ಬುಧವಾರ, ಜೂಲೈ 8, 2020
27 °C
ಒಂದು ಪ್ರಯೋಗಾಲಯದಲ್ಲಿ ಪಾಸಿಟಿವ್‌, ಮತ್ತೊಂದರಲ್ಲಿ ನೆಗೆಟಿವ್‌

ಜಿಲ್ಲಾ ಪಂಚಾಯಿತಿ ಸಿಬ್ಬಂದಿ ವರದಿ ನೆಗೆಟಿವ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಡುಪಿ: ಜಿಲ್ಲಾ ಪಂಚಾಯಿತಿ ಕಚೇರಿ ಸಿಬ್ಬಂದಿಯ ವೈದ್ಯಕೀಯ ಮರು ಪರೀಕ್ಷಾ ವರದಿ ನೆಗೆಟಿವ್ ಬಂದಿದ್ದು, ಆಸ್ಪತ್ರೆಯಿಂದ ಮನೆಗೆ ಬಿಡುಗಡೆ ಮಾಡಲಾಗಿದೆ ಎಂದು ಜಿಲ್ಲಾ ಕೋವಿಡ್‌ ನೋಡೆಲ್ ಅಧಿಕಾರಿ ಡಾ.ಪ್ರಶಾಂತ್ ಭಟ್ ತಿಳಿಸಿದ್ದಾರೆ.

ವರದಿಯಲ್ಲಿ ಗೊಂದಲ:

ಜಿಲ್ಲಾ ಪಂಚಾಯಿತಿಯಲ್ಲಿ ಕಾರ್ಯ ನಿರ್ವಹಿಸುವ 30 ವರ್ಷದ ವ್ಯಕ್ತಿಗೆ ಕೊರೊನಾ ಸೋಂಕಿನ ಲಕ್ಷಣಗಳು ಕಂಡುಬಂದ ಹಿನ್ನೆಲೆಯಲ್ಲಿ ಮೇ 19ರಂದು ಗಂಟಲ ದ್ರವವನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಅಲ್ಲಿಂದ ಬಂದ ವರದಿಯಲ್ಲಿ ಕೋವಿಡ್‌ ಸೋಂಕು ದೃಢಪಟ್ಟಿತ್ತು.

ಆದರೆ, ವ್ಯಕ್ತಿಗೆ ರೋಗ ಲಕ್ಷಣಗಳು ಕಂಡುಬಾರದ ಹಿನ್ನೆಲೆಯಲ್ಲಿ 7 ದಿನಗಳ ಬಳಿಕ ಮತ್ತೊಮ್ಮೆ ಪರೀಕ್ಷೆ ನಡೆಸಿದಾಗ ವರದಿ ನೆಗೆಟಿವ್ ಬಂದಿತ್ತು. ಇದರಿಂದ ಗೊಂದಲಕ್ಕೆ ಸಿಲುಕಿದ್ದ ಅಧಿಕಾರಿಗಳು ಮತ್ತೆ ಮರು ಪರೀಕ್ಷೆ ನಡೆಸಿದಾಗ ಮೇ 28ರಂದು ಬಂದ ವರದಿಯಲ್ಲಿ ನೆಗೆಟಿವ್ ಕಂಡುಬಂದಿದೆ. ಇದರ ಆಧಾರದ ಮೇಲೆ ವ್ಯಕ್ತಿಯನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.

ಒಮ್ಮೆಲೆ ತೀರ್ಮಾನಕ್ಕೆ ಬರಲಾಗದು:

ಪ್ರಯೋಗಾಲಯಗಳ ವರದಿಯಲ್ಲಿ ಭಿನ್ನತೆಗಳಿರುವುದು ಮೇಲ್ನೋಟಕ್ಕೆ ಕಂಡುಬಂದರೂ ಅಂತಿಮ ವರದಿ ಬಾರದ ಹೊರತು ಖಚಿತವಾಗಿ ಏನನ್ನೂ ಹೇಳಲು ಸಾಧ್ಯವಿಲ್ಲ. ಜಿಲ್ಲಾ ಪಂಚಾಯಿತಿ ಸಿಬ್ಬಂದಿಗೆ ಮೇ 19ರಂದು ನಡೆಸಿದ ಪರೀಕ್ಷೆಯಲ್ಲಿ ಪಾಸಿಟಿವ್‌ ಬಂದಿದ್ದು ಹಾಗೂ 7 ದಿನಗಳ ಬಳಿಕ ನಡೆದ ಮರು ಪರೀಕ್ಷೆಯಲ್ಲಿ ನೆಗೆಟಿವ್ ಬಂದಿದ್ದು ಹೌದು. ಆದರೆ ಈ ಏಳು ದಿನಗಳಲ್ಲಿ ಸೋಂಕಿತ ವ್ಯಕ್ತಿ ಗುಣಮುಖನಾಗಿರುವ ಸಾಧ್ಯತೆಗಳೂ ಇರುತ್ತವೆ. 

ಹಾಗಾಗಿ, ಮೇ 19ರಂದು ಸಂಗ್ರಹಿಸಿದ್ದ ಮಾದರಿಯನ್ನು ಬೆಂಗಳೂರಿನ ಎನ್‌ಐಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಅಲ್ಲಿನ ವರದಿಯ ಆಧಾರದ ಮೇಲೆ ಪ್ರಯೋಗಾಲಯದ ವರದಿಯ ಸತ್ಯಾಸತ್ಯತೆಯ ಬಗ್ಗೆ ಹೇಳಬಹುದು ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಕೆಲವು ದಿನಗಳ ಹಿಂದೆ, ಚಿತ್ರದುರ್ಗದಿಂದ ಮಣಿಪಾಲಕ್ಕೆ ಕ್ಯಾನ್ಸರ್‌ ಚಿಕಿತ್ಸೆಗೆ ಬಂದಿದ್ದ ಬಾಲಕಿಗೂ ಮೊದಲ ವರದಿಯಲ್ಲಿ ಕೋವಿಡ್‌ ಸೋಂಕು ದೃಢಪಟ್ಟಿತ್ತು. ಕೆಲ ದಿನಗಳ ಬಳಿಕ ನಡೆಸಿದ ಪರೀಕ್ಷೆಯಲ್ಲಿ ನೆಗೆಟಿವ್ ಕಂಡುಬಂದಿತ್ತು. ಈ ಪ್ರಕರಣದಲ್ಲೂ ಬೆಂಗಳೂರಿನ ಪ್ರಯೋಗಾಲಯಕ್ಕೆ ಮರು ಪರೀಕ್ಷೆಗಾಗಿ ಗಂಟಲ ದ್ರವವನ್ನು ಕಳುಹಿಸಲಾಗಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು