ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರ್ವ: ಲಾಕ್‌ಡೌನ್ ಪರಿಣಾಮದಿಂದ ಅಂಗಳದಲ್ಲೇ ಉಳಿದ ಮಟ್ಟುಗುಳ್ಳ

Last Updated 29 ಮಾರ್ಚ್ 2020, 19:45 IST
ಅಕ್ಷರ ಗಾತ್ರ

ಶಿರ್ವ: ಲಾಕ್‌ಡೌನ್ ಬಿಸಿಯು ಇಲ್ಲಿನ ವಿಶ್ವವಿಖ್ಯಾತ ಮಟ್ಟುಗುಳ್ಳಕ್ಕೂ ತಟ್ಟಿದೆ. ಮಾರುಕಟ್ಟೆಯಲ್ಲಿ ಬೇಡಿಕೆ ಇದ್ದರೂ, ಸಾಗಾಟ ಮಾಡಲಾಗದ ಪರಿಣಾಮ ಪ್ರತಿನಿತ್ಯ ಟನ್‌ಗಟ್ಟಲೆ ಮಟ್ಟುಗುಳ್ಳ ಇಲ್ಲಿನ ಬೆಳೆಗಾರರ ಸಂಘದ ಬಾಗಿಲಲ್ಲೇ ಉಳಿಯುತ್ತಿದೆ.

ಇಷ್ಟು ಮಾತ್ರವಲ್ಲ, ಖರೀದಿದಾರರ ಲಭ್ಯತೆ ಹಾಗೂ ಸಾಗಾಟಕ್ಕೆ ವಾಹನ ಸಿಗದ ಕಾರಣ ಕೆಲವು ದಿನಗಳಿಂದ ಮಟ್ಟುಗುಳ್ಳವು ಗದ್ದೆಯಲ್ಲೇ ಉಳಿಯುಂತಾಗಿದೆ.

ಪ್ರತಿನಿತ್ಯ ವಿವಿಧ ಮಾರುಕಟ್ಟೆಗಳಿಗೆ ಟನ್‍ಗಟ್ಟಲೆ ಮಟ್ಟುಗುಳ್ಳ ಸರಬರಾಜು ಮಾಡುತ್ತಿದ್ದ ಮಟ್ಟುಗುಳ್ಳ ಬೆಳೆಗಾರರ ಸಂಘವು ಈಗ ಬೆಳೆಗಾರರು ಬೆಳೆದ ಮಟ್ಟುಗುಳ್ಳವನ್ನು ಏನು ಮಾಡುವುದು? ಎಂಬ ಸಂಕಷ್ಟಕ್ಕೆ ಸಿಲುಕಿದೆ. ಇದರಿಂದ ಬೆಳೆಗಾರರು ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದು, ಸಂಬಂಧಪಟ್ಟ ಇಲಾಖೆಗಳು ನೆರವಿಗೆ ಧಾವಿಸಬೇಕು ಎಂದು ಆಗ್ರಹಿಸಿದ್ದಾರೆ.

ಉಡುಪಿ ಜಿಲ್ಲೆಯ ಕಟಪಾಡಿ ಸಮೀಪದ ಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಟ್ಟು ಮತ್ತು ಕೈಪುಂಜಾಲ್ ಪ್ರದೇಶಗಳು ಸೇರಿದಂತೆ ಸುಮಾರು 400 ಎಕರೆ ವ್ಯಾಪ್ತಿಯಲ್ಲಿ ಮಟ್ಟುಗುಳ್ಳವನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗುತ್ತಿದೆ.

‘ಸುಮಾರು ಒಂದು ಎಕರೆಗೆ ₹60ರಿಂದ ₹70 ಸಾವಿರ ಖರ್ಚು ಮಾಡಿ, ಬೆಳೆದಿದ್ದೇವೆ. ಅಕ್ಟೋಬರ್‌ನಲ್ಲಿ ನಾಟಿ ಮಾಡಿದ್ದು, ಜನವರಿಯ ಬಳಿಕ ಫಸಲು ಬರಲು ಶುರುವಾಗುತ್ತದೆ. ಈಗ ಉತ್ತಮ ಇಳುವರಿಯ ಅವಧಿಯಾಗಿದೆ. ಈಗಾಗಲೇ ನಮಗೆ ನಷ್ಟ ಉಂಟಾಗುತ್ತಿದೆ. ಇನ್ನೂ ಒಂದು ವಾರ ಖರೀದಿ ಮತ್ತು ಸಾಗಾಟ ನಡೆಯದಿದ್ದರೆ, ಗುಳ್ಳ ಬೆಳೆಗಾರರು ತೀವ್ರ ಸಂಕಷ್ಟಕ್ಕೆ ಸಿಲುಕುವ ಅಪಾಯ ಇದೆ’ ಎನ್ನುತ್ತಾರೆ ಹಿರಿಯ ಬೆಳೆಗಾರ ಚಿನ್ನಾ ಆರ್. ಅಂಚನ್.

‘ಈಗ ಉತ್ತಮ ಇಳುವರಿ ಬರುವ ಸಮಯವಾಗಿದ್ದು, ಮೇ ತನಕ ಮುಂದುವರಿಯುತ್ತದೆ. ಈ ಅವಧಿಯಲ್ಲಿ ನಷ್ಟವಾಗಿದ್ದು, ಜಿಲ್ಲಾಡಳಿತ ತುರ್ತಾಗಿ ವ್ಯವಸ್ಥೆ ಮಾಡಬೇಕು. ಸೂಕ್ತ ಪರಿಹಾರ ಕ್ರಮ ಕೈಗೊಳ್ಳಬೇಕು’ ಎಂದು ಬೆಳೆಗಾರರಾದ ಪಾಂಗಳದ ಸುಧಾಕರ ಅಮೀನ್ ಹಾಗೂ ಯಶೋಧರ ಮಟ್ಟು ಆಗ್ರಹಿಸಿದ್ದಾರೆ.

ಮಾರುಕಟ್ಟೆ ಸಮಸ್ಯೆಯಿಂದ ಬೆಲೆಯೂ ಪಾತಾಳಕ್ಕೆ ಕುಸಿದಿದೆ. ಸಾಮಾನ್ಯವಾಗಿ ಈ ಅವಧಿಯಲ್ಲಿ ಕೆ.ಜಿ.ಗೆ ₹25ರಿಂದ ₹50 ತನಕ ಬೇಡಿಕೆ ಇರುತ್ತಿತ್ತು. ಈಗ ಫಸಲು ಬಂದಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಸಂಘವೂ ನಷ್ಟ ಅನುಭವಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT