ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಲಿಕೇರಿ ಕೈಮಗ್ಗದ ಸದ್ದು: ಒಂದೇ ಕುಟುಂಬದ ಕಾಯಕ

Last Updated 5 ಅಕ್ಟೋಬರ್ 2019, 19:45 IST
ಅಕ್ಷರ ಗಾತ್ರ

ಸಾಲಿಕೇರಿಯಲ್ಲಿ ಬಹುತೇಕ ಎಲ್ಲ ಕುಟುಂಬ ಒಂದು ಕಾಲದಲ್ಲಿ ನೇಕಾರಿಕೆಯಲ್ಲಿ ತೊಡಗಿಸಿಕೊಂಡಿತ್ತು. ಆದರೆ ಈಗ ನೇಕಾರಿಕೆಗೆ ಬಳಸುತ್ತಿದ್ದ ಚರಕ, ಕೈಮಗ್ಗದ ಯಂತ್ರ ಮೂಲೆಗುಂಪಾಗಿ ಅಟ್ಟ ಸೇರಿವೆ. ಕೇವಲ ಒಂದು ಕುಟುಂಬ ಮಾತ್ರ ಸಾಲಿಕೇರಿಯಲ್ಲಿ ಕೈಮಗ್ಗದಿಂದ ವಸ್ತ್ರ ತಯಾರಿಸುತ್ತಿರುವುದು ಸಂತೋಷದ ವಿಚಾರ.

ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲ್ಲೂಕಿನ ಸಾಲಿಕೇರಿ ಒಂದು ಕಾಲದಲ್ಲಿ ಕೈಮಗ್ಗ ನೇಕಾರಿಕೆಗೆ ಪ್ರಸಿದ್ಧಿ ಹೊಂದಿತ್ತು. ಪ್ರತಿ ಮನೆಯಲ್ಲಿಯೂ ಚರಕದಿಂದ ನೂಲು ಸುತ್ತಿ ಕೈಮಗ್ಗದಿಂದ ಸೀರೆ, ಪಾಣಿ ಪಂಚೆ, ಲುಂಗಿ, ಟವೆಲ್, ಬೆಡ್‌ಶೀಟ್ ಸೇರಿದಂತೆ ಹಲವಾರು ವಸ್ತ್ರಗಳನ್ನು ನೆಯ್ಗೆ ಮಾಡಲಾಗುತ್ತಿತ್ತು. ಈ ಕಾರಣದಿಂದಲೇ ಸಾಲಿಕೇರಿ ಎಂಬ ಹೆಸರು ಬಂದಿತ್ತು ಎಂದು ಹೇಳಲಾಗುತ್ತದೆ.

ಕಾಲ ಬದಲಾದಂತೆ ಚರಕದಿಂದ ನೂಲು ಸುತ್ತುವ, ಕೈಮಗ್ಗದ ಕೆಲಸವೂ ಕಡಿಮೆ ಆಗುತ್ತಾ ಬಂದು ಇದೀಗ ಒಂದು ಕುಟುಂಬದವರು ಮಾತ್ರ ಇದನ್ನು ಮುಂದುವರಿಸಿಕೊಂಡು ಬರುತ್ತಿದ್ದಾರೆ. ಸಾಲಿಕೇರಿ ಹಿರಿಯರಾದ ಸರಸ್ವತಿ ಅವರು 60 ವರ್ಷಗಳಿಂದ ಕೈಮಗ್ಗದಿಂದ ಸೀರೆ ಮತ್ತು ಪಾಣೆ ಪಂಜಿಯನ್ನು ಸಾಂಪ್ರದಾಯಿಕ ಪದ್ಧತಿಯಲ್ಲೇ ತಯಾರಿಸಿ ಮಾರಾಟ ಮಾಡಿಕೊಂಡು ತಮ್ಮ ಜೀವನ ಸಾಗಿಸುತ್ತಿದ್ದಾರೆ. ಅವರ ಇಬ್ಬರು ಪುತ್ರಿಯರಾದ ವಿಜಯಶ್ರೀ ಮತ್ತು ಮೋಹಿನಿ ಅವರು 35 ವರ್ಷಗಳಿಂದ ಈ ಕುಲಕಸುಬು ಮುಂದುವರಿಸಿಕೊಂಡು ಬರುತ್ತಿದ್ದಾರೆ. ಮನೆ ಇತರೆ ಸದಸ್ಯರು ಇತರೆ ಉದ್ಯೋಗದತ್ತ ಮುಖ ಮಾಡಿದರೂ ಹಳೆಯ ಕಸುಬು ನಶಿಸಬಾರದು ಎಂಬ ಕಾರಣಕ್ಕೆ ಛಲದಿಂದ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.

ಹಿಂದೆ ಕೈಮಗ್ಗದ ಸೀರೆ ನೆಯ್ಗೆ ಮಾಡುತ್ತಿದ್ದ ಇವರು ಮಾರುಕಟ್ಟೆಯಲ್ಲಿ ಬೇಡಿಕೆ ಕಡಿಮೆ ಮತ್ತು ಲಾಭ ಹೆಚ್ಚು ಸಿಗುತ್ತಿಲ್ಲವೆಂದು ಅದನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿ ಸದ್ಯ ಪಾಣಿ ಪಂಜಿ ಮಾತ್ರ ನೆಯ್ಗೆ ಮಾಡುತ್ತಾರೆ.

ಹೇಗೆ ತಯಾರಿ: ಅಂಗಡಿಯಿಂದ ನೂಲು ತಂದು ಅದನ್ನು ಮೂರ್ನಾಲ್ಕು ದಿನ ನೀರಿನಲ್ಲಿ ಕೊಳೆಯಲು ಹಾಕಲಾಗುತ್ತದೆ. ನಂತರ ಮೈದಾದಿಂದ ಗಂಜಿ ಮಾಡಿ ಅದರಲ್ಲಿ ಮುಳುಗಿಸಿ ಒಣಗಿಸಲಾಗುತ್ತದೆ. ನಂತರ ಚರಕದಿಂದ ನೂಲನ್ನು ಎಳೆ ಎಳೆಯಾಗಿ ತೆಗೆದು ಕೈಮಗ್ಗದ ಯಂತ್ರಕ್ಕೆ ಜೋಡಿಸಿಕೊಳ್ಳಲಾಗುತ್ತದೆ. ವಿದ್ಯುತ್‌ ಚಾಲಿತವಲ್ಲದ ಮಗ್ಗದ ಮುಂದೆ ಕುಳಿತು ಎಳೆಗಳನ್ನು ನುಸುಳಿಸಿ ಬಟ್ಟೆ ನೆಯ್ಗೆ ಮಾಡಲಾಗುತ್ತದೆ.

ಪ್ರತಿದಿನ ಬೆಳಿಗ್ಗೆಯಿಂದ ಸಂಜೆಯವರೆಗೆ ಅಧಿಕ ಲಾಭ ಸಿಗದಿದೇ ಇದ್ದರೂ ಪಾಣಿ ಪಂಜಿ ತಯಾರಿಸಿ ಮಾರಾಟ ಮಾಡಿ ಜೀವನ ಸಾಗಿಸುತ್ತೆವೆ. ಮಾರುಕಟ್ಟೆಯಲ್ಲಿ ಬೇಡಿಕೆ ಇದ್ದರೂ, ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ. ಈಗಿನ ಪೀಳಿಗೆ ಈ ಕೆಲಸ ಮಾಡಲು ಆಸಕ್ತಿ ತೋರಿಸುತ್ತಿಲ್ಲ. ನಮ್ಮ ಕಾಲದ ನಂತರ ಇದು ಸಂಪೂರ್ಣವಾಗಿ ನಶಿಸಿ ಹೋಗಬಹುದು. ಈಗಿನ ಸಂಬಳದಲ್ಲಿ ಇಂತಹ ಕೆಲಸ ಮಾಡುವುದು ಕಷ್ಟಕರ ಎಂದು ಜಯಶ್ರೀ ಮತ್ತು ಮೋಹಿನಿ ಹೇಳುತ್ತಾರೆ.

ಬಾಳಿಕೆ ಜಾಸ್ತಿ: ಯಂತ್ರಗಳಿಂದ ಮಾಡಿದ ಬಟ್ಟೆಗಳಿಗಿಂತಲೂ ಮನೆಯಲ್ಲಿಯೇ ಮಾಡಿದ ಈ ಬಟ್ಟೆ ಹೆಚ್ಚು ಬಾಳಿಕೆ ಮತ್ತು ಗಟ್ಟಿ. ಬ್ರಹ್ಮಾವರದಲ್ಲಿಯೇ ಇದಕ್ಕೆ ಬೇಕಾದ ನೂಲು ಮತ್ತು ಗ್ರಾಹಕರು ಸಿಗುತ್ತಾರೆ. ಆದರೂ, ಇದನ್ನು ಮಾಡಲು ತುಂಬಾ ಸಮಯ ಬೇಕು ಎಂದು ಕಷ್ಟವನ್ನು ಬಿಚ್ಚಿಟ್ಟರು.

ಕೈಮಗ್ಗದಿಂದ ತಯಾರಾಗುವ ವಸ್ತ್ರಗಳಿಗೆ ಬೇಡಿಕೆ ಇನ್ನೂ ಕುಂದಿಲ್ಲ. ಆದರೆ, ಆಧುನಿಕತೆ ಭರಾಟೆ ಮತ್ತು ವಿವಿಧ ತರಹದ ಆಕರ್ಷಕ ವಸ್ತ್ರಗಳ ಕಾರಣ ಹಾಗೂ ಸ್ಪರ್ಧೆಯ ಕಾರಣ ಗ್ರಾಮೀಣ ಪ್ರದೇಶದಲ್ಲಿರುವ ಇಂತಹ ಕೈಮಗ್ಗ ನೇಕಾರರು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಸರಸ್ವತಿ, ವಿಜಯಶ್ರೀ, ಮೋಹಿನಿ ಅವರ ಕೆಲಸಕ್ಕೆ ಪ್ರೋತ್ಸಾಹ ಸಿಗದೇ ಇರುವುದು ಇಂತಹ ಉದ್ಯಮಕ್ಕೆ ಪೆಟ್ಟು ತಂದಿದೆ. ಕುಲಕಸುಬು ಮಾಡುವವರನ್ನು ಸರ್ಕಾರ ಪೋಷಿಸಿದಲ್ಲಿ ಗಾಂಧೀಜಿ ಅವರ ಚರಕ, ಕೈಮಗ್ಗ, ಖಾದಿ ಮುಂದೆ ಕಾಣಿಸಲು ಸಾಧ್ಯ.

ಸಂಪರ್ಕಕ್ಕೆ; 9591921171

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT