ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿ: ಬೆಡ್‌ಗಳಿವೆ, ಒಳರೋಗಿ ವಿಭಾಗ ಇಲ್ಲ

ಜಿಲ್ಲಾ ಆಯುಷ್‌ ಆಸ್ಪತ್ರೆಯಲ್ಲಿ ಆಯುರ್ವೇದ ಚಿಕಿತ್ಸೆಗೆ ಹೆಚ್ಚಿದ ಬೇಡಿಕೆ: ಮೂಲಸೌಕರ್ಯಗಳ ಕೊರತೆ
Last Updated 22 ಜುಲೈ 2022, 19:45 IST
ಅಕ್ಷರ ಗಾತ್ರ

ಉಡುಪಿ: ಕೋವಿಡ್‌–19 ಬಳಿಕ ಆಯುರ್ವೇದ ಉತ್ಪನ್ನಗಳ ಬಳಕೆ ಹೆಚ್ಚಾಗಿದೆ. ಅಲೋಪತಿ ಚಿಕಿತ್ಸೆಗೆ ಒಗ್ಗಿಕೊಂಡಿದ್ದವರು ನಿಧಾನವಾಗಿ ಆಯುರ್ವೇದ ಚಿಕಿತ್ಸೆಯತ್ತ ಹೊರಳುತ್ತಿದ್ದಾರೆ. ಜಿಲ್ಲಾ ಸರ್ಕಾರಿ ಆಯುಷ್ ಆಸ್ಪತ್ರೆಯಲ್ಲಿ ಆಯುರ್ವೇದ ಚಿಕಿತ್ಸೆ ಪಡೆಯಲು ಬರುವ ರೋಗಿಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ಆದರೆ, ಆಯುಷ್ ಆಸ್ಪತ್ರೆಯಲ್ಲಿ ಒಳರೋಗಿಚಿಕಿತ್ಸೆ ವ್ಯವಸ್ಥೆ ಇಲ್ಲದಿರುವುದುರೋಗಿಗಳಿಗೆನಿರಾಶೆಮೂಡಿಸಿದೆ.

2018ರಲ್ಲಿ ಆರಂಭವಾದ ಜಿಲ್ಲಾ ಆಯುಷ್ ಆಸ್ಪತ್ರೆಯಲ್ಲಿ ಆಯುರ್ವೇದ, ಹೋಮಿಯೋಪತಿ ಹಾಗೂ ಯುನಾನಿ ಸಹಿತ ಉಚಿತ ಪಂಚಕರ್ಮ ಚಿಕಿತ್ಸೆ, ಔಷಧಾಲಯ ಸೌಲಭ್ಯಗಳು ರೋಗಿಗಳಿಗೆ ಉಚಿತವಾಗಿ ಸಿಗುತ್ತಿವೆ. ಮೂರು ಹೊರರೋಗಿ ವಿಭಾಗಗಳಲ್ಲಿ ಪ್ರತಿದಿನ 30ಕ್ಕೂ ಹೆಚ್ಚು ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಒಳರೋಗಿ ವಿಭಾಗ ಆರಂಭಕ್ಕೆ ಬೇಡಿಕೆ ಇದ್ದರೂ ಸಿಬ್ಬಂದಿ ಸಮಸ್ಯೆ ಹಾಗೂ ಮೂಲಸೌಕರ್ಯಗಳ ಕೊರತೆಯಿಂದ ಆರಂಭವಾಗಿಲ್ಲ.

ಆಸ್ಪತ್ರೆಯಲ್ಲಿ ಒಳರೋಗಿ ವಿಭಾಗ ಆರಂಭಿಸಲು 10 ಬೆಡ್‌ಗಳು ಹಾಗೂ ಅಗತ್ಯ ಕೊಠಡಿಗಳ ವ್ಯವಸ್ಥೆ ಇದೆ. ಆದರೆ, ಮೂರು ಪಾಳಿಯಲ್ಲಿ ಕೆಲಸ ಮಾಡಲು ಅಗತ್ಯವಾಗಿ ಬೇಕಾದ ಶುಶ್ರೂಷಕರು, ದೋಬಿ ಕೆಲಸ ಮಾಡುವವರು, ಆಹಾರ ತಯಾರಿಕಾ ಸಿಬ್ಬಂದಿ, ಭದ್ರತಾ ಸಿಬ್ಬಂದಿ ಹಾಗೂ ಗ್ರೂಪ್ ಡಿ ನೌಕರರು ಇಲ್ಲ ಎನ್ನುತ್ತಾರೆ ಜಿಲ್ಲಾ ಆಯುಷ್ ಅಧಿಕಾರಿ ಡಾ.ಸತೀಶ್ ಆಚಾರ್ಯ.

ಒಳರೋಗಿ ವಿಭಾಗ ಆರಂಭಿಸುವಂತೆ ರೋಗಿಗಳ ಒತ್ತಡ ಇದ್ದರೂ ಸಿಬ್ಬಂದಿ ಕೊರತೆಯಿಂದ ಸಾದ್ಯವಾಗುತ್ತಿಲ್ಲ. ಸದ್ಯ ಒಪಿಡಿಯಲ್ಲಿಯೇ ರೋಗಿಗಳಿಗೆ ಒಳರೋಗಿ ವಿಭಾಗದಲ್ಲಿ ಸಿಗುತ್ತಿದ್ದ ಸೇವೆ ನೀಡಲು ಯತ್ನಿಸಲಾಗುತ್ತಿದೆ. ರೋಗಿಗಳು ಬೆಳಿಗ್ಗೆ ಬಂದು ಸಂಜೆಯವರೆಗೂ ದಾಖಲಾಗಿ ಚಿಕಿತ್ಸೆ ಪಡೆದು ಹೋಗುತ್ತಿದ್ದಾರೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ 14 ಆಯುರ್ವೇದ ಡಿಸ್ಪೆನ್ಸರಿ ಕೇಂದ್ರಗಳಿದ್ದು, ಬೆಳಪು ಹೊರತುಪಡಿಸಿ ಎಲ್ಲಡೆ ಕಾಯಂ ವೈದ್ಯರಿದ್ದಾರೆ. ಕರ್ಜೆ, ಕುರ್ಕಾಲು ಹಾಗೂ ಅಮಾಸೆಬೈಲಿನಲ್ಲಿ ಆಯುರ್ವೇದ ವೆಲ್‌ನೆಸ್‌ ಕೇಂದ್ರಗಳಿದ್ದು ಕಾಯಂ ವೈದ್ಯರು ಹಾಗೂ ಗುತ್ತಿಗೆ ಆಧಾರಿತ ಯೋಗ ತರಬೇತುದಾರರು ಹಾಗೂ ಸಿಬ್ಬಂದಿ ಇದ್ದಾರೆ.

ಕುಂದಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ತಾಲ್ಲೂಕು ಆಯುಷ್ ಘಟಕ ಇದೆ. ಕಾರ್ಕಳದಲ್ಲಿ ಘಟಕ ಆರಂಭಿಸಲು 55 ಸೆಂಟ್ಸ್‌ ಜಾಗ ಮಂಜೂರಾಗಿದ್ದು ಶೀಘ್ರ ಕಾಮಗಾರಿ ಆರಂಭವಾಗಲಿದೆ. ಕಾಪುವಿನ ಮಲ್ಲಾರಿನಲ್ಲಿ ಯುನಾನಿ ಚಿಕಿತ್ಸಾಲಯ ಆರಂಭಕ್ಕೆ ಸರ್ಕಾರಕ್ಕೆ ಪಸ್ತಾವ ಸಲ್ಲಿಸಲಾಗಿದೆ ಎಂದು ತಿಳಿಸಿದರು.

ಕೊರತೆಗಳ ನಡುವೆಯೂ ಜಿಲ್ಲಾ ಆಯುಷ್ ಆಸ್ಪತ್ರೆ ರೋಗಿಗಳಿಗೆ ಉತ್ತಮ ಸೇವೆ ನೀಡುತ್ತಿದೆ. ಮುನಿಯಾಲು ಆಯುರ್ವೇದ ಕಾಲೇಜಿನ ಬಿಎಎಂಎಸ್‌ ಕಲಿಕಾ ವೈದ್ಯರು ಇಂಟರ್ನ್‌ಶಿಪ್‌ ಮಾಡುವ ಜತೆಗೆ ಉತ್ತಮ ಚಿಕಿತ್ಸೆ ನೀಡುತ್ತಿದ್ದಾರೆ ಎಂದು ಡಾ.ಸತೀಶ್ ಆಚಾರ್ಯ ಮಾಹಿತಿ ನೀಡಿದರು.‌

ಶೀಘ್ರ ಒಳರೋಗಿ ವಿಭಾಗ ಆರಂಭ

ಆಯುರ್ವೇದ ಚಿಕಿತ್ಸೆಯ ಮಹತ್ವ ಹಾಗೂ ಜಾಗೃತಿ ಮೂಡುತ್ತಿರುವುದು ಸಂತಸದ ವಿಚಾರ. ಜಿಲ್ಲಾ ಆಯುಷ್ ಆಸ್ಪತ್ರೆಯಲ್ಲಿ ಒಳರೋಗಿ ಸೇವೆ ಆರಂಭಿಸುವಂತೆ ಹೆಚ್ಚಿನ ಬೇಡಿಕೆ ಇದ್ದು ಶೀಘ್ರ ಆರಂಭಕ್ಕೆ ಅಗತ್ಯ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗುವುದು. ಒಳರೋಗಿ ವಿಭಾಗ ಆರಂಭಿಸಿದರೆ ಆಸ್ಪತ್ರೆ 24 ಗಂಟೆ ಕಾರ್ಯ ನಿರ್ವಹಣೆಗೆ ಹೆಚ್ಚಿನ ಸಿಬ್ಬಂದಿಗಳು ಹಾಗೂ ವೈದ್ಯರು ಬೇಕಾಗುತ್ತದೆ. ಜನಪ್ರತಿನಿಧಿಗಳಿಗೆ ಹಾಗೂ ಜಿಲ್ಲಾಡಳಿತಕ್ಕೆ ಅಗತ್ಯ ನಿಧಿ ನೀಡುವಂತೆ ಮನವಿ ಮಾಡಲಾಗುವುದು ಎಂದು ಜಿಲ್ಲಾ ಆಯುಷ್ ಅಧಿಕಾರಿ ಡಾ.ಸತೀಶ್ ಆಚಾರ್ಯ ತಿಳಿಸಿದರು.‌

ಎಲ್ಲಿವೆ ಆಯುರ್ವೇದ ಡಿಸ್ಪೆನ್ಸರಿ

ಕುಂದಾಪುರ ತಾಲ್ಲೂಕಿನ ಕಾಳಾವರ, ಅಮಾಸೆಬೈಲು, ಗುಲ್ವಾಡಿ, ಕಾರ್ಕಳ ತಾಲ್ಲೂಕಿನ ಕೆರ್ವಾಶೆ, ಕಾಂತಾವರ, ಹೆಬ್ರಿ ತಾಲ್ಲೂಕಿನ ಸೋಮೇಶ್ವರ, ಕಾಪು ತಾಲ್ಲೂಕಿನ ಪಲಿಮಾರು, ಕುರ್ಕಾಲು, ಬೆಳಪು, ಬ್ರಹ್ಮಾವರ ತಾಲ್ಲೂಕಿನ ಕರ್ಜೆ, ಶಿರೂರು, ಬೈಂದೂರು ತಾಲ್ಲೂಕಿನ ಕಾಲ್ತೋಡು, ನಾವುಂದ, ಬೆಳ್ಳಾಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT