ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೆದ್ದವರು ? ಸೋತವರು ?, ಯಾರ ಹೆಸರಲ್ಲಿದೆ ದಾಖಲೆ

ಉಡುಪಿ ಲೋಕಸಭಾ ಕ್ಷೇತ್ರದ ಚುನಾವಣಾ ಚಿತ್ರಣ
Last Updated 25 ಏಪ್ರಿಲ್ 2019, 20:16 IST
ಅಕ್ಷರ ಗಾತ್ರ

ಉಡುಪಿ: ಉಡುಪಿ ಲೋಕಸಭಾ ಕ್ಷೇತ್ರಕ್ಕೆ ಇದುವರೆಗೂ 14 ಸಾರ್ವತ್ರಿಕ ಚುನಾವಣೆಗಳು ನಡೆದಿವೆ. ಕ್ಷೇತ್ರ ಪುನರ್‌ವಿಂಗಡಣೆ ಬಳಿಕ ರಚನೆಯಾದ ಉಡುಪಿ–ಚಿಕ್ಕಮಗಳೂರು ಕ್ಷೇತ್ರಕ್ಕೆ 2 ಚುನಾವಣೆ ಹಾಗೂ ಒಂದು ಬಾರಿ ಉಪ ಚುನಾವಣೆ ನಡೆದಿದೆ. ಈ ಅವಧಿಯಲ್ಲಿ ಹಲವರ ಹೆಸರಿನಲ್ಲಿ ದಾಖಲೆಗಳು ನಿರ್ಮಾಣವಾಗಿವೆ.

ಹೆಚ್ಚು ಅಂತರದ ಮತಗಳ ಗೆಲುವು:

ಉಡುಪಿ ಲೋಕಸಭಾ ಕ್ಷೇತ್ರದಲ್ಲಿ ಚಲಾವಣೆಯಾದ ಮತಗಳ ಪೈಕಿ ಅತಿ ಹೆಚ್ಚು ಮತಗಳ ಅಂತರದ ಗೆಲುವು ಪಡೆದಿರುವುದು ಪಿ.ರಂಗನಾಥ್‌ ಶೆಣೈ. 1971ರ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ರಂಗನಾಥ್ ಶೆಣೈ, ಸ್ವರಾಜ್ ಪಕ್ಷದ ಜೆ.ಎಂ.ಲೋಬೊ ಪ್ರಭು ಅವರನ್ನು ಭಾರಿ ಮತಗಳ ಅಂತರದಿಂದ ಮಣಿಸಿದ್ದರು.

ಚಲಾವಣೆಯಾದ ಒಟ್ಟು ಮತಗಳ ಸಂಖ್ಯೆ 2,77,198. ಈ ಪೈಕಿ ಶೆಣೈ 1,82,409 (ಶೇ 65.80) ಮತ ಪಡೆದರೆ, ಎದುರಾಳಿ ಲೊಬೊ ಅವರಿಗೆ 54,644 (ಶೇ19.71) ಮತ ಮಾತ್ರ ಬಿದ್ದಿದ್ದವು.

ಅತಿ ಕಡಿಮೆ ಅಂತರದ ಸೋಲು:

1996ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಆಸ್ಕರ್ ಫರ್ನಾಂಡಿಸ್ ವಿರುದ್ಧ ಬಿಜೆಪಿಯ ಐ.ಎಂ.ಜಯರಾಮ ಶೆಟ್ಟಿ ಕೇವಲ 2,454 ಮತಗಳ ಅಂತರದಿಂದ ಪರಾಭವಗೊಂಡಿದ್ದರು. ಆಸ್ಕರ್2,35,932 ಮತಗಳನ್ನು ಪಡೆದರೆ, ಜಯರಾಮ ಶೆಟ್ಟಿ 2,33,478 ವೋಟ್‌ ಗಳಿಸಿದ್ದರು. ಇದು ಕ್ಷೇತ್ರದ ಅತಿ ಕಡಿಮೆ ಅಂತರದ ಗೆಲುವು.

ಅತಿ ಕಡಿಮೆ ಮತ ಪಡೆದ ಅಭ್ಯರ್ಥಿ:

ಕ್ಷೇತ್ರದ ಇತಿಹಾಸದಲ್ಲಿ ಅತಿ ಕಡಿಮೆ ಮತಗಳನ್ನು ಪಡೆದ ದಾಖಲೆ ಪಕ್ಷೇತ್ತರ ಅಭ್ಯರ್ಥಿ ಅಬ್ದುಲ್ ರಜಾಕ್‌ ಹೆಸರಿನಲ್ಲಿದೆ. 1996ರ ಚುನಾವಣೆಯಲ್ಲಿ ರಜಾಕ್ ಕೇವಲ 486 ಮತಗಳನ್ನು ಪಡೆದಿದ್ದರು.

ಅತಿ ಹೆಚ್ಚು, ಕಡಿಮೆ ಸ್ಪರ್ಧಿಗಳು:

1996ರ ಚುನಾವಣೆಯಲ್ಲಿ ಅತಿ ಹೆಚ್ಚು ಅಂದರೆ 13 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಇದಕ್ಕೆ ವಿರುದ್ಧವಾಗಿ 1957ರ ಚುನಾವಣೆಯಲ್ಲಿ ಅತಿಕಡಿಮೆ ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಅಂದು ಕಣದಲ್ಲಿದ್ದದ್ದು ಕಾಂಗ್ರೆಸ್‌ನ ಶ್ರೀನಿವಾಸ ಮಲ್ಯ ಹಾಗೂ ಪಿಎಸ್‌ಪಿಯ ಮೋಹನ್‌ ರಾವ್ ಮಾತ್ರ. ಗೆದ್ದಿದ್ದು ಶ್ರೀನಿವಾಸ ಮಲ್ಯ.

ಅತಿ ಹೆಚ್ಚು ಬಾರಿ ಗೆದ್ದವರು:

ಉಡುಪಿ ಲೋಕಸಭಾ ಕ್ಷೇತ್ರದಿಂದ ಅತಿಹೆಚ್ಚು ಬಾರಿ ಗೆದ್ದ ದಾಖಲೆ ಆಸ್ಕರ್ ಫರ್ನಾಂಡಿಸ್ ಅವರ ಹೆಸರಿನಲ್ಲಿದೆ. 1980ರಿಂದ 1996 ರವರೆಗೆ ಸತತ ಐದು ಬಾರಿ ಆಸ್ಕರ್ ಗೆದ್ದಿದ್ದಾರೆ. ಅವರ ನಂತರದ ದಾಖಲೆ ಶ್ರೀನಿವಾಸ ಮಲ್ಯ ಅವರ ಹೆಸರಿನಲ್ಲಿದೆ. 1951, 57 ಹಾಗೂ 62ರ ಚುನಾವಣೆಯಲ್ಲಿ ಸತತವಾಗಿ ಗೆಲುವು ಸಾಧಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT