ಉಡುಪಿ: ನಗರದ ಮಿಷನ್ ಕಾಂಪೌಡ್ ಬಳಿಯ ಕಂದಾಯ ಇಲಾಖೆಯ ‘ಸಿ’ ದರ್ಜೆ ನೌಕರರ ವಸತಿ ಸಮುಚ್ಚಯದ 6 ಮನೆಗಳಿಗೆ ಭಾನುವಾರ ರಾತ್ರಿ ನುಗ್ಗಿದ ಕಳ್ಳರು ನಗ, ನಗದು ದೋಚಿದ್ದಾರೆ.
ಎರಡು ದಿನ ರಜೆ ಇದ್ದುದರಿಂದ ಹೆಚ್ಚಿನ ಕುಟುಂಬಗಳು ಊರಿಗೆ ತೆರಳಿದ್ದವು. ಆರು ಮನೆಗಳ ಬೀಗ ಮುರಿದು ಕಳ್ಳರು ಒಳಗೆ ಪ್ರವೇಶಿಸಿದ್ದಾರೆ. ಎರಡು ಮನೆಗಳೊಳಗಿನ ಕಪಾಟುಗಳಲ್ಲಿದ್ದ ಸಾಮಗ್ರಿಗಳನ್ನು ಚೆಲ್ಲಾಪಿಲ್ಲಿ ಮಾಡಿ, ಹಣ ಮತ್ತು ಚಿನ್ನಾಭರಣಗಳನ್ನು ದೋಚಿಕೊಂಡು ಹೋಗಿದ್ದಾರೆ. ಉಳಿದ ಮನೆಗಳಲ್ಲಿ ಕಳವಿಗೆ ಯತ್ನ ನಡೆಸಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.
‘ಕಡೆಕಾರ್‌ನಲ್ಲಿರುವ ಸ್ನೇಹಿತೆಯ ಮನೆಗೆ ಹೋಗಿದ್ದೆ, ಸೋಮವಾರ ಬೆಳಿಗ್ಗೆ ಬಂದು ನೋಡುವಾಗ ಮನೆಯ ಬೀಗ ಮುರಿದಿತ್ತು. ಮಲಗುವ ಕೋಣೆಯ ಕಪಾಟಿನಲ್ಲಿದ್ದ ₹20 ಸಾವಿರ ನಗದು, 126 ಗ್ರಾಂ ತೂಕದ ಚಿನ್ನಾಭರಣಗಳನ್ನು ಕಳವು ಮಾಡಲಾಗಿದೆ ಎಂದು ವಸತಿ ಸಮುಚ್ಚಯದ ನಿವಾಸಿ ಫ್ಲೇವಿಯಾ ಡಿಸೋಜ ಎಂಬುವವರು ನಗರ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ವಸತಿ ಸಮುಚ್ಚಯದ ಇನ್ನೊಬ್ಬ ನಿವಾಸಿ ವಾಸುದೇವ ಎಂಬುವವರು ಕೂಡ ದೂರು ನೀಡಿದ್ದಾರೆ. ರಜೆ ಇದ್ದುದರಿಂದ ಊರಿಗೆ ಹೋಗಿದ್ದೆ, ಫ್ಲೆವಿಯಾ ಅವರು ಕರೆ ಮಾಡಿ ಕಳ್ಳತನವಾಗಿರುವ ಬಗ್ಗೆ ಮಾಹಿತಿ ನೀಡಿದರು. ಮನೆಗೆ ಬಂದು ನೋಡಿದಾಗ, ಮಲಗುವ ಕೋಣೆಯ ಕಪಾಟಿನ ಬೀಗ ಮುರಿದು ಅದರಲ್ಲಿದ್ದ ₹ 25 ಸಾವಿರ ಕಳವು ಮಾಡಲಾಗಿದೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.
ಭಾನುವಾರ ತಡರಾತ್ರಿ ನಾಯಿ ಬೊಗಳಿದೆ. ಆದರೆ ಪ್ರತಿದಿನದಂತೆ ನಾಯಿ ಬೊಗಳುತ್ತಿದೆ ಎಂದು ನಾವ್ಯಾರು ಹೆಚ್ಚು ಗಮನ ನೀಡಿಲ್ಲ. ಈ ಕಟ್ಟಡದಲ್ಲಿ ಸಿ.ಸಿ.ಟಿ.ವಿ. ಕ್ಯಾಮೆರಾ ಇರಲಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.
ಸ್ಥಳಕ್ಕೆ ಶ್ವಾನದಳ, ಬೆರಳಚ್ಚು ತಜ್ಞರು, ಹೆಚ್ಚುವರಿ ಎಸ್ಪಿಗಳಾದ ಸಿದ್ದಲಿಂಗಪ್ಪ, ಪಿ.ಎ. ಹೆಗಡೆ, ನಗರ ಠಾಣಾ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಸರಣಿ ಕಳ್ಳತನದ ತನಿಖೆ ನಡೆಸಲು ಡಿಎಸ್‌ಪಿ ನೇತೃತ್ವದಲ್ಲಿ ಒಬ್ಬ ಇನ್‌ಸ್ಪೆಕ್ಟರ್ ಹಾಗೂ ಇಬ್ಬರು ಸಬ್ ಇನ್‌ಸ್ಪೆಕ್ಟರ್‌ಗಳನ್ನೊಳಗೊಂಡ ತಂಡವನ್ನು ರಚಿಸಿದ್ದೇವೆ