ಭಾನುವಾರ, ಸೆಪ್ಟೆಂಬರ್ 15, 2019
26 °C
ಸಕಾಲದಡಿ ಅರ್ಜಿ ನಮೂದಿಸದೆ ವಿಲೇವಾರಿ: ಪರಿಶೀಲನೆಗೆ ಜಿಲ್ಲಾಧಿಕಾರಿ ಸೂಚನೆ

ಸಕಾಲ ಉಲ್ಲಂಘನೆ: 98 ಗ್ರಾ.ಪಂ, 9 ಪಿಎಚ್‌ಸಿಗಳಿಗೆ ನೋಟಿಸ್‌

Published:
Updated:
Prajavani

ಉಡುಪಿ: ‘ಇಂದು ನಾಳೆ ಇನ್ನಿಲ್ಲ; ಹೇಳಿದ ದಿನ ತಪ್ಪೊಲ್ಲ’ ಎಂಬ ಘೋಷಣೆಯೊಂದಿಗೆ ರಾಜ್ಯ ಸರ್ಕಾರ 2011ರಲ್ಲಿ ಸಕಾಲ ಯೋಜನೆಯನ್ನು ಜಾರಿಗೊಳಿಸಿದೆ. ಸಾರ್ವಜನಿಕರಿಗೆ ತ್ವರಿತವಾಗಿ ಸರ್ಕಾರದ ಸೇವೆಗಳು ಸಿಗಬೇಕು ಎಂಬುದು ಯೋಜನೆಯ ಪ್ರಮುಖ ಉದ್ದೇಶ. ಆದರೆ, ಜಿಲ್ಲೆಯಲ್ಲಿ ಸಕಾಲದ ಆಶಯ ಸಮರ್ಪಕವಾಗಿ ಈಡೇರುತ್ತಿಲ್ಲ ಎಂಬ ಆರೋಪಗಳು ಕೇಳಿಬಂದಿವೆ.

ಸಾರ್ವಜನಿಕರಿಂದ ಸ್ವೀಕರಿಸಲಾಗುವ ಅರ್ಜಿಗಳನ್ನು ಸಕಾಲ ಯೋಜನೆಯಡಿ ನಮೂದಿಸಿಯೇ ನಿರ್ದಿಷ್ಟ ಕಾಲಾವಧಿಯಲ್ಲಿ ವಿಲೇವಾರಿ ಮಾಡಬೇಕು. ಆದರೆ, ಆಗಸ್ಟ್‌ ತಿಂಗಳ ಸಕಾಲ ಯೋಜನೆಯ ಅರ್ಜಿ ಸ್ವೀಕೃತಿಗಳ ದತ್ತಾಂಶದ ಪ್ರಕಾರ ಜಿಲ್ಲೆಯಲ್ಲಿ 98 ಗ್ರಾಮ ಪಂಚಾಯಿತಿಗಳು ಹಾಗೂ 9 ಪ್ರಾಥಮಿಕ ಆರೋಗ್ಯ ಕೇಂದ್ರಗಳು ಒಂದೂ ಅರ್ಜಿಯನ್ನು ಸಕಾಲದಡಿ ಸ್ವೀಕರಿಸಿಲ್ಲ.

ಸಕಾಲದಡಿ ಅರ್ಜಿಗಳನ್ನು ನಮೂದಿಸದೆ ನೇರವಾಗಿ ವಿಲೇವಾರಿ ಮಾಡಲಾಗುತ್ತಿದ್ದು, ಇದು ಕಾಯ್ದೆಯ ಅಧಿನಿಯಮದ ಸ್ಪಷ್ಟ ಉಲ್ಲಂಘನೆ ಎಂದು ಸರ್ಕಾರ ಆಕ್ಷೇಪ ವ್ಯಕ್ತಪಡಿಸಿದೆ. ಜತೆಗೆ, ಈ ಬಗ್ಗೆ ಪರಿಶೀಲಿಸುವಂತೆ ಜಿಲ್ಲಾಡಳಿತಕ್ಕೆ ಸೂಚಿಸಿದೆ. 

ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾಧಿಕಾರಿ ಜಿ. ಜಗದೀಶ್ ಅವರು, ‘ಯಾವುದೇ ಇಲಾಖೆ ಅಥವಾ ಕಚೇರಿಗಳಲ್ಲಿ ಸಕಾಲದಡಿ ಗುರುತಿಸಲಾದ ಸೇವೆಗಳನ್ನು ಸಕಾಲದಯಡಿಯಲ್ಲಿಯೇ ನಮೂದಿಸಬೇಕು. ನೇರವಾಗಿ ಅರ್ಜಿಗಳನ್ನು ವಿಲೇವಾರಿ ಮಾಡಿದರೆ ಅಂತಹ ಅಧಿಕಾರಿಗಳ ಮೇಲೆ ಶಿಸ್ತು ಕ್ರಮಕ್ಕೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು’ ಎಂದು ಎಚ್ಚರಿಕೆ ನೀಡಿದ್ದಾರೆ.

ಈ ಸಂಬಂಧ ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದ ಸಕಾಲ ಅಧಿಕಾರಿ ಚೇತನ್‌, ‘ತಾಂತ್ರಿಕ ಸಮಸ್ಯೆಗಳ ಕಾರಣದಿಂದ ಸಕಾಲದಡಿ ಅರ್ಜಿಗಳನ್ನು ವಿಲೇವಾರಿ ಮಾಡಲಾಗಿಲ್ಲ ಎಂದು ಕೆಲವು ಗ್ರಾಮ ಪಂಚಾಯಿತಿಗಳು ಕಾರಣ ನೀಡಿವೆ. ಆದರೆ ಸಾರ್ವಜನಿಕರಿಗೆ ಸೇವೆ ನೀಡುವಲ್ಲಿ ತೊಂದರೆಯಾಗಿಲ್ಲ’ ಎಂದು ಮಾಹಿತಿ ನೀಡಿದರು.

‘ಗ್ರಾಮ ಪಂಚಾಯಿತಿಗಳಲ್ಲಿ ಪಂಚತಂತ್ರ ಸಾಫ್ಟ್‌ವೇರ್‌ ಮೂಲಕ ಜನರಿಗೆ ಪ್ರಮಾಣಪತ್ರಗಳನ್ನು ವಿತರಿಸಲಾಗುತ್ತದೆ. ಈಚೆಗೆ ಸರ್ಕಾರ ಪಂಚತಂತ್ರವನ್ನು ಸಕಾಲದೊಂದಿಗೆ ಸಂಯೋಜಿಸಿದೆ. ಆದರೆ, ಕೆಲವು ಗ್ರಾಮ ಪಂಚಾಯಿತಿಗಳಲ್ಲಿ ಡಿಜಿಟಲ್‌ ಸಹಿ ಕೀ ಲಭ್ಯವಿಲ್ಲ. ಅಧಿಕಾರಿಗಳು ಸಂಬಂಧಪಟ್ಟ ಇಒ ಕಚೇರಿಯಲ್ಲಿ ಡಿಜಿಟಿಲ್‌ ಸಹಿ ಕೀ ಪಡೆಯಬೇಕಿತ್ತು. ಆದರೆ, ಮಾಹಿತಿ ಕೊರತೆಯಿಂದ ಪಡೆದುಕೊಂಡಿಲ್ಲ’ ಎಂದರು.

ಮುಂದಿನ ವಾರವೇ ಎಲ್ಲಾ ಪಂಚಾಯಿತಿ ಅಧಿಕಾರಿಗಳಿಗೆ ಹಾಗೂ ಡಿಇಒಗಳಿಗೆ ಸಕಾಲದಡಿ ಅರ್ಜಿ ವಿಲೇವಾರಿಯ ಕುರಿತು ತರಬೇತಿ ನೀಡಲಾಗುವುದು. ತರಬೇತಿ ಬಳಿಕವೂ ಸಕಾಲದಡಿ ಸೇವೆ ಕೊಡದಿದ್ದರೆ ಅಂತಹ ಅಧಿಕಾರಿಗಳ ವಿರುದ್ಧ ಜಿಲ್ಲಾಡಳಿತ ಕ್ರಮ ಜರುಗಿಸಲಿದೆ ಎಂದು ತಿಳಿಸಿದರು.

Post Comments (+)