ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಉಡುಪಿ | ಚಾಲ್ತಿಯಲ್ಲಿರುವ ಆಧಾರ್ ಕಾರ್ಡ್ ಅಗತ್ಯ: ಜಿಲ್ಲಾಧಿಕಾರಿ ವಿದ್ಯಾಕುಮಾರಿ

ಜಿಲ್ಲಾ ಮಟ್ಟದ ಆಧಾರ್ ಮೇಲ್ವಿಚಾರಣಾ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ಹೇಳಿಕೆ
Published : 30 ಆಗಸ್ಟ್ 2024, 4:48 IST
Last Updated : 30 ಆಗಸ್ಟ್ 2024, 4:48 IST
ಫಾಲೋ ಮಾಡಿ
Comments

ಉಡುಪಿ: ವ್ಯಕ್ತಿಯನ್ನು ಗುರುತಿಸಲು ಹಾಗೂ ಸರ್ಕಾರದ ವಿವಿಧ ಯೋಜನೆಗಳ ಪ್ರಯೋಜನ ಪಡೆಯಲು ಆಧಾರ್ ಕಾರ್ಡ್‌ ಕಡ್ಡಾಯವಾಗಿದ್ದು, ಜಿಲ್ಲೆಯ ಪ್ರತಿಯೊಬ್ಬರೂ ಚಾಲ್ತಿಯಲ್ಲಿರುವ ಆಧಾರ್ ಕಾರ್ಡ್‌ ಹೊಂದಿರಬೇಕು ಎಂದು ಜಿಲ್ಲಾಧಿಕಾರಿ ಕೆ. ವಿದ್ಯಾಕುಮಾರಿ ಹೇಳಿದರು.

ಮಣಿಪಾಲದ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಜಿಲ್ಲಾ ಮಟ್ಟದ ಆಧಾರ್ ಮೇಲ್ವಿಚಾರಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ದೇಶದ ಪ್ರತಿಯೊಬ್ಬ ಅರ್ಹ ನಾಗರಿಕರಿಗೆ ವಿಶಿಷ್ಟ ಗುರುತಿನ ಚೀಟಿಯನ್ನು ನೀಡಲಾಗುತ್ತದೆ. ಜಿಲ್ಲೆಯ ಎಲ್ಲಾ ವಯೋಮಾನದವರೂ ಚಾಲ್ತಿಯಲ್ಲಿರುವ ಆಧಾರ್ ಕಾರ್ಡ್ ಅನ್ನು ಹೊಂದಬೇಕು ಎಂದರು.

5 ವರ್ಷ ವಯಸ್ಸಿನೊಳಗಿನ ಮಕ್ಕಳು ಹೊಸದಾಗಿ ಆಧಾರ್ ಕಾರ್ಡ್ ನೋಂದಣಿಯನ್ನು ಸಮೀಪದ ಅಂಚೆ ಕಚೇರಿ, ತಾಲ್ಲೂಕು ಕಚೇರಿ ಅಥವಾ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾಡಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು.

ಜಿಲ್ಲೆಯಲ್ಲಿ ಈವರೆಗೆ 14,12,357 ಜನರು ಆಧಾರ್ ನೋಂದಣಿ ಮಾಡಿಕೊಂಡಿದ್ದಾರೆ. ಅವರಲ್ಲಿ 5 ವರ್ಷ ವಯಸ್ಸಿನೊಳಗಿನ 37,700, 5ರಿಂದ 18 ವರ್ಷದವರು 2,06,567 ಹಾಗೂ 18 ವರ್ಷ ಮೇಲ್ಪಟ್ಟ 11,73,090 ಜನರಿದ್ದಾರೆ ಎಂದರು.

10 ವರ್ಷಗಳ ಹಿಂದೆ ಆಧಾರ್ ನೋಂದಣಿ ಮಾಡಿಕೊಂಡ ಪ್ರತಿಯೊಬ್ಬರು ಗುರುತಿನ ಹಾಗೂ ವಿಳಾಸ ದಾಖಲೆಯನ್ನು ಸಮೀಪದ ಆಧಾರ್ ಕೇಂದ್ರದಲ್ಲಿ ಮರು ಅಪ್ಲೋಡ್ ಮಾಡಿ ನೋಂದಣಿ ಮಾಡಿಕೊಳ್ಳಬೇಕು. ಅದನ್ನು ಆನ್‌ಲೈನ್ ಮೂಲಕವಾಗಿ ನೇರವಾಗಿ ನವೀಕರಿಸಲು ಅವಕಾಶವಿದೆ. ನವೀಕರಿಸದೆ ಇದ್ದಲ್ಲಿ ಆಧಾರ್ ಕಾರ್ಡ್ ನಿಷ್ಕ್ರಿಯಗೊಳ್ಳುತ್ತದೆ ಎಂದು ತಿಳಿಸಿದರು.

15 ವರ್ಷದ ನಂತರ ಕಡ್ಡಾಯವಾಗಿ ಆಧಾರ್ ಬಯೋಮೆಟ್ರಿಕ್ ನವೀಕರಣ ಮಾಡಿಸಿಕೊಳ್ಳಬೇಕು. ಇದು ಕಡ್ಡಾಯವಾಗಿದೆ. ಜಿಲ್ಲೆಯಲ್ಲಿ  ವರ್ಷ ಮೇಲ್ಪಟ್ಟ 43,437 ಮಂದಿ, 15 ವರ್ಷ ಮೇಲ್ಪಟ್ಟ 44,481 ಮಂದಿ ಸೇರಿದಂತೆ ಒಟ್ಟು 87,918 ಮಂದಿ ಆಧಾರ್ ನವೀಕರಿಸಿಕೊಳ್ಳಬೇಕಿದೆ ಎಂದು ವಿವರಿಸಿದರು.

ರಾಜ್ಯ ಆಧಾರ್ ನೋಂದಣಿ ಪ್ರಾಧಿಕಾರವು ಜಿಲ್ಲೆಯ ಆಯ್ದ ಬ್ಯಾಂಕ್‌ಗಳು, ಅಂಚೆ ಕಚೇರಿಗಳಲ್ಲಿ ಆಧಾರ್ ನೋಂದಣಿ ಕೇಂದ್ರಗಳನ್ನು ತೆರೆಯಲು ಆದೇಶಿಸಿದ್ದು, ಅದರಂತೆ ಪ್ರತಿಯೊಂದು ಆಧಾರ್ ನೋಂದಣಿ ಕೇಂದ್ರವನ್ನು ಸೂಚಿಸಿದ ಕಚೇರಿ ಸಮಯದಲ್ಲಿ ತೆರೆದು ಸಾರ್ವಜನಿಕರಿಗೆ ಆಧಾರ್ ಸೇವೆ ಪಡೆಯಲು ಅನುವು ಮಾಡಿ ಕೊಡಬೇಕು ಎಂದರು.

ಆಧಾರ್ ಕಾರ್ಡ್ ಹೊಂದಿದವರು ಮರಣ ಹೊಂದಿದ್ದಲ್ಲಿ ಅವರ ಕಾನೂನುಬದ್ಧ ವಾರಸುದಾರರು ಅವರ ಮರಣ ಪ್ರಮಾಣ ಪತ್ರವನ್ನು ನೀಡಿ, ಆಧಾರ್ ಕಾರ್ಡ್ ಅನ್ನು ತಪ್ಪದೇ ರದ್ದುಪಡಿಸಬೇಕು. ರದ್ದುಪಡಿಸದೇ ಇದ್ದಲ್ಲಿ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಅದು ಉಪಯೋಗವಾಗುವ ಸಾಧ್ಯತೆಗಳಿದ್ದು, ಈ ರೀತಿ ಆದಲ್ಲಿ ಕಾನೂನುಬದ್ಧ ವಾರಸುದಾರರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.

ಸಭೆಯಲ್ಲಿ ಯು.ಐ.ಡಿ.ಎ.ಐ ನಿರ್ದೇಶಕ ಮನೋಜ್ ಕುಮಾರ್, ಯು.ಐ.ಡಿ.ಎ.ಐ ಅಸಿಸ್ಟೆಂಟ್ ಮ್ಯಾನೇಜರ್ ಮೊಹಮ್ಮದ್ ಮೂಸಾಬ್, ರಿಕೇಶ್, ಹೆಚ್ಚುವರಿ ಜಿಲ್ಲಾಧಿಕಾರಿ ಮಮತಾ ದೇವಿ ಜಿ.ಎಸ್, ಎಎಸ್‌ಪಿ ಸಿದ್ಧಲಿಂಗಪ್ಪ, ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ್ ಬಿ., ಡಿಡಿಪಿಯು ಗಣಪತಿ, ಡಿಡಿಪಿಐ ಮಾರುತಿ, ಐ.ಟಿ.ಡಿ.ಪಿ ಯೋಜನಾ ಸಮನ್ವಯಾಧಿಕಾರಿ ನಾರಾಯಣ ಸ್ವಾಮಿ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.

ಆಧಾರ್ ಕಾರ್ಡ್ ನವೀಕರಿಸುವ ಕುರಿತು ಜನರಲ್ಲಿ ಜಾಗೃತಿ ಮೂಡಿಸಬೇಕು. ಹೊಸದಾಗಿ ಆಧಾರ್ ಕಾರ್ಡ್ ಮಾಡಿಸಲು ವಿಶೇಷ ಶಿಬಿರಗಳನ್ನು ಶಾಲಾ-ಕಾಲೇಜು ಅಂಗನವಾಡಿಗಳಲ್ಲಿ ಏರ್ಪಡಿಸಬೇಕು
ಕೆ.ವಿದ್ಯಾಕುಮಾರಿ ಜಿಲ್ಲಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT