ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿ: ಪ್ರವಾಸೋದ್ಯಮ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಕ್ರಮ

‘ಪ್ರಜಾವಾಣಿ’ ವರದಿಗೆ ಪ್ರವಾಸೋದ್ಯಮ ಇಲಾಖೆ ಪ್ರತಿಕ್ರಿಯೆ
Last Updated 24 ನವೆಂಬರ್ 2022, 15:24 IST
ಅಕ್ಷರ ಗಾತ್ರ

ಉಡುಪಿ: ‘ಪ್ರವಾಸೋದ್ಯಮಕ್ಕೆ ಬೇಕು ದೂರದೃಷ್ಟಿತ್ವ’ ಶೀರ್ಷಿಕೆಯಡಿ ‘ಪ್ರಜಾವಾಣಿ’ಯಲ್ಲಿ ಈಚೆಗೆ ಪ್ರಕಟಗೊಂಡ ವಿಶೇಷ ವರದಿಗೆ ಜಿಲ್ಲಾ ಪ್ರವಾಸೋದ್ಯಮ ಇಲಾಖೆ ಪ್ರತಿಕ್ರಿಯೆ ನೀಡಿದೆ.

ಜಿಲ್ಲೆಯಲ್ಲಿ 10 ರಿಂದ 15 ಕಡಲತೀರಗಳಿದ್ದು 8 ಕಡಲ ತೀರಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ಕಾಪು, ಮಲ್ಪೆ, ಪಡುಬಿದ್ರಿ, ತ್ರಾಸಿ, ಮರವಂತೆ ಕಡಲ ತೀರಗಳನ್ನು ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿ ಪಡಿಸಲು ಟೆಂಡರ್ ನೀಡಲಾಗಿದೆ.

ಜಿಲ್ಲೆಯಲ್ಲಿ ಕಡಲ ತೀರಗಳಲ್ಲಿ ಅಭಿವೃದ್ಧಿ ಹಾಗೂ ಮೂಲಸೌಕರ್ಯ ನಿರ್ಮಿಸಲು ಸಿಆರ್‌ಝೆಡ್‌ ನಿಯಮಾವಳಿಗಳು ಅಡ್ಡಿಯಾಗಿದ್ದವು. ಸಿಆರ್‌ಝೆಡ್ ಕಾನೂನುಗಳು ಸಡಿಲಿಕೆಯಾಗುವ ಸಾಧ್ಯತೆಗಳಿರುವುದರಿಂದ ಮುಂದೆ ಕಡಲ ತೀರಗಳಲ್ಲಿ ಅಗತ್ಯ ಮೂಲಸೌಕರ್ಯ ಕಲ್ಪಿಸಲು ನೆರವಾಗಲಿದೆ. ಜಿಲ್ಲೆಯ ಕೆಲವು ಗುಡ್ಡಗಾಡು ಪ್ರದೇಶಗಳಲ್ಲಿ ಈಗಾಗಲೇ ಚಾರಣಕ್ಕೆ ಅವಕಾಶ ನೀಡಲಾಗಿದೆ. ಹೆಚ್ಚಿನ ಕಡೆ ಅನುಮತಿ ನೀಡಲು ಅರಣ್ಯ ಇಲಾಖೆಯ ಅನುಮತಿ ಅಗತ್ಯವಿದೆ.

2021–22ನೇ ಸಾಲಿನಲ್ಲಿ ಪ್ರವಾಸೋದ್ಯಮ ಇಲಾಖೆಗೆ ಹೆಚ್ಚಿನ ಅನುದಾನ ಬಿಡುಗಡೆಯಾಗಿದ್ದು, ಕಾರ್ಕಳ ತಾಲ್ಲೂಕಿನ ಆನೆಕೆರೆ ಸುತ್ತಮುತ್ತ ಅಭಿವೃದ್ಧಿ ಕಾಮಗಾರಿ, ಬಸದಿ ಅಭಿವೃದ್ಧಿ, ಸಾಣೂರು ಕೆರೆಯಲ್ಲಿ ಕಾರಂಜಿ ನಿರ್ಮಾಣಕ್ಕೆ ರೂಪುರೇಷೆ ಸಿದ್ಧಪಡಿಸಲಾಗಿದೆ.

ಕಾರ್ಕಳ ತಾಲ್ಲೂಕು ಬೈಲೂರಿನ ಯರ್ಲಪಾಡಿಯ ಉಮಿಕಲ್ ಕುಂಜ ಬೆಟ್ಟದ ಮೇಲೆ 30 ಅಡಿ ಎತ್ತರದ ಪರಶುರಾಮನ ಕಂಚಿನ ಪ್ರತಿಮೆ ನಿರ್ಮಾಣ ಕಾರ್ಯ ಅಂತಿಮ ಹಂತದಲ್ಲಿದೆ. ₹ 10 ಕೋಟಿ ವೆಚ್ಚದಲ್ಲಿ ತ್ರಾಸಿ ಮರವಂತೆ ಕಡಲ ತೀರಗಳಲ್ಲಿ ಅಭಿವೃದ್ಧಿ ಕಾಮಗಾರಿ ನಡೆಸಲು ಡಿಪಿಎರ್ ಸಿದ್ಧಪಡಿಸಿ ಟೆಂಡರ್ ಹಂತದಲ್ಲಿದೆ. ಬೈಂದೂರು ಸೋಮೇಶ್ವರ ಕಡಲ ತೀರದಲ್ಲಿ ₹ 15 ಕೋಟಿ ವೆಚ್ಚದಲ್ಲಿ ಮೂಲಸೌಕರ್ಯ ಒದಗಿಸಲು ಡಿಪಿಆರ್‌ ತಯಾರಿಸಲಾಗಿದ್ದು ಟೆಂಡರ್ ಹಂತದಲ್ಲಿದೆ.

ಬೈಂದೂರಿನ ಕೊಲ್ಲೂರು ದೇವಸ್ಥಾನದಿಂದ ಕೊಡಚಾದ್ರಿ ಬೆಟ್ಟದವರೆಗೆ ರೋಪ್‌ವೇ ನಿರ್ಮಿಸಲು ರೂಪುರೇಷೆ ತಯಾರಿಸಲಾಗಿದೆ. ಪ್ರವಾಸೋದ್ಯಮ ಇಲಾಖೆಯಲ್ಲಿ ಖಾಯಂ ಅಧಿಕಾರಿಗಳು ಹಾಗೂ ಸಿಬ್ಬಂದಿ ಕೊರತೆ ಇರುವುದು ಪ್ರವಾಸೋದ್ಯಮ ಕ್ಷೇತ್ರದ ಅಭಿವೃದ್ಧಿ ಕುಂಠಿತವಾಗಲು ಕಾರಣ ಇರಬಹುದು.

ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿ ನಿಟ್ಟಿನಲ್ಲಿ ಪತ್ರಿಕೆಯಲ್ಲಿ ಪ್ರಕಟವಾಗಿರುವ ಅಂಶಗಳನ್ನು ಆಧಾರವಾಗಿಟ್ಟುಕೊಂಡು ಹೆಚ್ಚಿನ ಅಭಿವೃದ್ಧಿಗೆ ಕ್ರಮ ವಹಿಸುವುದಾಗಿ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಎಚ್‌.ಎನ್‌.ಗುರುಪ್ರಸಾದ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT