ಉಡುಪಿ: ನಗರದ ಪ್ರವಾಸಿ ಮಂದಿರದ (ಐಬಿ) ವಿದ್ಯುತ್ ಬಿಲ್ ಪಾವತಿಸದ ಕಾರಣ ಮೆಸ್ಕಾಂನವರು ಶನಿವಾರ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದು, ಭಾನುವಾರ ಮರು ಸಂಪರ್ಕ ನೀಡಿದ್ದಾರೆ.
ಪ್ರವಾಸಿ ಮಂದಿರದ ಅಂದಾಜು ₹3ಲಕ್ಷದಷ್ಟು ವಿದ್ಯುತ್ ಬಿಲ್ ಬಾಕಿ ಇತ್ತು ಈ ಕಾರಣಕ್ಕೆ ಸಂಪರ್ಕ ಕಡಿತಗೊಳಿಸಲಾಗಿತ್ತು. ಭಾನುವಾರ ಮತ್ತೆ ಸಂಪರ್ಕ ನೀಡಲಾಗಿದೆ ಎಂದು ಮೆಸ್ಕಾಂನ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್ ಗಣರಾಜ್ ಭಟ್ ತಿಳಿಸಿದ್ದಾರೆ.
ಪ್ರವಾಸಿ ಮಂದಿರದ ವಿದ್ಯುತ್ ಸಂಪರ್ಕ ಕಡಿತಗೊಳಿಸಿರುವ ಕುರಿತು ಟ್ವೀಟ್ ಮಾಡಿರುವ ಶಾಸಕ ಯಶ್‌ಪಾಲ್ ಸುವರ್ಣ, ಸರ್ಕಾರಿ ಕಚೇರಿಯ ವಿದ್ಯುತ್ ಬಿಲ್ ಕಟ್ಟಲೂ ಸರ್ಕಾರದ ಬೊಕ್ಕಸದಲ್ಲಿ ಹಣವಿಲ್ಲ. ರಾಜ್ಯ ಸರ್ಕಾರದ ಆರ್ಥಿಕ ದಿವಾಳಿತನಕ್ಕೆ ಇದಕ್ಕಿಂತ ಸ್ಪಷ್ಟ ನಿದರ್ಶನ ಬೇಕಿಲ್ಲ ಎಂದಿದ್ದಾರೆ.