್ರಾಮ ಪಂಚಾಯಿತಿ, ಪೊಲೀಸ್ ಠಾಣೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಂದ ಘಟಕ ನಿರ್ಮಿಸಲು ಅನುಮತಿ ಪಡೆಯಲಾಗಿದೆ ಎಂದರು.

ನವೀಕರಿಸಬಹುದಾದ ಸಂಪನ್ಮೂಲಗಳಿಂದ ಪ್ರಕೃತಿಗೆ ಹಾನಿಯಾಗದಂತೆ ವಿದ್ಯುತ್ ಉತ್ಪಾದಿಸಲು ಪ್ರಧಾನಿ ನರೇಂದ್ರ ಮೋದಿ ಒತ್ತು ನೀಡಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರೂ ಸಂಸ್ಥೆಯ ಯೋಜನೆಗೆ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದು, ಮಂಗಳೂರಿನಲ್ಲಿ ನಡೆದ ರಾಜ್ಯ ಕಾರ್ಯಕಾರಿಣಿಯಲ್ಲಿ ಸಹಕಾರ ಘೋಷಿಸಿದ್ದಾರೆ. ಇದರ ಬೆನ್ನಲ್ಲೇ ಕದಿಕೆ ತೀರದಲ್ಲಿ ವಿದ್ಯುತ್ ಉತ್ಪಾದನಾ ಘಟಕ ಹಾಗೂ ಸಂಶೋಧನಾ ಕೇಂದ್ರ ಆರಂಭವಾಗುತ್ತಿರುವುದು ಸಂತಸ ತಂದಿದೆ ಎಂದರು.

ಈ ಪ್ರಾಜೆಕ್ಟ್‌ನಿಂದ ಮೀನುಗಾರರಿಗೆ, ಸ್ಥಳೀಯರಿಗೆ ಸಮಸ್ಯೆ ಇಲ್ಲ. ಬದಲಿಗೆ ಅಲೆಗಳ ಉಬ್ಬರ ಹೆಚ್ಚಿರುವ ಕಡೆ ಘಟಕ ನಿರ್ಮಿಸಿದರೆ ಕಡಲ್ಕೊರೆತ ಸಮಸ್ಯೆ ತಡೆಯಬಹುದು ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ನಿವೃತ್ತ ಪ್ರಾಂಶುಪಾಲ ನಾರಾಯಣ ಪಿ.ಶಾನುಭಾಗ್‌, ಉದ್ಯಮಿ ಮೋಹಕ್ ರಾಜ್ ಹೆಗ್ಡೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT