ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲಾ ಆಸ್ಪತ್ರೆಯತ್ತ ಮುಖಮಾಡಿದ ರೋಗಿಗಳು; ಉತ್ತಮ ಆರೋಗ್ಯ ಸೇವೆಗೆ ಜನರ ಮೆಚ್ಚುಗೆ

ವರ್ಷದಿಂದ ವರ್ಷಕ್ಕೆ ರೋಗಿಗಳ ಸಂಖ್ಯೆ ಹೆಚ್ಚಳ
Last Updated 17 ಮೇ 2019, 19:47 IST
ಅಕ್ಷರ ಗಾತ್ರ

ಉಡುಪಿ: ಸರ್ಕಾರಿ ಆಸ್ಪತ್ರೆ ಎಂದರೆ ಮೂಗು ಮುರಿಯುವ ಮಂದಿಯೇ ಹೆಚ್ಚು.ವೈದ್ಯರ ಕೊರತೆ, ಅನೈರ್ಮಲ್ಯ, ಅವ್ಯವಸ್ಥೆ ಕಂಡು ಅತ್ತ ಮುಖಮಾಡುವವರ ಸಂಖ್ಯೆ ತೀರಾ ಕಡಿಮೆ. ಆದರೆ, ಅಜ್ಜರಕಾಡಿನಲ್ಲಿರುವ ಜಿಲ್ಲಾ ಆಸ್ಪತ್ರೆಯಲ್ಲಿ ಮಾತ್ರ ರೋಗಿಗಳು ಗಿಜಿಗುಡುತ್ತಾರೆ. ವರ್ಷದಿಂದ ವರ್ಷಕ್ಕೆ ಇಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ.

ಅಂಕಿ–ಅಂಶಗಳ ಪ್ರಕಾರ 2017ರಲ್ಲಿ ಜಿಲ್ಲಾ ಆಸ್ಪತ್ರೆಯಲ್ಲಿ 1.56 ಲಕ್ಷ ಹೊರ ರೋಗಿಗಳು ಚಿಕಿತ್ಸೆ ಪಡೆದಿದ್ದರೆ, 2018ರಲ್ಲಿ 2.12 ಲಕ್ಷ ರೋಗಿಗಳು ಚಿಕಿತ್ಸೆ ಪಡೆದಿದ್ದಾರೆ. 2019ರ ಅಂತ್ಯಕ್ಕೆ ರೋಗಿಗಳ ಸಂಖ್ಯೆ 2.50 ಲಕ್ಷ ದಾಟಲಿದೆ ಎನ್ನುತ್ತಾರೆ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಮಧುಸೂದನ್ ನಾಯಕ್‌.

ಪ್ರತಿವರ್ಷ ಒಳರೋಗಿಗಳ ಸಂಖ್ಯೆಯೂ ಮೂರು ಸಾವಿರದಷ್ಟು ಹೆಚ್ಚಾಗುತ್ತಿದೆ. ಇದರ ಜತೆಗೆ, ತುರ್ತು ಚಿಕಿತ್ಸೆ ಪಡೆಯುವವರು, ಹೆರಿಗೆ, ಡಯಾಲಿಸಿಸ್‌, ಸ್ಕ್ಯಾನಿಂಗ್, ಎಕ್ಸ್‌ರೇ ಮಾಡಿಸಿಕೊಳ್ಳಲು ಜಿಲ್ಲಾ ಆಸ್ಪತ್ರೆಗೆ ಬರುವ ರೋಗಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ ಎಂದು ಅಂಕಿ ಅಂಶಗಳ ಸಹಿತ ವಿವರಿಸಿದರು.

ಖಾಸಗಿ ಆಸ್ಪತ್ರೆಗಳಲ್ಲಿ ಸಿಗುವ ಬಹುತೇಕ ಆರೋಗ್ಯ ಸೇವೆಗಳು ಜಿಲ್ಲಾ ಆಸ್ಪತ್ರೆಯಲ್ಲಿ ಉಚಿತವಾಗಿ ದೊರೆಯುತ್ತಿರುವುದು ರೋಗಿಗಳ ಸಂಖ್ಯೆ ಹೆಚ್ಚಳಕ್ಕೆ ಕಾರಣ. ಜತೆಗೆ ಸರ್ಕಾರಿ ಆಸ್ಪತ್ರೆಯ ವೈದ್ಯರು ಚೆನ್ನಾಗಿ ಚಿಕಿತ್ಸೆ ನೀಡುತ್ತಾರೆ ಎಂಬ ಭಾವನೆ ಜನರಲ್ಲಿ ಮೂಡುತ್ತಿರುವುದು ರೋಗಿಗಳು ಹೆಚ್ಚಾಗಲು ಪ್ರಮುಖ ಕಾರಣ ಎನ್ನುತ್ತಾರೆ ಜಿಲ್ಲಾ ಸರ್ಜನ್‌.

ಆಯುಷ್ಮಾನ್ ಭಾರತ್ ಯೋಜನೆ ಜಾರಿಯಾದ ನಂತರ ಜಿಲ್ಲಾ ಆಸ್ಪತ್ರೆಗೆ ಬರುವವರ ಸಂಖ್ಯೆ ಮತ್ತಷ್ಟು ಹೆಚ್ಚಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗಳಿಗೆ ಶಿಫಾರಸು ಪತ್ರ ಪಡೆಯಲು ಬಂದವರು ಜಿಲ್ಲಾ ಆಸ್ಪತ್ರೆಯಲ್ಲೇ ತುರ್ತು ಚಿಕಿತ್ಸೆಗಳು ಸಿಗುತ್ತಿರುವುದನ್ನು ಕಂಡು ಇಲ್ಲಿಯೇ ದಾಖಲಾಗುತ್ತಿದ್ದಾರೆ ಎಂದು ಮಾಹಿತಿ ನೀಡಿದರು.

ಸಧ್ಯ ಆಸ್ಪತ್ರೆಯಲ್ಲಿ ಎಕ್ಸ್‌ರೇ, ಇಸಿಜಿ, ಸಿಟಿ ಸ್ಕ್ಯಾನ್‌, ಡಯಾಲಿಸಿಸ್‌ ಸೌಲಭ್ಯಗಳು ಲಭ್ಯವಿದೆ. ಎಪಿಎಲ್‌ ಕಾರ್ಡ್‌ದಾರರಿಗೆ ಸರ್ಕಾರ ನಿಗಧಿಪಡಿಸಿದ ಕನಿಷ್ಠ ಶುಲ್ಕ ಪಡೆಯುತ್ತೇವೆ. ಉಳಿದಂತೆ ಬಿಪಿಎಲ್‌ ಕಾರ್ಡ್‌ದಾರರಿಗೆ ಸಂಪೂರ್ಣ ಉಚಿತ ಎಂದು ತಿಳಿಸಿದರು.

ಜಿಲ್ಲಾ ಆಸ್ಪತ್ರೆಯಲ್ಲಿ ಬ್ಲಡ್ ಬ್ಯಾಂಕ್‌ ಮಾದರಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ತುರ್ತು ಅವಶ್ಯಕತೆಗಳಿಗೆ 24 ತಾಸು ರಕ್ತದ ನೆರವು ಸಿಗುತ್ತದೆ. ಎಂಆರ್‌ಐ ಸೌಲಭ್ಯ ಅನುಷ್ಠಾನ ಬಾಕಿ ಇದೆ. ಎಂಆರ್‌ಐ ಶುರುವಾದರೆ ಖಾಸಗಿ ಆಸ್ಪತ್ರೆಯಲ್ಲಿ ಸಿಗುವ ಎಲ್ಲ ಸೌಲಭ್ಯಗಳು ಜಿಲ್ಲಾ ಆಸ್ಪತ್ರೆಯಲ್ಲಿ ಸಿಕ್ಕಂತಾಗುತ್ತದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT