ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ ಸೇರಿದ ವಿಜಯಶಂಕರ್‌

Last Updated 5 ಫೆಬ್ರುವರಿ 2018, 19:46 IST
ಅಕ್ಷರ ಗಾತ್ರ

ಬೆಂಗಳೂರು: ಮೈಸೂರು ಬಿಜೆಪಿ‌ ಮುಖಂಡ ಸಿ.ಎಚ್. ವಿಜಯಶಂಕರ್ ಸೋಮವಾರ ಕಾಂಗ್ರೆಸ್ ಸೇರಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ ಪಕ್ಷದ ಬಾವುಟ ನೀಡಿ ವಿಜಯ ಶಂಕರ್‌ ಅವರನ್ನು ಬರಮಾಡಿಕೊಂಡರು.

ಇತ್ತೀಚೆಗೆ ನಿಧನರಾದ ಜೆಡಿಎಸ್ ಶಾಸಕ ಚಿಕ್ಕಮಾದು ಮಗ ಹಾಗೂ ಮೈಸೂರು ಜಿಲ್ಲಾ ಪಂಚಾಯ್ತಿ ಸದಸ್ಯ ‌ಅನಿಲ್ ಚಿಕ್ಕಮಾದು ಕೂಡ ಕಾಂಗ್ರೆಸ್ ಸೇರಿದರು. ಎಚ್.ಡಿ. ಕೋಟೆ ದೊಡ್ಡನಾಯಕ ಸೇರಿ ಜೆಡಿಎಸ್‌ ಹಾಗೂ ಬಿಜೆಪಿಯ ಹಲವು ಮುಖಂಡರು ಅನಿಲ್‌ ಜೊತೆ ಕಾಂಗ್ರೆಸ್ ಸೇರ್ಪಡೆಯಾದರು.

‘ಕಾಂಗ್ರೆಸ್‌ನಿಂದ ರಾಜಕಾರಣ ಆರಂಭಿಸಿದ ವಿಜಯಶಂಕರ್, ಬಿಜೆಪಿಯಲ್ಲಿ ಹೆಚ್ಚು ವರ್ಷ ಇದ್ದರು. ಆದರೆ, ಯಾರ ಬಗ್ಗೆಯೂ ಲಘುವಾಗಿ ಮಾತನಾ
ಡಿಲ್ಲ. ಹೀಗಾಗಿ ಅವರಿಗೆ ವೈರಿಗಳಿಲ್ಲ’ ಎಂದು ಸಿದ್ದರಾಮಯ್ಯ ಹೇಳಿದರು.

‘ಕೈ ಮತ್ತು ಬಾಯಿ ಶುದ್ಧವಾಗಿಟ್ಟುಕೊಂಡಿರುವ ಸಜ್ಜನ ರಾಜಕಾರಣಿ. ಅನಿವಾರ್ಯ ಕಾರಣಗಳಿಂದಬಿಜೆಪಿ ಬಿಟ್ಟಿದ್ದಾರೆ. ನನ್ನೊಂದಿಗೆ ನೋವು ಹಂಚಿಕೊಂಡ ಬಳಿಕ ಪಕ್ಷಕ್ಕೆ ಆಹ್ವಾನಿಸಿದೆ’ ಎಂದೂ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

‘ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ, ಸಂಸದರಾದ ಶೋಭಾ ಕರಂದ್ಲಾಜೆ, ನಳಿನ್‌ಕುಮಾರ್ ಕಟೀಲ್ ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಸಂವಿಧಾನ ಬದಲಿಸುವ ಬಗ್ಗೆಯೂ ಮಾತನಾಡುತ್ತಿರುವ ಇವರು ರಾಜಕಾರಣದಲ್ಲಿ ಇರಲು ಯೋಗ್ಯರಲ್ಲ’ ಎಂದು ಟೀಕಿಸಿದರು.

‘ಕೆ.ಎಸ್. ಈಶ್ವರಪ್ಪಗೆ ಮೆದುಳು ಮತ್ತು ನಾಲಿಗೆಗೆ ಸಂಪರ್ಕ ಬಿಟ್ಟು ಹೋಗಿದೆ. ಸುಳ್ಳು ಹೇಳುವುದು ಹೇಗೆ ಎಂದು ಕಾರ್ಯಕರ್ತರಿಗೆ ಪಾಠ ಮಾಡುತ್ತಾರೆ. ಇದೆಲ್ಲದರಿಂದ ಬೇಸತ್ತು ವಿಜಯಶಂಕರ್ ಬಿಜೆಪಿ ತೊರೆದಿದ್ದಾರೆ.  ಷರತ್ತಿಲ್ಲದೆ ಪಕ್ಷಕ್ಕೆ ಬಂದಿದ್ದಾರೆ’ ಎಂದೂ ಹೇಳಿದರು. ‘ವಿಜಯಶಂಕರ್ ಮಹಾನ್ ದೈವಭಕ್ತ, ನಾನು ಅಷ್ಟೊಂದು ಅಲ್ಲ. ಇದು ನಮ್ಮಿಬ್ಬರ ನಡುವೆ ಇರುವ ಸಣ್ಣ ವ್ಯತ್ಯಾಸವಷ್ಟೇ. ಅವರ ಪೂಜೆ– ಪುನಸ್ಕಾರಕ್ಕೆ ನಮ್ಮ ಅಭ್ಯಂತರವೇನು ಇಲ್ಲ’ ಎಂದರು.

‘ಸಮಸ್ಯೆಯೂ ಅಲ್ಲ, ಸಮಯಸಾಧಕನೂ ಅಲ್ಲ’

‘ನಾನು ‌ಪಕ್ಷಕ್ಕೆ ಸಮಸ್ಯೆಯೂ ಅಲ್ಲ, ಸಮಯಸಾಧಕನೂ ಅಲ್ಲ’ ಎಂದು ವಿಜಯಶಂಕರ್ ಸ್ಪಷ್ಟಪಡಿಸಿದರು. ‘1980ರಿಂದ 1990ರವರೆಗೆ ಹುಣಸೂರಿನಲ್ಲಿ ಯುವ ಕಾಂಗ್ರೆಸ್ ಅಧ್ಯಕ್ಷನಾಗಿದ್ದೆ. ಆನಂತರ ಬಿಜೆಪಿ ಸೇರಿದ್ದೆ. ಈಗ ಮಾತೃ ಪಕ್ಷಕ್ಕೆ ಮರಳಿದ್ದೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT