ಗುರುವಾರ , ಜೂನ್ 17, 2021
21 °C
ಸೆಣಬು ಅಥವಾ ಹಸಿರೆಲೆ ಗೊಬ್ಬರದ ಬೀಜ ಬಿತ್ತಲು ಸಕಾಲ

ರೈತರಿಗೆ ಮಳೆಗಾಲದ ಪೂರ್ವ ತಯಾರಿ

ಶೇಷಗಿರಿ ಭಟ್‌ Updated:

ಅಕ್ಷರ ಗಾತ್ರ : | |

Prajavani

ಬ್ರಹ್ಮಾವರ: ಈ ಬಾರಿ ತಿಂಗಳಿಗೆ ಒಂದೆರಡು ಬಾರಿ ಮಳೆ ಬರುತ್ತಿರುವುದರಿಂದ ಕೋವಿಡ್ ಆತಂಕದ ನಡುವೆಯೂ ರೈತರು ಕೃಷಿ ಚಟುವಟಿಕೆಗೆ ಆಸಕ್ತಿ ತೋರುತ್ತಿದ್ದಾರೆ.

ಮಾಗಿ ಉಳುಮೆ ಕೃಷಿಕರಿಗೆ ಅತಿ ಮುಖ್ಯ. ಇದರಿಂದ ಭೂಮಿಯಲ್ಲಿರುವ ಅಪಾಯಕಾರಿ ಕೀಟಗಳ ಮೊಟ್ಟೆಗಳು ಸೂರ್ಯನ ಬಿಸಿಲಿಗೆ ಒಡ್ಡಿದಾಗ, ಅವು ನಾಶವಾಗುತ್ತವೆ ಮತ್ತು ಇರುವೆಗಳಿಗೆ ಆಹಾರವಾಗುತ್ತದೆ. ಇದಲ್ಲದೆ ಮಣ್ಣು, ಸೂರ್ಯನ ಬಿಸಿಲಿಗೆ ಒಡ್ಡಿದಾಗ ಭೂಮಿಯಲ್ಲಿ ಪೊಟ್ಯಾಷಿಯಂ ಲಭ್ಯತೆ ಜಾಸ್ತಿಯಾಗಿ ಇಳುವರಿ ಹೆಚ್ಚಾಗಲು ಕಾರಣವಾಗುತ್ತದೆ.

ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಧನಂಜಯ ಮಳೆಗಾಲದ ಪೂರ್ವ ತಯಾರಿ ಬಗ್ಗೆ ವಿಶೇಷವಾಗಿ ರೈತರಿಗೆ ಈ ರೀತಿ ಸಲಹೆ ನೀಡಿದ್ದಾರೆ.

ಮಣ್ಣಿನ ಭೌತಿಕ, ರಾಸಾಯನಿಕ ಹಾಗೂ ಜೈವಿಕ ಗುಣಗಳ ಅನುಕೂಲಕರ ಬದಲಾವಣೆಗೆ ಹಸಿರೆಲೆ ಗೊಬ್ಬರ ಸಹಕಾರಿಯಾಗುತ್ತದೆ. ಮಣ್ಣಿನಲ್ಲಿ ಸಾವಯವ ಅಂಶವನ್ನು ಕಾಪಾಡಿಕೊಂಡು ಬರಲು, ಮಣ್ಣಿನಲ್ಲಿರುವ ಜೈವಿಕ ಸೂಕ್ಷ್ಮಾಣುಗಳ ಚಟುವಟಿಕೆ ಹಾಗೂ ಅಭಿವೃದ್ಧಿಗೆ ನೆರವಾಗಲು, ಸಾವಯವ ವಸ್ತುಗಳು ಕೊಳೆತು ಅವುಗಳಲ್ಲಿರುವ ಪೋಷಕಾಂಶಗಳು ಬೆಳೆಗೆ ಲಭ್ಯವಾಗಲು ಇದು ಸಹಕಾರಿ ಎನ್ನುತ್ತಾರೆ ಅವರು.

ಹಸಿರೆಲೆ ಗೊಬ್ಬರದ ಸಸ್ಯಗಳು ಮಣ್ಣಿನ ಮೇಲೆ ಹೊದಿಕೆಯಾಗಿರುವುದರಿಂದ ಮಳೆಯ ನೀರು ಹೆಚ್ಚಾಗಿ ಇಂಗಿ, ಮಣ್ಣು ಕೊಚ್ಚಿಹೋಗುವುದು ಕಡಿಮೆಯಾಗುತ್ತದೆ. ಸಸ್ಯಗಳು ಕೊಳೆಯುವಾಗ ಹೊರಬರುವ ಆಮ್ಲಗಳಿಂದ ಪೋಷಕಾಂಶ ಲಭ್ಯತೆ ಹೆಚ್ಚುತ್ತದೆ. ಕ್ಷಾರ ಮಣ್ಣಿನ ಸುಧಾರಣೆಯಲ್ಲಿ ನೆರವಾಗಲು, ಜಂತು ಹುಳುವಿನ ಬಾಧೆಯ ನಿಯಂತ್ರಣದಲ್ಲೂ ಹಸಿರೆಲೆ ಗೊಬ್ಬರ ನೆರವಾಗುತ್ತದೆ ಎಂದು ಅವರು ತಿಳಿಸಿದರು.

ಈಗಾಗಲೆ ನಿರಂತರವಾಗಿ ಮಳೆ ಬಂದು ಭೂಮಿ ತಂಪಾಗಿದೆ. ಟಿಲ್ಲರ್‌ನಿಂದ ಒಂದು ಸಾಲು ಉಳುಮೆ ಮಾಡಿ ನಂತರ ಸೆಣಬಿನ ಬೀಜವನ್ನು ಸಮಾನಾಂತರವಾಗಿ ಬಿತ್ತನೆ ಮಾಡಿ ಮತ್ತೊಂದು ಸಾಲು ಉಳುಮೆ ಮಾಡಬೇಕು. ಗದ್ದೆಯಲ್ಲಿ ಪಸೆ ಇಲ್ಲದಿದ್ದರೂ ಇದನ್ನು ಬಿತ್ತನೆ ಮಾಡಬಹುದಾಗಿದೆ. ಬೀಜಕ್ಕೆ ಬೇಕಾದಷ್ಟು ತೇವಾಂಶ ಸಿಕ್ಕಿದಾಗ ಅದು ಮೊಳಕೆಯೊಡೆದು ಗಿಡವಾಗುತ್ತದೆ. ಇದು ಸರಿಯಾಗಿ ಬೆಳೆಯಲು 35 ರಿಂದ 45 ದಿನಗಳು ಬೇಕಾಗುತ್ತವೆ. ಮಳೆಗಾಲ ಆರಂಭದೊಳಗೆ ಕೃಷಿಕರು ನೇಜಿ ಸಿದ್ಧತೆ ಮಾಡಿಕೊಳ್ಳಬಹುದು. ಸೆಣಬಿನ ಬೆಳೆ ಹೂ ಬರುವ ಮೊದಲು ಇದನ್ನು ಮಣ್ಣಿಗೆ ಸೇರಿಸಬೇಕು. ಈ ರೀತಿ ಮಾಡುವುದರಿಂದ 3ರಿಂದ 5 ಟನ್ ಹಸಿರೆಲೆ ಗೊಬ್ಬರಗಳನ್ನು ಮಣ್ಣಿಗೆ ಸೇರಿಸಿದಂತಾಗುತ್ತದೆ ಮತ್ತು ಉತ್ಕೃಷ್ಟ ಭತ್ತ ಬೆಳೆಯಲು ಅನುಕೂಲವಾಗುತ್ತದೆ ಎಂದು ಡಾ.ಧನಂಜಯ ಹೇಳುತ್ತಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.