ಉಡುಪಿ: ಸಂಜೀವಿನಿ ಸ್ವಸಹಾಯ ಸಂಘದ ಮಹಿಳೆಯರು ತಯಾರಿಸಿರುವ ‘ಹೆಬ್ರಿ ಹನಿ’ಗೆ ಗ್ರಾಹಕರಿಂದ ನಿರೀಕ್ಷೆಗೂ ಮೀರಿದ ಸ್ಪಂದನ ವ್ಯಕ್ತವಾಗಿದೆ. ಶುಚಿ, ರುಚಿ ಹಾಗೂ ಗುಣಮಟ್ಟದ ಕಾರಣದಿಂದ ಮಾರುಕಟ್ಟೆಗೆ ಬಿಡುಗಡೆಯಾದ ಎರಡೇ ದಿನದಲ್ಲಿ ‘ಹೆಬ್ರಿ ಹನಿ’ ಗ್ರಾಹಕರಿಗೆ ‘ಸಿಹಿ’ಯ ಅನುಭವ ನೀಡಿದೆ.
ಹೆಬ್ರಿ ತಾಲ್ಲೂಕಿನಲ್ಲಿ ಸಂಜೀವಿನಿ ಸ್ವಸಹಾಯ ಸಂಘದಡಿಯಲ್ಲಿ ಕಲ್ಪವೃಕ್ಷ ಸಂಘವನ್ನು ರಚಿಸಿಕೊಂಡಿರುವ 12 ಮಹಿಳೆಯರ ತಂಡ ‘ಹೆಬ್ರಿ ಹನಿ’ ಸಂಸ್ಥೆಯನ್ನು ಹುಟ್ಟುಹಾಕಿದ್ದು, ಮಲೆನಾಡಿನ ತಪ್ಪಲಿನಲ್ಲಿ ನೈಸರ್ಗಿಕವಾಗಿ ದೊರೆಯುವ ಜೇನನ್ನು ಸಂಗ್ರಹಿಸಿ ಗ್ರಾಹಕರಿಗೆ ತಲುಪಿಸುತ್ತಿದೆ.
ಸದ್ಯ ಉಡುಪಿಯ ತಾಲ್ಲೂಕು ಪಂಚಾಯಿತಿ ಕಚೇರಿಯ ಸಂಜೀವಿನಿ ಸೂಪರ್ ಮಾರ್ಕೆಟ್‌ನಲ್ಲಿ ಮಾತ್ರ ‘ಹೆಬ್ರಿ ಹನಿ’ ಲಭ್ಯವಿದ್ದು, ಮುಂದೆ ಪ್ರಮುಖ ಮಳಿಗೆಗಳಲ್ಲಿ ಗ್ರಾಹಕರಿಗೆ ದೊರೆಯುವಂತೆ ಮಾಡುವ ಗುರಿ ಇದೆ ಎನ್ನುತ್ತಾರೆ ಸಂಸ್ಥೆಯ ಮಹಿಳೆಯರು.
ಉಡುಪಿ ಜಿಲ್ಲೆಯಲ್ಲಿ ಜೇನು ಕೃಷಿ ಮಾಡಲು ಪೂರಕ ವಾತಾವರಣವಿದ್ದ ಹಿನ್ನೆಲೆಯಲ್ಲಿ ಸಂಜೀವಿನಿ ಸಂಘಗಳ ಮೂಲಕ ಜೇನು ಕೃಷಿ ಮಾಡಲು ಯೋಜಿಸಲಾಯಿತು. ಅದರಲ್ಲೂ ಸಹ್ಯಾದ್ರಿ ತಪ್ಪಲಿನಲ್ಲಿರುವ, ಹೇರಳವಾಗಿ ಔಷಧೀಯ ಗುಣಗಳನ್ನು ಹೊಂದಿರುವ ಸಸ್ಯಗಳು ಇರುವ ಹೆಬ್ರಿ ತಾಲ್ಲೂಕು ಜೇನು ಕೃಷಿಗೆ ಅತ್ಯಂತ ಪ್ರಶಸ್ತವಾಗಿರುವುದನ್ನು ಮನಗಂಡು ಇಲ್ಲಿಯೇ ಜೇನುಕೃಷಿ ಮಾಡಲು ಜಿಲ್ಲಾ ಪಂಚಾಯಿತಿ ತೀರ್ಮಾನಿಸಲಾಯಿತು.
ಹೆಬ್ರಿಯಲ್ಲಿರುವ ಸಂಜೀವಿನಿ ಸಂಘಗಳ ಮಹಿಳೆಯರಿಗೆ ಬ್ರಹ್ಮಾವರದ ರುಡ್‌ಸೆಟ್‌ನಿಂದ ಜೇನು ಸಾಕಣಿಕೆ ತರಬೇತಿ ಕೊಡಿಸಿ, ತರಬೇತಿ ಪೂರ್ಣಗೊಳಿಸಿದ ಮಹಿಳೆಯರಿಗೆ ಜಿಲ್ಲಾ ಪಂಚಾಯಿತಿಯಿಂದ ಜೇನುಪೆಟ್ಟಿಗೆಗಳನ್ನು ವಿತರಿಸಲಾಯಿತು.
ಸದ್ಯ ಮಹಿಳೆಯರು ಮನೆಯ ಪರಿಸರದಲ್ಲಿ ಜೇನು ಪೆಟ್ಟಿಗೆಗಳನ್ನು ಇಟ್ಟು ಜೇನು ತೆಗೆಯುತ್ತಿದ್ದು ಲಭ್ಯವಾದ ಜೇನನ್ನು ಸಂಸ್ಕರಿಸಿ ಬಾಟಲಿಗಳಿಗೆ ತುಂಬಿಸಿ ಉಡುಪಿಯ ಸಂಜೀವಿನಿ ಸೂಪರ್ ಮಾರ್ಕೆಟ್‌ನಲ್ಲಿ ಮಾರಾಟಕ್ಕಿಡಲಾಗುತ್ತಿದೆ ಎಂದು ‘ಹೆಬ್ರಿ ಹನಿ’ ಹುಟ್ಟಿಕೊಂಡ ಬಗೆಯನ್ನು ವಿವರಿಸಿದರು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಚ್.ಪ್ರಸನ್ನ.
ಆರಂಭಿಕ ಹಂತದಲ್ಲಿ ಉತ್ಪಾದನೆಯಾಗುತ್ತಿರುವ ಜೇನನ್ನು ಸಂಸ್ಕರಿಸುವುದು, ಪ್ಯಾಕೇಜಿಂಗ್, ಲೇಬಲಿಂಗ್ ಮಾಡಿ ಮಾರುಕಟ್ಟೆಗೆ ಬಿಟ್ಟು ಮಾರಾಟ ಮಾಡುವ ಜವಾಬ್ದಾರಿಯನ್ನು ಹೆಬ್ರಿಯ ಸ್ಥಳೀಯ ಜಿಪಿಎಲ್‌ಎಸ್ ಸಂಸ್ಥೆಗೆ ವಹಿಸಲಾಗಿದೆ. ಈ ಸಂಸ್ಥೆಯು ಮಾರುಕಟ್ಟೆಯ ದರದಲ್ಲಿ ಸಂಜೀವಿನಿ ಸಂಘದ ಮಹಿಳೆಯರಿಂದ ಜೇನು ತುಪ್ಪ ಖರೀದಿಸಿ ಗ್ರಾಹಕರಿಗೆ ಮಾರಾಟ ಮಾಡುತ್ತದೆ. ಈ ಪ್ರಕ್ರಿಯೆಯಲ್ಲಿ ಗರಿಷ್ಠ ಲಾಭ ಸಂಜೀವಿನಿ ಸಂಘದ ಮಹಿಳೆಯರಿಗೆ ಸಿಗುತ್ತಿದೆ ಎಂದು ಪ್ರಸನ್ನ ತಿಳಿಸಿದರು.
ಹೆಬ್ರಿ ಹನಿಗೆ ಆಹಾರ ಸುರಕ್ಷತಾ ಪ್ರಮಾಣ ಪತ್ರವೂ ದೊರೆತಿದ್ದು ಆಕರ್ಷಕ ಬಾಟಲಿಗಳಲ್ಲಿ ಗುಣಮಟ್ಟದ ಶುದ್ಧ ಜೇನು ಗ್ರಾಹಕರ ಮನೆಗಳಿಗೆ ತಲುಪುತ್ತಿದೆ. ಮುಂದೆ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಎಲ್ಲೆಡೆ ಉತ್ಪನ್ನಗಳು ಲಭ್ಯವಾಗುವಂತೆ ನೋಡಿಕೊಳ್ಳಲಾಗುವುದು. ಇಲ್ಲಿ ಲಾಭ–ನಷ್ಟಕ್ಕಿಂತ ಮಹಿಳಾ ಸಬಲೀಕರಣದ ಮೂಲಕ ಮಹಿಳೆಯರಲ್ಲಿ ಇರುವ ಉದ್ಯಮ ಕೌಶಲವನ್ನು ಪ್ರೋತ್ಸಾಹಿಸುವುದು ಜಿಲ್ಲಾ ಪಂಚಾಯಿತಿಯ ಆದ್ಯತೆಯಾಗಿದೆ ಎನ್ನುತ್ತಾರೆ ಪ್ರಸನ್ನ.
‘ವಿವಿದ ಅಳೆತೆಯ ಬಾಟೆಲ್‌ಗಳಲ್ಲಿ ಹೆಬ್ರಿ ಹನಿ ಲಭ್ಯ’ ‘ಸ್ಪರ್ಧಾತ್ಮಕ ದರದಲ್ಲಿ ಶುದ್ಧ ಜೇನುತುಪ್ಪ ಮಾರಾಟ’ ‘ಔಷಧೀಯ ಗುಣಗಳ ಸಾರ ಹೊಂದಿರುವ ಜೇನು’
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.