ಶುಕ್ರವಾರ, ನವೆಂಬರ್ 22, 2019
27 °C
ಸಾಲುಮರದ ತಿಮ್ಮಕ್ಕ ಅಭಿನಂದನಾ ಸಮಾರಂಭದಲ್ಲಿ ಪರಿಸರ ವಾದಿ ಎಸ್‌.ಎ.ಕೃಷ್ಣಯ್ಯ ಎಚ್ಚರಿಕೆ

ಗಿಡ ನೆಡದಿದ್ದರೆ ಭವಿಷ್ಯದಲ್ಲಿ ಆಮ್ಲಜನಕದ ಕೊರತೆ

Published:
Updated:
Prajavani

ಉಡುಪಿ: ವಿಶ್ವದಲ್ಲಿ ಜನಸಂಖ್ಯಾ ಆಧಾರಿತ ಮರಗಳ ಗಣತಿಯಲ್ಲಿ ಭಾರತ ಕೊನೆಯ ಸ್ಥಾನದಲ್ಲಿದೆ. ಪ್ರತಿಯೊಬ್ಬರೂ ಕನಿಷ್ಠ 5 ಗಿಡಗಳನ್ನು ನೆಟ್ಟು ಪೋಷಿಸಿದರೆ ಮಾತ್ರ ಭವಿಷ್ಯದಲ್ಲಿ ಆಮ್ಲಜನಕ ಲಭ್ಯವಾಗಲಿದೆ ಎಂದು ಪರಿಸರವಾದಿ ಎಸ್‌.ಎ.ಕೃಷ್ಣಯ್ಯ ಸಲಹೆ ನೀಡಿದರು.

ಬಡಗಬೆಟ್ಟು ಕೋ ಆಪರೇಟಿವ್ ಸೊಸೈಟಿಗೆ 100 ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ ಸೋಮವಾರ ಶತಾಯುಷಿ ಸಾಲುಮರದ ತಿಮ್ಮಕ್ಕ ಅವರಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.‌

ಕೆನಡಾದಲ್ಲಿ ಪ್ರತಿಯೊಬ್ಬ ಪ್ರಜೆಗೆ 8,953 ಮರಗಳಿದ್ದರೆ, ರಷ್ಯಾದಲ್ಲಿ 4,461, ಚೀನಾದಲ್ಲಿ 102 ಮರಗಳಿವೆ. ಆದರೆ, ಭಾರತದಲ್ಲಿ ಮಾತ್ರ ಪ್ರತಿ ವ್ಯಕ್ತಿಗೆ 28 ಮರಗಳು ಮಾತ್ರ ಇವೆ. ಈ ಪ್ರಮಾಣ ಕಡಿಮೆಯಾದರೆ ಭವಿಷ್ಯದಲ್ಲಿ ಆಮ್ಲಜನಕದ ಕೊರತೆ ಉಂಟಾಗಲಿದೆ ಎಂದು ಎಚ್ಚರಿಕೆ ನೀಡಿದರು.

ಒಂದು ಮರ ಜೀವಿತಾವಧಿಯಲ್ಲಿ 2 ಲಕ್ಷ ಟನ್‌ಗಳಷ್ಟು ಬೀಜ ಉತ್ಪಾದಿಸುತ್ತದೆ. ಅವುಗಳಲ್ಲಿ ಅಲ್ಪ ಪ್ರಮಾಣದ ಬೀಜಗಳನ್ನು ಸಂರಕ್ಷಿಸಿ ಗಿಡ ಬೆಳೆಸಿದರೆ, ಪ್ರಾಕೃತಿಕ ಸಂಪತ್ತು ಹೆಚ್ಚಾಗುತ್ತದೆ ಎಂದು ಸಲಹೆ ನೀಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಸದಾಶಿವ ಪ್ರಭು ಮಾತನಾಡಿ, ಗುಡ್ಡ ಕುಸಿತ, ಪ್ರವಾಹ, ಅನಾವೃಷ್ಟಿಯ ಮೂಲಕ ಪ್ರಕೃತಿ ಮನುಷ್ಯನಿಗೆ ಎಚ್ಚರಿಕೆ ಕೊಡುತ್ತಲೇ ಇದ್ದರೂ ಮನುಷ್ಯ ನಿರ್ಲಕ್ಷ್ಯಿಸುತ್ತಲೇ ಇದ್ದಾನೆ. ಪರಿಣಾಮ, ದುರಂತಗಳು ಸಂಭವಿಸುತ್ತಲೇ ಇವೆ. ಈಗಲಾದರೂ ಎಚ್ಚೆತ್ತುಕೊಳ್ಳಬೇಕಿದೆ. ಪರಿಸರ ರಕ್ಷಣೆ ಸರ್ಕಾರದ ಹೊಣೆ ಎಂದು ಕೈಕಟ್ಟಿ ಕೂರಬಾರದು. ನಾಗರಿಕರ ಸಹಭಾಗಿತ್ವದಿಂದ ಮಾತ್ರ ಪರಿಸರ ರಕ್ಷಣೆ ಸಾಧ್ಯ ಎಂದರು.

ನಗರಸಭೆ ಪೌರಾಯುಕ್ತ ಆನಂದ್ ಸಿ.ಕಲ್ಲೋಳಿಕರ್ ಮಾತನಾಡಿ, ಹಿಂದೆ 35 ವಾರ್ಡ್‌ಗಳಲ್ಲಿ ಸಾಂಕೇತಿಕವಾಗಿ ಗಿಡಗಳನ್ನು ನೆಟ್ಟು ಪೋಷಿಸುವ ಯೋಜನೆಯನ್ನು ಜಾರಿಗೆ ತರಲಾಗಿತ್ತು. ಮುಂದೆ, ಅರಣ್ಯ ಇಲಾಖೆ ಸಹಯೋಗದಲ್ಲಿ ನಗರಸಭೆಯಿಂದಲೇ ಗಿಡಗಳನ್ನು ಬೆಳೆಸಿ ಎಲ್ಲಾ ವಾರ್ಡ್‌ಗಳಲ್ಲೂ ನೆಡಲಾಗುವುದು ಎಂದರು.

ಸಾಲುಮರದ ತಿಮ್ಮಕ್ಕ ಅವರ ಪುತ್ರ ಉಮೇಶ್ ಮಾತನಾಡಿ, 18 ವರ್ಷಗಳಿಂದ ತಿಮ್ಮಕ್ಕ ಅವರ ಜತೆ ದೇಶ, ವಿದೇಶಗಳನ್ನು ಸುತ್ತಿದ್ದೇನೆ. ಪ್ರತಿಫಲಾಪೇಕ್ಷೆ ಇಲ್ಲದೆ ಪ್ರಕೃತಿಯ ಸೇವೆ ಮಾಡುತ್ತಿರುವ ಹಿರಿಯ ಜೀವ ತಿಮ್ಮಕ್ಕ ಎಂದರು.

ಪ್ರತಿಯೊಬ್ಬರೂ 10 ಗಿಡಗಳನ್ನು ನೆಟ್ಟು ಬೆಳೆಸಿದರೆ ಪ್ರಕೃತಿಯ ಋಣವನ್ನು ತೀರಿಸಬಹುದು. ಪ್ಲಾಸ್ಟಿಕ್‌ ಮುಕ್ತ ಸಮಾಜಕ್ಕೆ ಮುಂದಡಿ ಇಡೋಣ ಎಂದು ಸಲಹೆ ನೀಡಿದರು.

ಬಡಗಬೆಟ್ಟು ಕೋ ಆಪರೇಟಿವ್ ಸೊಸೈಟಿ ಪ್ರಧಾನ ವ್ಯವಸ್ಥಾಪಕ ಜಯಕರ ಶೆಟ್ಟಿ ಇಂದ್ರಾಳಿ ಮಾತನಾಡಿ, ಆಸ್ಪತ್ರೆಯಲ್ಲಿ ಸಾವಿರಾರು ರೂಪಾಯಿ ವ್ಯಹಿಸಿ ಆಮ್ಲಜನಕ ಪಡೆಯುತ್ತೇವೆ. ಪ್ರಾಕೃತಿಕವಾಗಿ ಪರಿಶುದ್ಧವಾಗಿ ಸಿಗುತ್ತಿರುವ ಆಮ್ಲಜನಕದ ಬಗ್ಗೆ ಅರಿವಿಲ್ಲದೆ ಪ್ರಕೃತಿಯ ಮೇಲೆ ದೌರ್ಜನ್ಯ ಎಸಗುತ್ತಿದ್ದೇವೆ. ಈ ಬಗ್ಗೆ ಗಂಭೀರ ಚಿಂತನೆ ನಡೆಯಬೇಕಿದೆ ಎಂದರು.

ಕಾರ್ಯಕ್ರಮದಲ್ಲಿ ಉಡುಪಿ ಸರ್ಕಲ್‌ ಇನ್‌ಸ್ಪೆಕ್ಟರ್‌ ಮಂಜುನಾಥ್‌, ಬಡಗಬೆಟ್ಟು ಕೋಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಸಂಜೀವ ಕಾಂಚನ್‌, ಸಹಕಾರ ಸಂಘಗಳ ಸಹಾಯಕ ನಿಬಂಧಕಿ ಚಂದ್ರಪ್ರತಿಮಾ ಇದ್ದರು. ಅವಿನಾಶ್ ಕಾಮತ್ ಕಾರ್ಯಕ್ರಮ ನಿರೂಪಿಸಿದರು.

ಪ್ರತಿಕ್ರಿಯಿಸಿ (+)