ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಉಡುಪಿ |ವಿಘ್ನನಿವಾರಕನ ಉತ್ಸವಕ್ಕೆ ಭರದ ಸಿದ್ಧತೆ: ಕಬ್ಬು, ಹೂವು ಖರೀದಿ ಜೋರು

Published 6 ಸೆಪ್ಟೆಂಬರ್ 2024, 3:13 IST
Last Updated 6 ಸೆಪ್ಟೆಂಬರ್ 2024, 3:13 IST
ಅಕ್ಷರ ಗಾತ್ರ

ಉಡುಪಿ: ಗಣೇಶೋತ್ಸವ ಆಚರಣೆಗೆ ನಗರದೆಲ್ಲೆಡೆ ಭರದ ಸಿದ್ಧತೆ ನಡೆಯುತ್ತಿದ್ದು, ಪೆಂಡಾಲ್‌ ನಿರ್ಮಿಸುವ ಮತ್ತು ಅದರ ಅಲಂಕಾರ ಕೆಲಸಗಳು ಬಿಡುವಿಲ್ಲದೆ ನಡೆಯುತ್ತಿದೆ.

ನಗರದಲ್ಲಿ ಹೆಚ್ಚಾಗಿ ಗಣೇಶೋತ್ಸವ ದಿನದಂದೇ ಪೆಂಡಾಲ್‌ನಲ್ಲಿ ದೇವರ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುತ್ತದೆ. ಇದೇ 6ರಂದು ಸ್ವರ್ಣ ಗೌರಿ ಹಬ್ಬವಾಗಿದ್ದು, ಉಡುಪಿ ಜಿಲ್ಲೆಯಲ್ಲಿ ಈ ಹಬ್ಬವನ್ನು ಆಚರಿಸುವವರು ವಿರಳ. ಈ ಭಾಗದಲ್ಲಿ ಗಣೇಶೋತ್ಸವಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುತ್ತದೆ.

ನಗರದಲ್ಲಿ ಅಂಬಲಪಾಡಿ, ಕಡಿಯಾಳಿ, ಅಲೆವೂರು ಸೇರಿದಂತೆ ಹಲವೆಡೆ ಪ್ರತಿವರ್ಷವೂ ವಿಜೃಂಭಣೆಯಿಂದ ಗಣೇಶೋತ್ಸವ ಆಚರಿಸಲಾಗುತ್ತಿದೆ. ಗಣೇಶೋತ್ಸವದ ಅಂಗವಾಗಿ ಈಗಾಗಲೇ ಸಾರ್ವಜನಿಕರಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.

ಗಣೇಶೋತ್ಸವ ದಿನದಂದು ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳಲಾಗುತ್ತಿದ್ದು, ಅದಕ್ಕಾಗಿ ವೇದಿಕೆಗಳ ನಿರ್ಮಾಣ ಕಾರ್ಯವೂ ನಡೆಯುತ್ತಿದೆ.

ಪರಿಸರಸ್ನೇಹಿ ಮೂರ್ತಿಗಳನ್ನು ಪ್ರತಿಷ್ಠಾಪಿಸಲು ಮತ್ತು ರಾಸಾಯನಿಕ ಬಣ್ಣಗಳನ್ನು ಬಳಸದಿರಲು ಅಧಿಕಾರಿಗಳು ಈಗಾಗಲೇ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಮೂರ್ತಿಯನ್ನು ವಿಸರ್ಜಿಸುವಾಗ ಅದರ ಜೊತೆಗೆ ಹೂವಿನ ಮಾಲೆಗಳನ್ನು, ಪ್ಲಾಸ್ಟಿಕ್‌ ಅಲಂಕಾರದ ವಸ್ತುಗಳನ್ನೂ ನೀರಿಗೆ ಹಾಕುವುದರಿಂದ ನೀರು ಕಲುಷಿತಗೊಳ್ಳುವುದರಿಂದ ಆ ಕುರಿತೂ ಎಚ್ಚರಿಕೆ ವಹಿಸುವಂತೆ ಗಣೇಶೋತ್ಸವ ಸಮಿತಿಯವರಲ್ಲಿ ಜಾಗೃತಿ ಮೂಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹೂವು ಹಣ್ಣು ಮಾರಾಟ ಜೋರು: ಪ್ರತಿ ಹಬ್ಬಗಳ ಸಂದರ್ಭಗಳಲ್ಲೂ ಹಾಸನ ಸೇರಿದಂತೆ ಹೊರ ಜಿಲ್ಲೆಯ ಹೂವು ಮಾರಾಟಗಾರರು ನಗರಕ್ಕೆ ಬರುತ್ತಾರೆ. ಈ ಬಾರಿ ಗುರುವಾರವೇ ಹೂವಿನ ಮಾರಾಟ ಜೋರಾಗಿತ್ತು.

ಇವರ ಬಳಿಯಿಂದ ಚೆಂಡು ಹೂವು, ಗುಲಾಬಿ, ಸೇವಂತಿಗೆ ಹೂವುಗಳನ್ನು ಜನರು ಖರೀದಿಸಿದರು. ಗಣೇಶೋತ್ಸವದ ಸಂದರ್ಭದಲ್ಲಿ ಕಬ್ಬನ್ನು ಹೆಚ್ಚಾಗಿ ಬಳಸಲಾಗುತ್ತದೆ. ಈ ಬಾರಿ ಮಂಡ್ಯದಿಂದ ಕಬ್ಬಿನ ವ್ಯಾಪಾರಿಗಳು ನಗರಕ್ಕೆ ಬಂದು ಮಾರಾಟ ನಡೆಸುತ್ತಿದ್ದಾರೆ.

ನಗರದಲ್ಲಿ ಗುರುವಾರ ಹೂವಿನ ಮಾರಾಟ ನಡೆಯಿತು
ನಗರದಲ್ಲಿ ಗುರುವಾರ ಹೂವಿನ ಮಾರಾಟ ನಡೆಯಿತು

‌ಕಳೆದ ವರ್ಷ ಒಂದು ಕಬ್ಬಿನ ದರ ₹40ರಿಂದ ₹50 ಇತ್ತು. ಈ ಬಾರಿ ಒಂದು ಕಬ್ಬಿಗೆ ₹60 ಆಗಿದೆ. ದರ ಏರಿಕೆಯಾದರೂ ಕೊಂಡುಕೊಳ್ಳುವ ಅನಿವಾರ್ಯತೆ ಇದೆ. ಅದೇ ರೀತಿ ಒಂದು ಕೆ.ಜಿ. ಏಲಕ್ಕಿ ಬಾಳೆಹಣ್ಣಿನ ದರ ಕೆ.ಜಿ.ಗೆ ₹80 ಆಗಿದೆ ಎನ್ನುತ್ತಾರೆ ಗ್ರಾಹಕ ವೆಂಕಟರಮಣ ಭಟ್‌.

ಗಣೇಶ ಪೆಂಡಲ್‌ನ ಅಲಂಕಾರಕ್ಕೆ ಅಂತಿಮ ಸ್ಪರ್ಶ ನೀಡುತ್ತಿರುವ ಯುವಕರು
ಗಣೇಶ ಪೆಂಡಲ್‌ನ ಅಲಂಕಾರಕ್ಕೆ ಅಂತಿಮ ಸ್ಪರ್ಶ ನೀಡುತ್ತಿರುವ ಯುವಕರು

‘ಪರಿಸರಸ್ನೇಹಿ ಹಬ್ಬ ಆಚರಣೆಗೆ ಕ್ರಮ’

ಪರಿಸರ ಸ್ನೇಹಿ ಗಣೇಶೋತ್ಸವ ಆಚರಿಸುವಂತೆ ಗಣೇಶೋತ್ಸವ ಸಮಿತಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗದೆ. ನಾಗರ ಪಂಚಮಿಯ ಸಂದರ್ಭದಲ್ಲಿ ಕಸದ ಡಬ್ಬಿಗಳನ್ನಿಟ್ಟಂತೆ ಗಣೇಶೋತ್ಸವ ಪೆಂಡಲ್‌ಗಳ ಬಳಿಯೂ ಕಸದ ಡಬ್ಬಿಗಳನ್ನು ಇರಿಸಲಾಗುವುದು ಎಂದು ನಗರಸಭೆಯ ಪೌರಾಯುಕ್ತ ರಾಯಪ್ಪ ತಿಳಿಸಿದರು.

ಪ್ರತಿ ಗಣೇಶೋತ್ಸವ ಸಮಿತಿಯವರಿಗೆ ನಗರಸಭೆಯ ವತಿಯಿಂದ ಇನ್ನೂರರಷ್ಟು ಬಟ್ಟೆಯ ಚೀಲಗಳನ್ನು ವಿತರಿಸಲಿದ್ದೇವೆ. ದೇವರ ಪ್ರಸಾದವನ್ನು ಪ್ಲಾಸ್ಟಿಕ್‌ ಚೀಲದಲ್ಲಿ ನೀಡದಿರಲು ಈ ಕ್ರಮ ವಹಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಮನೆಗಳಲ್ಲಿ ಗಣೇಶನ ಮೂರ್ತಿ ಇರಿಸುವವರು ಅದನ್ನು ಬಕೆಟ್‌ಗಳಲ್ಲೇ ವಿಸರ್ಜಿಸಲು ಸೂಚಿಸಲಾಗಿದೆ. ದೊಡ್ಡ ಗಣೇಶನ ಮೂರ್ತಿಗಳನ್ನು ಜನರು ಬಳಕೆ ಮಾಡದ ಕೆರೆಗಳಲ್ಲಿ ವಿಸರ್ಜಸಲು ತಿಳಿಸಲಾಗಿದೆ ಎಂದೂ ಅವರು ಹೇಳಿದ್ದಾರೆ.

ಗಮನ ಸೆಳೆಯುವ ಅಲಂಕಾರ

ಅಲೆವೂರು ಗುಡ್ಡೆಯಂಗಡಿಯ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಪೆಂಡಲ್‌ನ ಈ ಬಾರಿಯ ಅಲಂಕಾರ ಗಮನ ಸೆಳೆಯುತ್ತಿದೆ. ಸಭಾಂಗಣದ ಮೇಲ್ಚಾವಣಿಯಲ್ಲಿ ಬಣ್ಣದ ಕಾಗದಗಳಿಂದ ಬೃಹತ್‌ ಹೂವಿನ ಆಕೃತಿಯನ್ನು ಮೂಡಿಸಲಾಗುತ್ತಿದೆ. ಸ್ಥಳೀಯ ಯುವಕರು ಈ ಕೈಂಕರ್ಯದಲ್ಲಿ ತೊಡಗಿಕೊಂಡಿದ್ದು. ನಾಲ್ಕೈದು ದಿವಸಗಳಿಂದ ಈ ಕೆಲಸ ಮಾಡುತ್ತಿದ್ದಾರೆ. ಅಲಂಕಾರವು ಅಂತಿಮ ಹಂತಕ್ಕೆ ತಲುಪಿದೆ ಎಂದು ಸಮಿತಿಯವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT