ಸೋಮವಾರ, ಆಗಸ್ಟ್ 15, 2022
28 °C
ಫ.ಗು.ಹಳಕಟ್ಟಿ ಜನ್ಮದಿನ, ವಚನ ಸಾಹಿತ್ಯ ಸಂರಕ್ಷಣಾ ದಿನದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ವೀಣಾ

ವಚನ ಸಾಹಿತ್ಯ ಸಂರಕ್ಷಿಸಿ ವಿಶ್ವಕ್ಕೆ ಪರಿಚಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ವಿಶ್ವ ಸಾಹಿತ್ಯಕ್ಕೆ ಅಮೂಲ್ಯ ಕೊಡುಗೆ ನೀಡಿರುವ ಕನ್ನಡ ವಚನ ಸಾಹಿತ್ಯವನ್ನು ಸಂಗ್ರಹಿಸಿ, ಸಂರಕ್ಷಿಸಿ, ಜನತೆಗೆ ಪರಿಚಯಿಸಿದ ಡಾ.ಫ.ಗು.ಹಳಕಟ್ಟಿ ಅವರ ಸಾಹಿತ್ಯ ಸೇವೆ ಅವಿಸ್ಮರಣೀಯ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಎನ್‌.ವೀಣಾ ಹೇಳಿದರು.

ನಗರದ ಅಜ್ಜರಕಾಡು ಡಾ. ಜಿ.ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಶನಿವಾರ ನಡೆದ ಡಾ.ಫ.ಗು.ಹಳಕಟ್ಟಿ ಜನ್ಮದಿನ, ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ನಶಿಸಿ ಹೋಗುತ್ತಿದ್ದ ವಚನ ಸಾಹಿತ್ಯದ ಮೂಲ ಪ್ರತಿಗಳ ತಾಳೆಗರಿಗಳನ್ನು ಸಂಗ್ರಹಿಸಿ, ಮುಂದಿನ ಪೀಳಿಗೆಗೆ ತಲುಪಿಸುವ ಉದ್ದೇಶದಿಂದ ವಚನ ಸಾಹಿತ್ಯವನ್ನು ಗ್ರಂಥ ರೂಪದಲ್ಲಿ ಓದಲು ಅನುಕೂಲವಾಗುವಂತೆ ಮುದ್ರಿಸಿದವರು ಫ.ಗು.ಹಳಕಟ್ಟಿಯವರು. ಗ್ರಂಥಗಳ ರಕ್ಷಣೆಯಿಂದ ಅಮೂಲ್ಯ ವಚನ ಭಂಡಾರ ಜ್ಞಾನ ಎಲ್ಲರನ್ನು ತಲುಪಲು ಸಾಧ್ಯವಾಗಿದೆ ಎಂದರು.

ವಚನಗಳು ಮಾನವೀಯ ಮೌಲ್ಯ, ಸಂದೇಶ, ವಿಶ್ವ ಶಾಂತಿ, ವಿಶ್ವ ಪ್ರೇಮ ಜಾಗೃತಗೊಳಿಸುತ್ತವೆ. ವಚನ ಸಾಹಿತ್ಯದ ಮೂಲ ಪ್ರತಿಗಳ ಸಂಗ್ರಹಕ್ಕಾಗಿ, ಸಂರಕ್ಷಣೆಗಾಗಿ ಹಾಗೂ ಮುದ್ರಣ ಮಾಡಲು ಜೀವನವನ್ನೇ ಮುಡಿಪಾಗಿಟ್ಟು ಕನ್ನಡ ಸಾಹಿತ್ಯಕ್ಕೆ ಅತ್ಯಮೂಲ್ಯ ಕೊಡುಗೆ ನೀಡಿದವರು ಫ.ಗು.ಹಳಕಟ್ಟಿ ಎಂದು ಸ್ಮರಿಸಿದರು.

ಡಾ.ಫ.ಗು.ಹಳಕಟ್ಟಿ ಕುರಿತು ಉಪನ್ಯಾಸ ನೀಡಿದ, ತೆಂಕನಿಡಿಯೂರು ಕಾಲೇಜಿನ ಸಹ ಪ್ರಾಧ್ಯಾಪಕ ಡಾ.ವೆಂಕಟೇಶ್, ವಚನ ಸಾಹಿತ್ಯ ಮತ್ತು ವಚನಕಾರರ ಬಗ್ಗೆ ಅಮೂಲಾಗ್ರವಾಗಿ ತಿಳಿಯಲು ಹಳಕಟ್ಟಿಯವರ ಶ್ರಮದಿಂದ ಸಾದ್ಯವಾಗಿದೆ. ಮನೆಗಳಲ್ಲಿ ಪೂಜಿಸಲ್ಪಡುತ್ತಿದ್ದ ವಚನ ಸಾಹಿತ್ಯದ ತಾಳೆಗರಿಗಳು, ಅಟ್ಟದ ಮೇಲೆ ದೂಳು ಹಿಡಿದ್ದಿದ್ದ, ಹುಳು ತಿಂದಿದ್ದ, ಅರೆಬರೆ ನಾಶವಾಗಿದ್ದ ವಚನಗಳ ಮೂಲ ಪ್ರತಿಗಳನ್ನು ಬೇಡಿ ಸಂಗ್ರಹಿಸಿದ ಫ.ಗು.ಹಳಕಟ್ಟಿಯವರು ಗ್ರಂಥ ರೂಪದಲ್ಲಿ ಪ್ರಕಟಿಸಿ ಸಾಹಿತ್ಯ ಲೋಕಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ. 250ಕ್ಕೂ ಹೆಚ್ಚು ಹೊಸ ವಚನಕಾರರರ ವಚನಗಳನ್ನು ಗುರುತಿಸಿದ್ದಾರೆ ಎಂದರು.

ಸಂಗ್ರಹಿಸಿದ ವಚನಗಳನ್ನು ಮುದ್ರಿಸಲು ಮುದ್ರಣಾಲಯ ಸ್ಥಾಪನೆಗೆ ಮನೆ ಮಾರಾಟ ಮಾಡಿದ ಫ.ಗು. ಬಡತನದಲ್ಲೇ ಕೊನೆವರೆಗೂ ಬದುಕಿದರು. ಅತ್ಯಂತ ಸರಳ ಜೀವನ ನಡೆಸಿದ ಹಳಕಟ್ಟಿಯವರು ವಚನ ಸಾಹಿತ್ಯವನ್ನು ಸಂಗ್ರಹಿಸದೆ, ವಿಶ್ಲೇಷಿಸದೆ, ವರ್ಗಿಕರಿಸದೆ ಇದ್ದರೆ ಅಜ್ಞಾತವಾಗಿ ಉಳಿದಿದ್ದ ಕನ್ನಡದ ಅಮೂಲ್ಯ ವಚನ ಗ್ರಂಥ ಭಂಡಾರ ವಿಶ್ವಕ್ಕೆ ಪರಿಚಯವಾಗುತ್ತಿರಲಿಲ್ಲ ಎಂದರು.

ಡಾ.ಜಿ.ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಕನ್ನಡ ವಿಭಾಗದ ಮುಖ್ಯಸ್ಥೆ ಡಾ.ನಿಕೇತನ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಲಾ ವಿಭಾಗದ ಡೀನ್ ಪ್ರೊ.ಸೋಜನ್, ಪ್ರಾಂಶುಪಾಲ ಡಾ.ಭಾಸ್ಕರ್ ಶೆಟ್ಟಿ, ಹೆಬ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ.ಪ್ರಸಾದ್‌ ರಾವ್ ಇದ್ದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿದರು. ರವಿರಾಜ್ ಶೆಟ್ಟಿ ವಂದಿಸಿದರು. ತ್ರಿವೇಣಿ ಕಾರ್ಯಕ್ರಮ ನಿರೂಪಿಸಿದರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.