ಪಡುಬಿದ್ರಿ: ಉಚ್ಚಿಲ ಪೇಟೆಯಲ್ಲಿ ಹಾದು ಹೋಗುವ ರಾಷ್ಟ್ರಿಯ ಹೆದ್ದಾರಿ 66ರಲ್ಲಿ ಅಳವಡಿಸಿರುವ ದಾರಿದೀಪಗಳು ಉರಿಯದಿರುವುದನ್ನು ವಿರೋಧಿಸಿ, ಸರಿಪಡಿಸುವಂತೆ ಒತ್ತಾಯಿಸಿ ಸೊಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಉಚ್ಚಿಲ ಗ್ರಾಮ ಸಮಿತಿ ವತಿಯಿಂದ ಉಚ್ಚಿಲ ಪೇಟೆಯಲ್ಲಿ ಶನಿವಾರ ರಾತ್ರಿ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನಾಕಾರರು ಮೊಬೈಲ್ ಟಾರ್ಚ್ ಹಿಡಿದು ಪ್ರತಿಭಟನೆ ನಡೆಸಿದರು. ರಾಷ್ಟ್ರಿಯ ಹೆದ್ದಾರಿ ಪ್ರಾಧಿಕಾರ, ಗುತ್ತಿಗೆ ಪಡೆದ ನವಯುಗ ಕಂಪನಿ ವಿರುದ್ದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಎಸ್‌ಡಿಪಿಐ ಕಾಪು ಕ್ಷೇತ್ರ ಸಮಿತಿ ಅಧ್ಯಕ್ಷ ಹನೀಫ್ ಮೂಳೂರು ಮಾತನಾಡಿ, ಹೆದ್ದಾರಿಯಲ್ಲಿರುವ ಬೀದಿದೀಪಗಳು ಕೆಲ ತಿಂಗಳುಗಳಿಂದ ಉರಿಯುತ್ತಿಲ್ಲ. ಇದರಿಂದ ಸಾರ್ವಜನಿಕರಿಗೆ ರಾತ್ರಿ ಹೊತ್ತು ರಸ್ತೆ ದಾಟಲು ಕಷ್ಟವಾಗಿದೆ. ಈ ಬಗ್ಗೆ ಹಲವು ಬಾರಿ ಸಂಬಂಧಪಟ್ಟವರ ಗಮನಕ್ಕೆ ತಂದರೂ ಪರಿಹಾರ ದೊರಕಿಲ್ಲ. ಮುಂದಿನ ಒಂದು ತಿಂಗಳ ಒಳಗೆ ವ್ಯವಸ್ಥೆ ಕಲ್ಪಿಸದಿದ್ದಲ್ಲಿ ಸಾವರ್ಜನಿಕರನ್ನು ಸೇರಿಸಿ ಉಗ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.
ಎಸ್‌ಡಿಪಿಐ ಉಚ್ಚಿಲ ಗ್ರಾಮ ಸಮಿತಿ ಅಧ್ಯಕ್ಷ ಹಮೀದ್, ಗ್ರಾ.ಪಂ. ಸದಸ್ಯರಾದ ಅಬ್ದುಲ್ ರಜಾಕ್, ರಫೀಕ್ ದೀವು, ಆಸಿಫ್ ವೈ.ಸಿ, ತವಕ್ಕಲ್ ಯಂಗ್ ಮೆನ್ಸ್ ಅಸೋಸಿಯೇಷಶನ್ ಅಧ್ಯಕ್ಷ ಅಬ್ದುಲ್ ರಜಾಕ್, ಆಟೊ ಚಾಲಕ ಮಾಲೀಕ ಸಂಘದ ಅಧ್ಯಕ್ಷ ಸಿರಾಜ್ ಎನ್.ಎಚ್, ನಿಸಾರ್ ಮುಲ್ಕಿ ಇದ್ದರು.