ಗುರುವಾರ , ಆಗಸ್ಟ್ 18, 2022
24 °C
ಜೂನ್ 14ರಿಂದ ಕೆಲವು ನಿರ್ಬಂಧಗಳು ಸಡಿಲ: ಜಿಲ್ಲಾಧಿಕಾರಿ ಜಿ. ಜಗದೀಶ್

ಅನ್‌ಲಾಕ್‌ ಮಾರ್ಗಸೂಚಿ ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಿ: ಜಿಲ್ಲಾಧಿಕಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಜೂನ್ 14ರಿಂದ ಜಿಲ್ಲೆಲ್ಲಿ ಕೆಲವು ನಿರ್ಬಂಧಗಳನ್ನು ಸಡಿಲಿಸಲಾಗುತ್ತಿದೆ. ಈ ಅವಧಿಯಲ್ಲಿ ಸರ್ಕಾರದ ಮಾರ್ಗಸೂಚಿಯಲ್ಲಿರುವ ಚಟುವಟಿಕೆಗಳಿಗೆ ಮಾತ್ರ ಅನುಮತಿ ನೀಡಬೇಕು. ಮಾರ್ಗಸೂಚಿ ಉಲ್ಲಂಘನೆಯಾಗದಂತೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು ಎಂದು ಎಲ್ಲ ತಹಶೀಲ್ದಾರ್ ಹಾಗೂ ನಗರ ಸ್ಥಳೀಯ ಸಂಸ್ಥೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಜಿ.ಜಗದೀಶ್ ಸೂಚನೆ ನೀಡಿದರು.

ಶನಿವಾರ ವಿಡಿಯೋ ಸಂವಾದದಲ್ಲಿ ಅಧಿಕಾರಿಗಳ ಜತೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕೋವಿಡ್ ನಿರ್ಬಂಧಗಳನ್ನು ಅಧಿಕಾರಿಗಳು ಹಾಗೂ ಪಂಚಾಯಿತಿಗಳ ಸಹಕಾರದಿಂದ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿದ ಫಲವಾಗಿ ಜಿಲ್ಲೆಯಲ್ಲಿ ಸೋಂಕು ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ.

ಸೋಂಕು ಇಳಿಮುಖವಾಗುತ್ತಿರುವುದರಿಂದ ‌ಸರ್ಕಾರ ಜಿಲ್ಲೆಯನ್ನು ಅನ್‌ಲಾಕ್ ಮಾಡಿದ್ದು, ಜೂನ್ 14ರಿಂದ ಪರಿಷ್ಕೃತ ಮಾರ್ಗಸೂಚಿಗಳು ಅನುಷ್ಠಾನಕ್ಕೆ ಬರಲಿವೆ. ಸರ್ಕಾರ ಸೂಚಿಸಿರುವ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದರ ಮೂಲಕ ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವಿಟಿ ದರವನ್ನು ಶೂನ್ಯಕ್ಕೆ ಇಳಿಸಬೇಕು ಎಂದು ಹೇಳಿದರು.

ಸೋಮವಾರ ಬೆಳಿಗ್ಗೆ 6 ಗಂಟೆಯಿಂದ ಎಲ್ಲ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಅನುಮತಿಸಲಾದ ಚಟುವಟಿಕೆಗಳನ್ನು ಹೊರತುಪಡಿಸಿ ಇತರ ಚಟುವಟಿಕೆಗಳಿಗೆ ಅವಕಾಶ ನೀಡಬಾರದು. ಖುದ್ದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಬೇಕು. ಮಾರ್ಗಸೂಚಿಯಲ್ಲಿ ಇಲ್ಲದ ಚಟುವಟಿಕೆಗಳು ನಡೆಯುತ್ತಿದ್ದರೆ ಅಂತಹ ಅಂಗಡಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು

ಜಿಲ್ಲೆಯಲ್ಲಿ ಯಾವುದೇ ಸಾರ್ವಜನಿಕ ಸಮಾರಂಭಗಳು, ಸನ್ಮಾನ ಕಾರ್ಯಕ್ರಮಗಳು ನಡೆಯದಂತೆ ಅಧಿಕಾರಿಗಳು ಎಚ್ಚರವಹಿಸಬೇಕು. ಕಾರ್ಯಕ್ರಮಗಳು ನಡೆದರೆ ಆಯೋಜಕರ ವಿರುದ್ಧ ಕ್ರಮ ಜರುಗಿಸಬೇಕು. ಅನ್‌ಲಾಕ್ ಅವಧಿಯಲ್ಲಿ ಮದುವೆಗಳಿಗೆ ಮಾತ್ರ ಅನುಮತಿ ನೀಡಿದ್ದು, ಇತರೆ ಯಾವುದೇ ಕಾರ್ಯಕ್ರಮಗಳನ್ನು ನಡೆಸುವಂತಿಲ್ಲ ಎಂದು ಜಿಲ್ಲಾಧಿಕಾರಿ‌ ಸ್ಪಷ್ಟಪಡಿಸಿದರು.

‌ಕಾರ್ಯಕ್ರಮದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಕುಂದಾಪುರ ಉಪ ವಿಭಾಗಾಧಿಕಾರಿ ರಾಜು, ಜಿಲ್ಲೆಯ ಎಲ್ಲ ತಹಶೀಲ್ದಾರ್‌ಗಳು, ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರು, ಕೋವಿಡ್ ನಿಯಂತ್ರಣಕ್ಕೆ ನಿಯೋಜಿಸಲಾದ ಫ್ಲೈಯಿಂಗ್ ಸ್ಕ್ವಾಡ್‌ಗಳು ಭಾಗವಹಿಸಿದ್ದರು.

ಸೋಮವಾರ ಜಿಲ್ಲೆ ಅನ್‌ಲಾಕ್‌

ಜೂನ್ 14ರ ಬೆಳಿಗ್ಗೆ 6ರಿಂದ ಜಿಲ್ಲೆಯಲ್ಲಿ ಕೆಲವು ನಿರ್ಬಂಧಗಳು ತೆರವಾಗಲಿವೆ. ಬೆಳಿಗ್ಗೆ 6ರಿಂದ 10ರವರೆರಗೆ ಇದ್ದ ಅಗತ್ಯ ವಸ್ತುಗಳ ಖರೀದಿ ಸಮಯವನ್ನು ಮಧ್ಯಾಹ್ನ 2ರವರೆಗೆ ವಿಸ್ತರಿಸಲಾಗಿದೆ. ಕೈಗಾರಿಕೆಗಳು ಶೇ 50ರಷ್ಟು ಕಾರ್ಮಿಕರೊಂದಿಗೆ ಕಾರ್ಯ ನಿರ್ವಹಿಸಬಹುದು. ಗಾರ್ಮೆಂಟ್ಸ್‌ಗಳಲ್ಲಿ ಶೇ 30 ಸಿಬ್ಬಂದಿ ಮಾತ್ರ ಕೆಲಸ ಮಾಡಬೇಕು.  ಸಿಮೆಂಟ್, ಕಬ್ಬಿಣ ಸೇರಿದಂತೆ ಅಗತ್ಯ ವಸ್ತುಗಳ ಮಾರಾಟ ಮಳಿಗೆಗಳು ತೆರೆಯಲು ಅನುಮತಿ ಇದೆ. ಬಾರ್ ಮತ್ತು ರೆಸ್ಟೋರೆಂಟ್‌ಗಳಲ್ಲಿ ಮದ್ಯ ಹಾಗೂ ಹೋಟೆಲ್‌ಗಳಲ್ಲಿ ಆಹಾರ ಪಾರ್ಸೆಲ್‌ಗೆ ಅನುಮತಿ ಇದೆ. ಉದ್ಯಾನಗಳನ್ನು ಬೆಳಿಗ್ಗೆ 5 ರಿಂದ 10ರವರೆಗೆ ತೆರೆಯಬಹುದು. ಟ್ಯಾಕ್ಸಿ ಮತ್ತು ಆಟೋದಲ್ಲಿ ಇಬ್ಬರು ಪ್ರಯಾಣಿಕರು ಮಾತ್ರ ಸಂಚರಿಸಬಹುದು. ಮದುವೆಯಲ್ಲಿ ಗರಿಷ್ಠ 40 ಮಂದಿ, ಶವಸಂಸ್ಕಾರದಲ್ಲಿ ಗರಿಷ್ಠ 5 ಮಂದಿ ಮಾತ್ರ ಭಾಗವಹಿಸಬಹುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು