ಕಾಪು (ಪಡುಬಿದ್ರಿ): ಮೊಗವೀರ ಮಹಾಜನ ಸಂಘ ಸಂಚಾಲಿತ ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಅ. 3ರಿಂದ 12ರವರೆಗೆ ನಡೆಯಲಿರುವ 3ನೇ ವರ್ಷದ ಉಚ್ಚಿಲ ದಸರಾವನ್ನು ‘ಉಡುಪಿ ಉಚ್ಚಿಲ ದಸರಾ’ ಘೋಷಣೆಯೊಂದಿಗೆ ಕ್ಷೇತ್ರದ ಶಾಲಿನಿ ಜಿ. ಶಂಕರ್ ಸಭಾಂಗಣದಲ್ಲಿ ಅದ್ದೂರಿಯಾಗಿ ಆಚರಿಸಲಾಗುವುದು ಎಂದು ದ.ಕ. ಮೊಗವೀರ ಮಹಾಜನ ಸಂಘದ ಗೌರವ ಸಲಹೆಗಾರ ಜಿ. ಶಂಕರ್ ತಿಳಿಸಿದರು.
ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಸಭಾಂಗಣದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಪಡುಬಿದ್ರಿಯಿಂದ ಕಾಪು ಸಮುದ್ರ ತೀರದ ದೀಪ ಸ್ತಂಭದವರೆಗೆ ಎಂಆರ್‌ಜಿ ಗ್ರೂಪ್ ಅಧ್ಯಕ್ಷ ಕೆ. ಪ್ರಕಾಶ್ ಶೆಟ್ಟಿ ಪ್ರಾಯೋಜಕತ್ವದ ವಿದ್ಯುದ್ದೀಪಾಲಂಕಾರದ ಉದ್ಘಾಟನಾ ಸಮಾರಂಭ 2ರಂದು ಸಂಜೆ 6.30ಕ್ಕೆ ಗಣ್ಯರ ಉಪಸ್ಥಿತಿಯಲ್ಲಿ ನಡೆಯಲಿದೆ ಎಂದು ತಿಳಿಸಿದರು.
ನವ ದುರ್ಗೆಯರ, ಶಾರದಾ ಮಾತೆ ವಿಗ್ರಹಗಳನ್ನು ಕ್ಷೇತ್ರದ ತಂತ್ರಿ ಕುಕ್ಕಿಕಟ್ಟೆ ರಾಘವೇಂದ್ರ ತಂತ್ರಿ, ಪ್ರಧಾನ ಪುರೋಹಿತ ರಾಘವೇಂದ್ರ ಉಪಾಧ್ಯಾಯ ನೇತೃತ್ವದಲ್ಲಿ 3ರಂದು ಪ್ರತಿಷ್ಠಾಪಿಸಲಾಗುವುದು. ಬೆಳಿಗ್ಗೆ 10ಕ್ಕೆ ‘ಉಡುಪಿ ಉಚ್ಚಿಲ ದಸರಾ– 2024’ ಉದ್ಘಾಟನೆಗೊಳ್ಳಲಿದೆ. 10.30ಕ್ಕೆ ದಸರಾ ಮಹೋತ್ಸವ ಪ್ರಯುಕ್ತ ಆಯೋಜಿಸಲಾಗಿರುವ ಫಲಪುಷ್ಪ ಪ್ರದರ್ಶನ, ಗುಡಿ ಕೈಗಾರಿಕಾ ಪ್ರಾತ್ಯಕ್ಷಿಕೆ, ಸಮುದ್ರದ ಜೀವಂತ ಮೀನುಗಳ ಪ್ರದರ್ಶನ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳಲ್ಲಿ ಲಭ್ಯವಿರುವ ಮೀನುಗಾರಿಕೆ ಯೋಜನೆಗಳ ಮಾಹಿತಿ, ಮೀನುಗಾರಿಕಾ ಪರಿಕರಗಳ ಪ್ರದರ್ಶನ ಸೇರಿದಂತೆ ವಿವಿಧ ಪ್ರದರ್ಶನಗಳಿಗೆ ಚಾಲನೆ ನೀಡಲಾಗುವುದು. ದ.ಕ. ಮೊಗವೀರ ಮಹಾಜನ ಸಂಘದ 100ನೇ ವರ್ಷದ ಸವಿನೆನಪಿಗೆ ನವೀಕರಿಸಲ್ಪಟ್ಟ ನೂತನ ಆಡಳಿತ ಕಚೇರಿ ಉದ್ಘಾಟಿಸಲಾಗುವುದು. ಸಂಜೆ 5ಕ್ಕೆ ದಸರಾ ಉತ್ಸವದ ಪ್ರಯುಕ್ತ ನಡೆಯುವ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ಭಜನಾ ಕಾರ್ಯಕ್ರಮ, ಧಾರ್ಮಿಕ ಸಭಾ ಕಾರ್ಯಕ್ರಮಗಳ ಉದ್ಘಾಟನೆ ನಡೆಯಲಿದೆ.
ದ.ಕ. ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್ ಬೆಳ್ಳಂಪಳ್ಳಿ, ದಸರಾ ಉತ್ಸವ ಸಮಿತಿ ಅಧ್ಯಕ್ಷ ವಿನಯ್ ಕರ್ಕೇರ ಮಲ್ಪೆ, ಪ್ರಮುಖರಾದ ಶರಣ್ ಕುಮಾರ್ ಮಟ್ಟು, ಮೋಹನ್ ಬಂಗೇರ, ದಿವಾಕರ ಕರ್ಕೇರ, ಗಿರಿಧರ್ ಸುವರ್ಣ, ರತ್ನಾಕರ ಸುವರ್ಣ, ಸುಜಿತ್ ಸಾಲ್ಯಾನ್, ಸತೀಶ್ ಅಮೀನ್ ಪಡುಕೆರೆ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.