ಉಡುಪಿ: ಗರ್ಭ ಪೂರ್ವ ಹಾಗೂ ಪ್ರಸವ ಪೂರ್ವ ಭ್ರೂಣ ಲಿಂಗ ಪತ್ತೆ ಕಾನೂನಿನಡಿ ಅಪರಾಧವಾಗಿದ್ದು ಸಮಾಜದಲ್ಲಿ ಗಂಡು ಹಾಗೂ ಹೆಣ್ಣುಗಳ ನಡುವಿನ ಲಿಂಗಾನುಪಾತ ವ್ಯತ್ಯಾಸಕ್ಕೆ ಕಾರಣವಾಗಲಿದೆ ಎಂದು ಜಿಲ್ಲಾಧಿಕಾರಿ ಕೆ.ವಿದ್ಯಾಕುಮಾರಿ ಹೇಳಿದರು.
ಮಣಿಪಾಲದ ರಜತಾದ್ರಿಯ ಜಿಲ್ಲಾ ಪಂಚಾಯಿತಿಯ ಡಾ.ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆರೋಗ್ಯ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ಜಿಲ್ಲಾ ಪಿ.ಸಿ ಅಂಡ್ ಪಿ.ಎನ್.ಡಿ.ಟಿ ನೋಂದಾಯಿತ ಸಂಸ್ಥೆಗಳ ಮಾಲೀಕರು ಹಾಗೂ ವೈದ್ಯರಿಗೆ ಹಮ್ಮಿಕೊಂಡಿದ್ದ ಕಾರ್ಯಾಗಾರದಲ್ಲಿ ಮಾತನಾಡಿದರು.
ಹೆಣ್ಣು ಭ್ರೂಣ ಹತ್ಯೆಯಿಂದಾಗಿ ಹೆಣ್ಣು ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದ್ದು, ಸಾಮಾಜಿಕ ಅಸಮತೋಲನ ಉಂಟಾಗುತ್ತಿದೆ. ಹೆಣ್ಣು ಮಕ್ಕಳು ಹೊರೆ ಎಂದು ಭಾವಿಸದೆ ಹೆಣ್ಣು ಮತ್ತು ಗಂಡು ಮಕ್ಕಳನ್ನು ಸಮಾನವಾಗಿ ಕಾಣಬೇಕು. ಇದರಿಂದ ಲಿಂಗಾನುಪಾತದಲ್ಲಿ ಬದಲಾವಣೆ ತರಲು ಸಾಧ್ಯ ಎಂದು ಕಿವಿಮಾತು ಹೇಳಿದರು.
ಸ್ಕ್ಯಾನಿಂಗ್ ಸೆಂಟರ್‌ಗಳು ಅಧಿಕೃತವಾಗಿ ಪರವಾನಗಿ ಹೊಂದಿ ಅನುಮತಿ ಪಡೆದಿರಬೇಕು. ಭ್ರೂಣವನ್ನು ಪತ್ತೆಹಚ್ಚುವ ಕಾರ್ಯ ಶಿಕ್ಷಾರ್ಹ ಅಪರಾಧವಾಗಿದ್ದು ನಿಯಮಾನುಸಾರ ದಾಖಲಾತಿಗಳನ್ನು ಪ್ರತಿದಿನ ನಿರ್ವಹಣೆ ಮಾಡಬೇಕು ಎಂದರು.
ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ 1,000 ಗಂಡು ಮಕ್ಕಳಿಗೆ 967 ಹೆಣ್ಣು ಮಕ್ಕಳ ಲಿಂಗಾನುಪಾತ ಇದೆ. ಹೆಣ್ಣು ಭ್ರೂಣ ಹತ್ಯೆ ಮುಂದುವರಿದರೆ ಲಿಂಗಾನುಪಾತ ಏರುಪೇರಾಗುವ ಆತಂಕವಿದ್ದು ಸ್ಕ್ಯಾನಿಂಗ್ ಕೇಂದ್ರಗಳಲ್ಲಿ ಭ್ರೂಣದ ಲಿಂಗ ಬಯಲು ಮಾಡಬಾರದು. ನಿಯಮ ಉಲ್ಲಂಘಿಸಿದರೆ ಕಾನೂನಿನಡಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಹೆಣ್ಣು ಮಕ್ಕಳ ಅಕ್ರಮ ಮಾರಾಟದಂತಹ ಅಕ್ರಮ ಜಾಲದ ಬಗ್ಗೆ ಎಚ್ಚರಿಕೆ ಇರಬೇಕು, ಮಾರಾಟ ಜಾಲಕ್ಕೆ ಸಿಲುಕದಂತೆ ಹೆಣ್ಣು ಮಕ್ಕಳಿಗೆ ಅರಿವು ಮೂಡಿಸಬೇಕು ಎಂದರು.
ಹಿರಿಯ ಸಿವಿಲ್ ನ್ಯಾಯಾಧೀಶೆ ಎಸ್.ಶರ್ಮಿಳಾ ಮಾತನಾಡಿ, ಜಿಲ್ಲೆಯಲ್ಲಿ ಪೋಕ್ಸೊ ಪ್ರಕರಣಗಳು ಹೆಚ್ಚಾಗಿ ದಾಖಲಾಗುತ್ತಿರುವುದು ಆತಂಕಕಾರಿ ವಿಚಾರವಾಗಿದೆ. ಸ್ಕ್ಯಾನಿಂಗ್ ಸೆಂಟರ್‌ಗಳಿಗೆ ಗರ್ಭಿಣಿಯರು ಹಾಗೂ ಅಪ್ರಾಪ್ತರು ಬಂದರೆ ಸಿಬ್ಬಂದಿ ಪೊಲೀಸರಿಗೆ ಕಡ್ಡಾಯವಾಗಿ ಮಾಹಿತಿ ನೀಡಬೇಕು.
ವಲಸೆ ಕಾರ್ಮಿಕರ ಮಕ್ಕಳು ಹಾಗೂ ಇತರರು ಬಂದಲ್ಲಿ ಸಕ್ಷಮ ಪ್ರಾಧಿಕಾರದ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು. ಸ್ಕಾನಿಂಗ್ ಸೆಂಟರ್‌ಗಳಲ್ಲಿ ಗರ್ಭಿಣಿಯರು ಗರ್ಭದಲ್ಲಿರುವ ಮಗು ಹೆಣ್ಣು ಅಥವಾ ಗಂಡು ಎಂದು ತಪಾಸಣೆ ಮಾಡಿಸಿದರೆ ಕಾನೂನಿನಡಿ 3 ವರ್ಷಗಳ ಕಾರಾಗೃಹ ಶಿಕ್ಷೆ ಮತ್ತು ₹10,000 ದಂಡ ವಿಧಿಸಲಾಗುವುದು.
ಪುನರಾವರ್ತಿತ ಕೃತ್ಯ ಎಸಗಿದರೆ 5 ವರ್ಷಗಳ ಕಾರಾಗೃಹ ವಾಸ ಶಿಕ್ಷೆ ಹಾಗೂ ₹ 50,000ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ ಎಂದರು.
ಪಿ.ಸಿ ಅಂಡ್ ಪಿ.ಎನ್.ಡಿ.ಟಿ ಜಿಲ್ಲಾ ಸಲಹಾ ಸಮಿತಿ ಅಧ್ಯಕ್ಷ ಡಾ. ಪ್ರತಾಪ್ ಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಾಗಾರದಲ್ಲಿ ಹೆಣ್ಣು ಮಕ್ಕಳ ಪ್ರಾಮುಖ್ಯತೆ ಕುರಿತು ಕರಪತ್ರ ಬಿಡುಗಡೆಗೊಳಿಸಲಾಯಿತು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಾಗಭೂಷಣ್ ಉಡುಪ, ವೈದ್ಯಾಧಿಕಾರಿ ಡಾ.ಶಶಿಕಲಾ ಭಟ್, ನೋಂದಾಯಿತ ಸ್ಕ್ಯಾನಿಂಗ್ ಸೆಂಟರ್‌ಗಳ ಮಾಲೀಕರು ಸಭೆಯಲ್ಲಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.