ಉಡುಪಿ: ಉಡುಪಿ ಜಿಲ್ಲೆಯು ತನ್ನದೇ ಆದ ಶ್ರೀಮಂತ ಇತಿಹಾಸ, ಸಾಂಸ್ಕೃತಿಕ ಪರಂಪರೆಯನ್ನು ಹೊಂದಿದ್ದು, ಇಲ್ಲಿನ ಹಲವು ಐತಿಹಾಸಿಕ ಮಹತ್ವದ ತಾಣಗಳು, ಪುರಾತತ್ವ ನಿವೇಶನಗಳು ಇನ್ನೂ ರಕ್ಷಣೆಗಾಗಿ ಕಾದಿವೆ.

ತುಳುನಾಡಿನ ರಾಜಧಾನಿ ಎಂದು ಉಲ್ಲೇಖಿತವಾಗಿರುವ ಬ್ರಹ್ಮಾವರ ತಾಲ್ಲೂಕಿನ ಬಾರ್ಕೂರಿನಲ್ಲಿ ಇಂದಿಗೂ ನೂರಾರು ಇತಿಹಾಸದ ಆಕರಗಳು ಸೂಕ್ತ ರಕ್ಷಣೆ ಇಲ್ಲದೆ ಕಣ್ಮರೆಯಾಗುತ್ತಿವೆ. ಅದೇ ರೀತಿ ಜಿಲ್ಲೆಯ ಇತರೆಡೆಗಳಲ್ಲೂ ಇತಿಹಾಸ ಪ್ರಸಿದ್ಧ ತಾಣಗಳು, ಪ್ರಾಗೈತಿಹಾಸಿಕ ಕುರುಹುಗಳು, ಬೃಹತ್ ಶಿಲಾಯುಗದ ಪಳೆಯುಳಿಕೆಗಳು ತೀವ್ರ ನಿರ್ಲಕ್ಷ್ಯಕ್ಕೊಳಗಾಗಿವೆ.

ಅಪೂರ್ವ ಐತಿಹಾಸಿಕ ಮಹತ್ವ ಹೊಂದಿರುವ ಸ್ಥಳಗಳಲ್ಲೂ ಉತ್ಖನನ ನಡೆಯದೆ ಅಮೂಲ್ಯ ದಾಖಲೆಗಳು ಮಣ್ಣಿನಡಿಯಲ್ಲೇ ಮಲಗಿವೆ ಎನ್ನುತ್ತಾರೆ ಜನರು. ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ, ಮುಜರಾಯಿ ಇಲಾಖೆಯ ಅಧೀನದಲ್ಲಿರುವ ಬಸದಿ, ದೇಗುಲಗಳಲ್ಲೂ ಪುರಾವಸ್ತುಗಳ ಸಂರಕ್ಷಣೆ ಸೂಕ್ಷ ರೀತಿಯಲ್ಲಿ ನಡೆಯುತ್ತಿಲ್ಲ ಎಂಬ ಆರೋಪಗಳೂ ಕೇಳಿ ಬಂದಿವೆ.

ಈಚೆಗೆ ಬಾರ್ಕೂರಿಗೆ ಭೇಟಿ ನೀಡಿದ್ದ ಪ್ರವಾಸೋದ್ಯಮ ಇಲಾಖೆಯ ಸಚಿವ ಎಚ್.ಕೆ.ಪಾಟೀಲ ಅವರು, ಬಾರ್ಕೂರು ಪ್ರದೇಶದ ಐತಿಹಾಸ ತಾಣಗಳ ರಕ್ಷಣೆಗೆ ಸಂಬಂಧಿಸಿ ವರದಿ ನೀಡಲು ಸಮಿತಿಯೊಂದನ್ನು ರಚಿಸುವ ಭರವಸೆ ನೀಡಿರುವುದು ಜಿಲ್ಲೆಯ ಇತಿಹಾಸ ಆಸಕ್ತರಲ್ಲಿ ನಿರೀಕ್ಷೆ ಮೂಡಿಸಿದೆ. ಜಿಲ್ಲೆಯ ಇತರ ಐತಿಹಾಸಿಕ ತಾಣಗಳಿಗೂ ಮೂಲ ಸೌಕರ್ಯ ಒದಗಿಸಿ, ಅವುಗಳಿಗೆ ಸಂರಕ್ಷಣೆ ನೀಡಿ ಪ್ರವಾಸಿಗರನ್ನು ಆಕರ್ಷಿಸಬೇಕೆಂಬ ಕೂಗು ಕೇಳಿ ಬಂದಿದೆ.

ಕುಂದಾಪುರ ತಾಲ್ಲೂಕಿನ ಬಸ್ರೂರು ಅಳುಪ, ವಿಜಯನಗರದ ಕಾಲದಲ್ಲಿ ಪ್ರಮುಖ ಬಂದರಾಗಿತ್ತು ಎಂದು ಹೇಳಲಾಗುತ್ತಿದೆ. ಇಲ್ಲಿಯೂ ಉತ್ಖನನ ನಡೆದರೆ ಪುರಾತನ ಕುರುಹುಗಳು ಲಭಿಸಬಹುದೆಂಬ ವಿಶ್ವಾಸ ಇತಿಹಾಸಜ್ಞರಲ್ಲಿದೆ.

ಅಳುಪರ ಪ್ರಾಚೀನ ರಾಜಧಾನಿ ಎಂದು ತಿಳಿಯಲಾದ ಉದ್ಯಾವರದಲ್ಲೂ ಪ್ರಾಚೀನಾವಶೇಷಗಳು ತೀವ್ರ ನಿರ್ಲಕ್ಷ್ಯಕ್ಕೆ ಒಳಗಾಗಿವೆ ಎಂದು ಇತಿಹಾಸ ಪ್ರಿಯರು ಹೇಳುತ್ತಾರೆ.

ಕರಾವಳಿಯ ಪುರಾತತ್ವ ಮಹತ್ವದ ನಿವೇಶನಗಳನ್ನು ಅಧಿಸೂಚಿತ ಪ್ರದೇಶಗಳೆಂದು ಘೋಷಿಸಲು ಕ್ರಮ ಕೈಗೊಳ್ಳಬೇಕೆಂದು ಪುರಾತತ್ವ ಸಂಶೋಧನೆಯಲ್ಲಿ ತೊಡಗಿಸಿಕೊಂಡಿರುವ ಆದಿಮ ಕಲಾ ಟ್ರಸ್ಟ್ ಉಡುಪಿಯು ಪ್ರವಾಸೋದ್ಯಮ ಸಚಿವರಿಗೆ ಮನವಿ ಮಾಡಿತ್ತು ಮತ್ತು ಅಂತಹ ಸ್ಥಳಗಳಪಟ್ಟಿಯನ್ನೂ ನೀಡಿತ್ತು.

‘ಸಂರಕ್ಷಣೆ ಕಾರ್ಯ ತುರ್ತಾಗಿ ಆಗಲಿ’

‘ಉಡುಪಿ ಜಿಲ್ಲೆಯ ಬೈಂದೂರು ತಾಲ್ಲೂಕಿನ ಸೇನೇಶ್ವರ ದೇವಾಲಯವು ಅಪೂರ್ವ ಶಿಲ್ಪಕಲೆಯನ್ನು ಹೊಂದಿರುವ ದೇವಾಲಯವಾಗಿದೆ. ಅಲ್ಲಿರುವ ಪುರಾತನ ಶಿಲ್ಪಗಳ ರಕ್ಷಣೆಯಾಗಬೇಕು. ಅವಲಕ್ಕಿ ಪಾರೆ, ಬುದ್ಧನಜೆಡ್ಡು, ಗಾವಳಿಯಲ್ಲಿರುವ ಆದಿಮ ಕಲೆಗಳು, ಕಾರ್ಕಳದ ಪಳ್ಳಿಯಲ್ಲಿರುವ ಬೃಹತ್ಶಿಲಾಯುಗದ ನೆಲೆಗಳ ಸಂರಕ್ಷಣೆ ತುರ್ತಾಗಿ ಆಗಬೇಕಿದೆ’ ಎಂದು ಆದಿಮ ಕಲಾ ಟ್ರಸ್ಟ್ ಉಡುಪಿಯ ಸ್ಥಾಪಕ ಸಂಚಾಲಕ ಪ್ರೊ.ಟಿ.ಮುರುಗೇಶಿ ತಿಳಿಸಿದ್ದಾರೆ.

‘ಕುಂದಾಪುರದ ಹಟ್ಟಿಯಂಗಡಿ ಕೂಡ ಪ್ರಾಚೀನ ಬಂದರು ನಗರವಾಗಿತ್ತು. ಆದರೆ ಅಲ್ಲಿ ಕೂಡ ಉತ್ಖನನ ನಡೆದೇ ಇಲ್ಲ. ಬಾರ್ಕೂರಿನಲ್ಲಿ ನಡೆದಿದ್ದ ಉತ್ಖನನವು ಅರ್ಧದಲ್ಲಿ ನಿಂತು ಹೋಗಿದೆ. ಪ್ರಾಚೀನ ಉದ್ಯಾವರದ ಅರ್ಧಭಾಗ ಸಮುದ್ರದಲ್ಲಿ ಮುಳುಗಿ ಹೋಗಿರುವ ಸಾಧ್ಯತೆ ಇದೆ’ ಎನ್ನುತ್ತಾರೆ ಅವರು. ‘ಪ್ರಾಚ್ಯವಸ್ತು ನಿವೇಶನಗಳನ್ನು ಸಂರಕ್ಷಿತ ಪ್ರದೇಶಗಳೆಂದು ಘೋಷಣೆ ಮಾಡಿ, ಆಸಕ್ತರಿಗೆ ದತ್ತು ಕೊಟ್ಟು ಅಭಿವೃದ್ಧಿ ಮಾಡಿಸಬೇಕು. ಸ್ಥಳೀಯರಿಗೆ ತರಬೇತಿ ನೀಡಿ ಮಾರ್ಗದರ್ಶಿಗಳನ್ನಾಗಿ ನೇಮಕ ಮಾಡಬೇಕು. ಮುಖ್ಯ ರಸ್ತೆಯಲ್ಲಿ ಮತ್ತು ನಿವೇಶನಗಳಲ್ಲಿ ಫಲಕಗಳನ್ನು ಸ್ಥಾಪಿಸಬೇಕು ಮತ್ತು ಅಲ್ಲಿ ಮೂಲಸೌಕರ್ಯ ಅಭಿವೃದ್ಧಿಪಡಿಸಬೇಕು’ ಎಂದು ಅವರು ಆಗ್ರಹಿಸಿದ್ದಾರೆ. ‘ಕೊಡಚಾದ್ರಿಯಲ್ಲಿ ರೋಪ್ ವೇ ಮಾಡಬಾರದು ಮತ್ತು ಅಲ್ಲಿರುವ ಲೋಹದ ಕಂಬವನ್ನು ಸಂರಕ್ಷಣೆ ಮಾಡಬೇಕು’ ಎಂದೂ ಅವರು ಒತ್ತಾಯಿಸಿದ್ದಾರೆ.

‘ಸಮಗ್ರ ಕಾರ್ಯಯೋಜನೆ ರೂಪಿಸಿ’

‘ಬಾರ್ಕೂರು ಅಭಿವೃದ್ಧಿಗಾಗಿ ತಜ್ಞರ ಸಮಿತಿಯನ್ನು ರಚಿಸುವ ಭರವಸೆಯನ್ನು ಈಚೆಗೆ ಪ್ರವಾಸೋದ್ಯಮ ಸಚಿವರು ನೀಡಿದ್ದರು. ಅದು ಬರೇ ಬಾಯಿಮಾತಿನ ಭರವಸೆಯಾಗದೆ ಶೀಘ್ರವಾಗಿ ಸಮಿತಿ ರಚನೆಯಾಗಿ ಅಭಿವೃದ್ಧಿ ಕಾರ್ಯ ಪ್ರಾರಂಭವಾಗಲಿ. ಉಡುಪಿ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಬೆಳವಣಿಗೆ ಪೂರಕವಾದ ಪ್ರಾಕೃತಿಕ ಸಂಪತ್ತು ಇದೆ. ಪ್ರಾಚೀನ ದೇವಸ್ಥಾನಗಳು ಜೆತೆಗೆ ಪ್ರಕೃತಿದತ್ತವಾದ ಪ್ರೇಕ್ಷಣೀಯ ತಾಣಗಳು ಉತ್ತರದಿಂದ ದಕ್ಷಿಣ, ಪೂರ್ವದಿಂದ ಪಶ್ಚಿಮದ ದಿಕ್ಕಿನಲ್ಲಿ ಸಾಕಷ್ಟು ಸಂಖ್ಯೆಯಲ್ಲಿವೆ. ಅವುಗಳನ್ನು ಇನ್ನಷ್ಟು ಜೀವಂತಗೊಳಿಸಿ ಮೂಲಸೌಕರ್ಯ ಒದಗಿಸಬೇಕಾದ ಅಗತ್ಯವಿದೆ’ ಎಂದು ಎಂಜಿಎಂ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ನಿವೃತ್ತ ಮುಖ್ಯಸ್ಥ ಪ್ರೊ.ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಅಭಿಪ್ರಾಯಪಟ್ಟಿದ್ದಾರೆ.

‘ಕೊಕ್ಕರ್ಣೆ ಸಮೀಪದ ಸೂರಾಲು ಮಣ್ಣಿನ ಅರಮನೆ, ಕಾರ್ಕಳ ತಾಲ್ಲೂಕಿನ ಆಸುಪಾಸಿನಲ್ಲಿರುವ ಪಾಳು ಬಿದ್ದ ಜೈನ ಬಸದಿ, ಕೆರೆಗಳನ್ನು ಇನ್ನಷ್ಟು ಅಭಿವೃದ್ಧಿ ಪಡಿಸಬೇಕಾದ ಅಗತ್ಯವಿದೆ. ಉಡುಪಿ ಜಿಲ್ಲೆ ಅಂದರೆ ದೈವ ದೇವಾಲಯಗಳ ನಾಡು ಪ್ರಕೃತಿ ರಮಣೀಯವಾದ ಬೀಡು ಹೌದು. ಇಲ್ಲಿನ ಜಾನಪದ ಕಲೆಗಳಿಗೆ ಇನ್ನಷ್ಟು ಮೆರುಗು ನೀಡಿ ಪ್ರಚಾರ ಪಡಿಸುವ ನಿಟ್ಟಿನಲ್ಲಿ ಪ್ರವಾಸೋದ್ಯಮ ಇಲಾಖೆ ಹೊಸದೊಂದು ಸಮಗ್ರ ಕಾರ್ಯಯೇೂಜನೆ ರೂಪಿಸಲು ಮುಂದಾಗಬೇಕು’ ಎಂದು ಅವರು ಆಗ್ರಹಿಸಿದ್ದಾರೆ.

‘ಸರ್ಕಾರದ ಮಟ್ಟದಲ್ಲಿ ಗಮನ ಸೆಳೆದಿದ್ದೇವೆ’

‘ಜಿಲ್ಲೆಯ ಐತಿಹಾಸಿಕ ತಾಣಗಳಿಗೆ ಸರ್ಕಾರಿ ಮಟ್ಟದಲ್ಲಿ ಮಾನ್ಯತೆ ಸಿಗಲು ಮತ್ತು ಅಭಿವೃದ್ಧಿಗೆ ಅನುದಾನಕ್ಕಾಗಿ ಈಚೆಗೆ ಜಿಲ್ಲೆಗೆ ಭೇಟಿ ನೀಡಿದ್ದ ಪ್ರವಾಸೋದ್ಯಮ ಸಚಿವರಿಗೆ ಮನವಿ ಮಾಡಿದ್ದೇವೆ. ಐತಿಹಾಸಿಕ ಕೆರೆ, ಕೋಟೆಗಳನ್ನು ಮರು ಸ್ಥಾಪನೆ ಮಾಡುವುದರ ಜೊತೆಗೆ ಮುಂದಿನ ತಲೆಮಾರಿಗೆ ಅವುಗಳ ಮಹತ್ವ ತಿಳಿಸಲು ಮತ್ತು ಪ್ರವಾಸಿಗರನ್ನು ಸೆಳೆಯುವ ಕಾರ್ಯವಾಗಬೇಕು ಎಂಬುದನ್ನು ಸಚಿವರ ಗಮನಕ್ಕೆ ತಂದಿದ್ದೇವೆ’ ಎಂದು ಪ್ರವಾಸೋದ್ಯಮ ಇಲಾಖೆಯ ಪ್ರಭಾರ ಸಹಾಯಕ ನಿರ್ದೇಶಕಿ ವಿಂಧ್ಯಾ ಎನ್.ಎಂ.ತಿಳಿಸಿದರು.

ಅವಲಕ್ಕಿಪಾರೆಯ ಆದಿಮ ಕಲೆ

ಕುಂದಾಪುರ ತಾಲ್ಲೂಕಿನ ಇಡೂರು–ಕುಂಞ್ಞಾಡಿ ಗ್ರಾಮ ವ್ಯಾಪ್ತಿಯ ಕೊಲ್ಲೂರು ವನ್ಯಜೀವಿ ಅಭಯಾರಣ್ಯ ವ್ಯಾಪ್ತಿಯಲ್ಲಿ ಅವಲಕ್ಕಿಪಾರೆಯಲ್ಲಿ ಆದಿಮ ಕಲಾ ನಿವೇಶನವಿದೆ. ಅಲ್ಲಿನ ಸುಮಾರು ಅರ್ಧ ಎಕರೆ ಪ್ರದೇಶದಲ್ಲಿ 20ಕ್ಕಿಂತಲೂ ಹೆಚ್ಚು ಮಾನವರ, ಪ್ರಾಣಿಗಳ ರೇಖಾ ಚಿತ್ರಗಳಿವೆ.

ಕಲ್ಲಿನ ಮೇಲೆ ರೇಖಾಚಿತ್ರ

ಕುಂದಾಪುರ ತಾಲ್ಲೂಕಿನ ಕುರ್ಕುಂಜೆ ಗ್ರಾಮದ ಬುದ್ಧನಜೆಡ್ಡು ಭೀಮನಪಾರೆ ಎಂಬ ಸ್ಥಳದಲ್ಲಿ ಸುಮಾರು ಅರ್ಧ ಎಕರೆ ಜಾಗದಲ್ಲಿ 40ಕ್ಕಿಂತಲೂ ಹೆಚ್ಚು ಮಾನವ, ಪ್ರಾಣಿ, ಪಕ್ಷಿಗಳ ರೇಖಾ ಚಿತ್ರಗಳಿವೆ.

ಗಾವಳಿ: ಕುಂದಾಪುರ ತಾಲ್ಲೂಕಿನ ಗಾವಳಿಯಲ್ಲಿ ನೈಸರ್ಗಿಕ ಬಂಡೆಗಳ ಮೇಲೆ ಗೂಳಿಯ ಚಿತ್ರಗಳು ಕಂಡು ಬಂದಿವೆ.

ಕಲ್ಮನೆ ಸಮಾಧಿ: ಕಾರ್ಕಳ ತಾಲ್ಲೂಕಿನ ಪಳ್ಳಿಯ ಮದ್ಮಲ್ಪಾದೆ ಎಂಬಲ್ಲಿ ಕಲ್ಲು ಬೆಟ್ಟದ ಮೇಲೆ ಬೃಹತ್ ಶಿಲಾಯುಗದ ಕಲ್ಮನೆ ಸಮಾಧಿಗಳನ್ನು ಸಂಶೋಧಕರು ಪತ್ತೆ ಹಚ್ಚಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.