ಗುರುವಾರ , ಅಕ್ಟೋಬರ್ 22, 2020
24 °C
ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಜಿ.ಜಗದೀಶ್ ಘೋಷಣೆ

ಉಡುಪಿ: ಕೋವಿಡ್‌ನಿಂದ ಹಿರಿಯರನ್ನು ರಕ್ಷಿಸಲು ‘ನಮ್ಮ ಮನೆ ನಮ್ಮ ಹಿರಿಯರು’ ಅಭಿಯಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಕೋವಿಡ್‌ ಸೋಂಕಿನಿಂದ ಹಿರಿಯ ನಾಗರಿಕರನ್ನು ರಕ್ಷಿಸಲು ಜಿಲ್ಲೆಯಲ್ಲಿ ‘ನಮ್ಮ ಮನೆ; ನಮ್ಮ ಹಿರಿಯರು’ ಎಂಬ ವಿನೂತನ ಅಭಿಯಾನ ಮಾಡಲು ಜಿಲ್ಲಾಡಳಿತ ನಿರ್ಧರಿಸಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಹೇಳಿದರು.

ಶುಕ್ರವಾರ ಅಜ್ಜರಕಾಡು ಭುಜಂಗ ಪಾರ್ಕ್‌ನಲ್ಲಿ ಆಯೋಜಿಸಿದ್ದ ಗಾಂಧಿ ಜಯಂತಿಯಲ್ಲಿ ಮಾತನಾಡಿದ ಅವರು, ‘ನಮ್ಮ ಮನೆಯ ಹಿರಿಯರನ್ನು ನಾವು ರಕ್ಷಿಸಿಕೊಳ್ಳುತ್ತೇವೆ’ ಎಂಬ ಅಫಿಡವಿಟ್‌ ಸಿದ್ಧಪಡಿಸಿ ಕುಟುಂಬದ ಸದಸ್ಯರಿಂದ ಸಹಿ ಪಡೆಯುವ ಅಭಿಯಾನ ಶೀಘ್ರ ಆರಂಭವಾಗಲಿದೆ. ಇದರಿಂದ ಹಿರಿಯ ಜೀವಗಳು ಉಳಿಯಲಿವೆ' ಎಂದರು.

ತಂದೆ ತಾಯಿ, ತಾತ ಅಜ್ಜಿ ಸೇರಿದಂತೆ ಕುಟುಂಬದ ಹಿರಿಯರ ಮೇಲೆ ನಿಜವಾದ ಪ್ರೀತಿ ಕಾಳಜಿ ಇದ್ದರೆ ಸೋಂಕಿಗೆ ತುತ್ತಾಗದಂತೆ ಅವರ ಯೋಗಕ್ಷೇಮ ನೋಡಿಕೊಳ್ಳಿ. ಕೇವಲ ತೋರ್ಪಡಿಕೆಯ ಪ್ರೀತಿ ಪ್ರದರ್ಶನ ಮಾಡಬೇಡಿ ಎಂದು ಜಿಲ್ಲಾಧಿಕಾರಿ ಕಿವಿಮಾತು ಹೇಳಿದರು.

ಕೆಲವರು ಕೊರೊನಾ ಸೋಂಕು ಇಲ್ಲ ಎಂದೆಲ್ಲ ಜಾಲತಾಣಗಳಲ್ಲಿ ವದಂತಿ ಹಬ್ಬಿಸುತ್ತಿದ್ದಾರೆ. ರೋಗ ನಿರೋಧಕ ಶಕ್ತಿ ಹೆಚ್ಚಿರುವ ಯುವಕರಿಗೆ ಸೋಂಕು ತಗುಲಿದರೆ ಬೇಗ ಗುಣಮುಖರಾಗುತ್ತಾರೆ ನಿಜ. ಆದರೆ, ಅವರಿಂದ ಕುಟುಂಬದ ಹಿರಿಯ ಜೀವಗಳಿಗೆ ಸೋಂಕು ತಗುಲಿದರೆ ಪ್ರಾಣಾಪಾಯ ಸಾದ್ಯತೆ ಹೆಚ್ಚಿರುತ್ತದೆ. ಈ ನಿಟ್ಟಿನಲ್ಲಿ ಸೋಂಕಿನ ಲಕ್ಷಣಗಳು ಕಂಡುಬಂದರೆ ಸ್ವಯಂ ಕೋವಿಡ್‌ ಪರೀಕ್ಷೆ ಮಾಡಿಸಿಕೊಳ್ಳಿ. ಹಿರಿಯರನ್ನು ಮನೆಯಲ್ಲಿಯೇ ಪ್ರತ್ಯೇಕವಾಗಿರುವಂತೆ ನೋಡಿಕೊಳ್ಳಿ ಎಂದು ಸಲಹೆ ನೀಡಿದರು.

ಶಾಸಕ ರಘುಪತಿ ಭಟ್‌ ಮಾತನಾಡಿ, ಗಾಂಧೀಜಿ ಸ್ವಚ್ಛತೆ ಕುರಿತ ನೀಡಿದ ಸಂದೇಶದ ಅನುಷ್ಠಾನದ ಫಲಶೃತಿ ದೇಶದೆಲ್ಲೆಡೆ ಕಾಣುತ್ತಿದೆ. ಸಾರ್ವಜನಿಕರಲ್ಲಿ ಸ್ಚಚ್ಛತೆಯ ಅರಿವು ಹೆಚ್ಚಾಗಿದೆ. ನಿರಂತರ ಪರಿಸರ ಸ್ಚಚ್ಚತಾ ಕಾರ್ಯಕ್ರಮಗಳು ನಡೆಯುತ್ತಿವೆ ಎಂದರು.

ಉಡುಪಿ ಜಿಲ್ಲಾ ಆಸ್ಪತ್ರೆಯನ್ನು ₹ 150 ಕೋಟಿ ವೆಚ್ಚದಲ್ಲಿ ಮೇಲ್ದರ್ಜೆಗೇರಿಸಲು ಮುಖ್ಯಮಂತ್ರಿ ಸಮ್ಮತಿಸಿದ್ದು, ಅರ್ಥಿಕ ಇಲಾಖೆ ಅನುಮೋದನೆ ನೀಡಿದೆ. ಮುಂದಿನವಾರ ನಡೆಯುವ ಸಂಪುಟ ಸಭೆಯಲ್ಲಿ ಜಿಲ್ಲಾ ಆಸ್ಪತ್ರೆ ಮೇಲ್ದರ್ಜೆಗೇರುವ ಘೋಷಣೆ ಆಗಲಿದೆ ಎಂದರು.

ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಘವೇಂದ್ರ ಕಿಣಿ, ನಗರಸಭಾ ಸದಸ್ಯೆ ರಶ್ಮಿ ಚಿತ್ತರಂಜನ್, ಎಸ್‌ಪಿ ವಿಷ್ಣುವರ್ಧನ್, ಹೆಚ್ಚುವರಿ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಪೌರಾಯುಕ್ತ ಆನಂದ್‌ ಕಲ್ಲೋಳಿಕರ್ ಇದ್ದರು.

ಗಣೇಶ್ ಗಂಗೊಳ್ಳಿ ಹಾಗೂ ತಂಡದಿಂದ ಗಾಂಧಿ ಭಜನೆ ನಡೆಯಿತು. ತ್ಯಾಜ್ಯ ನಿರ್ವಹಣೆ–ಮರುಬಳಕೆ ಕುರಿತು ಆಯೋಜಿಸಿದ್ದ ಕಿರುಚಿತ್ರ ಸ್ಪರ್ದೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು