ಶುಕ್ರವಾರ, ಅಕ್ಟೋಬರ್ 18, 2019
23 °C
ಬೀಚ್‌ ಸ್ವಚ್ಚತಾ ಕಾರ್ಯಕ್ರಮದಲ್ಲಿ ಡಿಸಿ ಜಿ. ಜಗದೀಶ್‌

ಬೀಚ್‌ ಸ್ವಚ್ಛತೆಯಿಂದ ಪ್ರವಾಸೋದ್ಯಮ ಅಭಿವೃದ್ಧಿ

Published:
Updated:
Prajavani

ಉಡುಪಿ: ಬೀಚ್‌ಗಳನ್ನು ಸ್ವಚ್ಛವಾಗಿಡುವ ಮೂಲಕ ಪ್ರವಾಸಿಗರನ್ನು ಆಕರ್ಷಿಸಿ, ಪ್ರವಾಸೋದ್ಯಮವನ್ನು ಉತ್ತಮ ರೀತಿಯಲ್ಲಿ ಅಭಿವೃದ್ಧಿ ಪಡಿಸಲು ಸಾಧ್ಯ ಎಂದು ಜಿಲ್ಲಾಧಿಕಾರಿ ಜಗದೀಶ್‌ ಹೇಳಿದರು.

ಕರಾವಳಿ ಕಾವಲು ಪೊಲೀಸ್‌ ವತಿಯಿಂದ ಮಲ್ಪೆ ಬೀಚ್‌ನಲ್ಲಿ ಶನಿವಾರ ನಡೆದ ಅಂತರರಾಷ್ಟ್ರೀಯ ಬೀಚ್‌ ಸ್ವಚ್ಚತಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಬೀಚ್‌ ಸ್ವಚ್ಛವಾಗಿದ್ದಲ್ಲಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಆ ಮೂಲಕ ಪ್ರವಾಸೋದ್ಯಮ ಅಭಿವೃದ್ಧಿಯಾಗಲಿದ್ದು, ಸ್ಥಳೀಯರಿಗೆ ಹೆಚ್ಚಿನ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತವೆ ಎಂದರು.

ಸಮುದ್ರ ದಡದಲ್ಲಿ ಎಸೆಯುವ ತಾಜ್ಯಗಳು ಸಮುದ್ರ ಸೇರಿ, ಜಲಚರಗಳು ಮತ್ತು ಮೀನುಗಾರರ ಜೀವನದ ಮೇಲೂ ವ್ಯತಿರಿಕ್ತ ಪರಿಣಾಮ ಬೀರಲಿವೆ. ಹಾಗಾಗಿ ಬೀಚ್‌ಗಳಲ್ಲಿ ಸ್ವಚ್ಛತೆ ಕಾಪಾಡುವುದು ಅವಶ್ಯಕ ಹಾಗೂ ಇದು ಪ್ರತಿಯೊಬ್ಬರ ಜವಾಬ್ದಾರಿ ಎಂದು ಅವರು ಹೇಳಿದರು.

ಪೌರಾಯುಕ್ತ ಆನಂದ್‌ ಕಲ್ಲೋಳಿಕರ್‌ ಮಾತನಾಡಿ, ಸ್ವಚ್ಛತೆಯ ಕುರಿತು ಈಗಾಗಲೇ ಎಲ್ಲೆಡೆ ಜಾಗೃತಿ ಮೂಡಿಸಲಾಗುತ್ತಿದೆ. ಪ್ಲಾಸ್ಟಿಕ್‌ ನಿಷೇಧವನ್ನು ಸಹ ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದು, ಉಡುಪಿ ನಗರವನ್ನು ಪ್ಲಾಸ್ಟಿಕ್‌ ಮುಕ್ತ ನಗರವನ್ನಾಗಿ ಮಾಡಲು ಕ್ರಮಕೈಗೊಳ್ಳಲಾಗಿದೆ ಎಂದು ಹೇಳಿದರು.

ಕರಾವಳಿ ಕಾವಲು ಪೊಲೀಸ್‌ ಎಸ್ಪಿ ಚೇತನ್‌ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ನಗರಸಭಾ ಸದಸ್ಯೆ ಲಕ್ಷ್ಮೀ ಮಂಜುನಾಥ, ಮಂಗಳೂರು ಕೋಸ್ಟಲ್‌ ಗಾರ್ಡ್‌ನ ಡೆಪ್ಯುಟಿ ಕಮಾಂಡೆಂಟ್‌ ಪ್ರದೀಪ್‌ ಕುಮಾರ್‌ ಸಹಾ, ಎಎಸ್‍ಪಿ ಕುಮಾರ ಚಂದ್ರ, ಮೀನುಗಾರಿಕಾ ಇಲಾಖೆ ಉಪ ನಿರ್ದೇಶಕ ಗಣೇಶ ಉಪಸ್ಥಿತರಿದ್ದರು.

ಕರಾವಳಿ ಕಾವಲು ಪೊಲೀಸ್‌ ಗುಪ್ತವಾರ್ತಾ ವಿಭಾಗದ ವೃತ್ತ ನಿರೀಕ್ಷಕ ಪ್ರಮೋದ್‌ ಕುಮಾರ್‌ ಸ್ವಾಗತಿಸಿದರು. ನಿರೀಕ್ಷಕ ರಾಘವೇಂದ್ರ ಕಾಂಡಿಕೆ ವಂದಿಸಿದರು. ಪಿಎಸ್‌ಐ ಬಿ. ಮನಮೋಹನ ರಾವ್‌ ಕಾರ್ಯಕ್ರಮ ನಿರೂಪಿಸಿದರು.

ಬೀಚ್‌ ಸ್ವಚ್ಛತಾ ಕಾರ್ಯಕ್ರಮದಲ್ಲಿ ಮಿಲಾಗ್ರಿಸ್‌, ಪೂರ್ಣಪ್ರಜ್ಞ ಸಂಜೆ ಕಾಲೇಜು, ಮಲ್ಪೆ ಸರ್ಕಾರಿ ಪದವಿ ಪೂರ್ವ ಕಾಲೇಜು, ಕಿದಿಯೂರು ಜಿ. ಶಂಕರ್‌ ಪದವಿ ಪೂರ್ವ ಕಾಲೇಜು ಮತ್ತು ಭಾರತ್‌ ಸ್ಕೌಟ್ಸ್‌–ಗೈಡ್ಸ್‌ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Post Comments (+)