ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲ ಆಟೋ ನಿಲ್ದಾಣಗಳಲ್ಲಿ ದುಡಿಮೆಗೆ ಅವಕಾಶ ಕೊಡಿ

ಆಟೋ ಚಾಲಕರ ಹಾಗೂ ಮಾಲೀಕರ ಅಸೋಸಿಯೇಷನ್ ಆಗ್ರಹ
Last Updated 17 ಮಾರ್ಚ್ 2023, 13:20 IST
ಅಕ್ಷರ ಗಾತ್ರ

ಉಡುಪಿ: ಉಡುಪಿ ವಲಯ–1 ಹಾಗೂ 2ರ ವ್ಯಾಪ್ತಿಯಲ್ಲಿ ಬರುವ ಆಟೊ ನಿಲ್ದಾಣಗಳಲ್ಲಿ ಎಲ್ಲ ಆಟೋ ಚಾಲಕರಿಗೆ ದುಡಿಮೆಗೆ ಅವಕಾಶವಿದೆ ಎಂದು ನ್ಯಾಯಾಲಯ ಆದೇಶ ನೀಡಿದ್ದರೂ ಪಾಲನೆಯಾಗುತ್ತಿಲ್ಲ ಎಂದು ಉಡುಪಿ ಆಟೋ ಚಾಲಕರ ಹಾಗೂ ಮಾಲೀಕರ ಅಸೋಸಿಯೇಷನ್‌ ಅಧ್ಯಕ್ಷ ಜಯಂತ್ ಸುವರ್ಣ ಅಸಮಾಧಾನ ವ್ಯಕ್ತಪಡಿಸಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಒಂದು ಆಟೋ ನಿಲ್ದಾಣದ ಚಾಲಕ ಮತ್ತೊಂದು ಆಟೊ ನಿಲ್ದಾಣಕ್ಕೆ ಹೋದರೆ ಅವಾಚ್ಯ ಶಬ್ಧಗಳಿಂದ ನಿಂದಿಸಿ ಹಲ್ಲೆ ನಡೆಸಲಾಗುತ್ತಿದೆ. ಜಿಲ್ಲಾಧಿಕಾರಿ ಹಾಗೂ ಸಾರಿಗೆ ಇಲಾಖೆ ತಕ್ಷಣ ಮಧ್ಯೆ ಪ್ರವೇಶಿಸಿ ಎಲ್ಲ ನಿಲ್ದಾಣಗಳಲ್ಲೂ ದುಡಿಮೆ ಮಾಡಲು ಅವಕಾಶ ನೀಡಬೇಕು. 10 ದಿನಗಳ ಒಳಗೆ ಸಮಸ್ಯೆ ಬಗೆಹರಿಯದಿದ್ದರೆ ಆಟೋ ಚಾಲಕರು ಹಾಗೂ ಅವರ ಕುಟುಂಬ ಸದಸ್ಯರು ಮತದಾನ ಬಹಿಷ್ಕಾರ ಮಾಡುತ್ತೇವೆ. ಧರಣಿ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಆಟೋ ನಿಲ್ದಾಣಗಳಲ್ಲಿ ರಾಜಕೀಯ ಒಳ ನುಸುಳಿದ್ದು ಸ್ಥಳೀಯ ಜನಪ್ರತಿನಿಧಿಗಳು, ರಾಜಕಾರಣಿಗಳು ಸಮಸ್ಯೆ ಬಗೆಹರಿಸುವ ಬದಲು ಮತ ರಾಜಕಾರಣ ಮಾಡುತ್ತಿದ್ದಾರೆ. ಹಲವು ಬಾರಿ ಮನವಿ ಕೊಟ್ಟರೂ ಸ್ಪಂದನ ಸಿಕ್ಕಿಲ್ಲ ಎಂದು ಜಯಂತ್ ಸುವರ್ಣ ಬೇಸರ ವ್ಯಕ್ತಪಡಿಸಿದರು.

ಆಟೋ ಚಾಲಕ ದಿವಾಕರ್ ಪೂಜಾರಿ ಮಾತನಾಡಿ, ಆಟೋಗೆ ಇಂಧನ, ಮಕ್ಕಳ ವಿದ್ಯಾಭ್ಯಾಸ, ಕುಟುಂಬ ನಿರ್ವಹಣಾ ವೆಚ್ಚ ಸೇರಿ ಪ್ರತಿದಿನ ಕನಿಷ್ಠ ₹ 1,000 ದುಡಿಯಲೇಬೇಕಾದ ಅನಿವಾರ್ಯತೆಯಲ್ಲಿ ಆಟೋ ಚಾಲಕರು ಇದ್ದಾರೆ. ಒಂದೇ ನಿಲ್ದಾಣದಲ್ಲಿ ಆಟೋ ನಿಲ್ಲಿಸಿಕೊಂಡು ಬಾಡಿಗೆಗೆ ಕಾಯುತ್ತ ಕುಳಿತರೆ ನಿರೀಕ್ಷಿತ ಬಾಡಿಗೆ ಸಿಗುವುದಿಲ್ಲ. ವಲಯ 1 ಹಾಗೂ 2ರಲ್ಲಿರುವ ಎಲ್ಲ ಆಟೋ ನಿಲ್ದಾಣಗಳಲ್ಲೂ ದುಡಿಮೆಗೆ ಅವಕಾಶ ಸಿಕ್ಕರೆ ಜೀವನ ಮಾಡಬಹುದು ಎಂದರು.

ನಗರಸಭೆಯು ಆಟೋ ನಿಲ್ದಾಣಗಳ ನಿರ್ಮಾಣಕ್ಕೆ ಅನುಮತಿ ಕೊಡುತ್ತದೆಯೇ ಹೊರತು ನಿರ್ಧಿಷ್ಟ ನಿಲ್ದಾಣದಲ್ಲಿಯೇ ದುಡಿಯಬೇಕು ಎಂಬ ನಿಯಮ ವಿಧಿಸುವುದಿಲ್ಲ. ಆದರೆ ಕೆಲವು ಆಟೋ ಚಾಲಕರು ದುರಾಸೆಗೆ ಬಿದ್ದು ಅನ್ಯ ನಿಲ್ದಾಣದವರನ್ನು ತಮ್ಮ ನಿಲ್ದಾಣಕ್ಕೆ ಬಿಟ್ಟುಕೊಳ್ಳುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಜಿಲ್ಲಾಡಳಿತ ಹಾಗೂ ಸಾರಿಗೆ ಇಲಾಖೆ ಕೂಡಲೇ ಸಮಸ್ಯೆ ಬಗೆಹರಿಸಬೇಕು, ಎಲ್ಲ ಆಟೋ ನಿಲ್ದಾಣಗಳಲ್ಲಿ ದುಡಿಮೆ ಮಾಡಲು ಅವಕಾಶವಿದ್ದು ಅಡ್ಡಿ ಮಾಡಬಾರದು ಎಂಬ ಆದೇಶ ಹೊರಡಿಸಬೇಕು ಎಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ವಿಠಲ ಜತ್ತನ್ನ, ರಾಜೇಶ್ ಸುವರ್ಣ, ಶಿವರಾಮ ಶೆಟ್ಟಿಗಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT