ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುರ್ತು ನೆರವಿಗೆ ಉಡುಪಿ ಹೆಲ್ಪ್‌ ಆ್ಯಪ್‌

ಪ್ರಾಕೃತಿಕ ವಿಕೋಪಗಳು ಎದುರಾದಾಗ ತುರ್ತು ಸ್ಪಂದನೆಗೆ ಆ್ಯಪ್‌ ಸಹಕಾರಿ
Last Updated 11 ಜೂನ್ 2019, 19:45 IST
ಅಕ್ಷರ ಗಾತ್ರ

ಉಡುಪಿ: ಪ್ರಾಕೃತಿಕ ವಿಕೋಪಗಳು ಎದುರಾದಾಗ ತುರ್ತು ನೆರವಿಗೆ ಧಾವಿಸಲು ಜಿಲ್ಲಾಡಳಿತ ‘ಉಡುಪಿ ಹೆಲ್ಪ್‌’ ಎಂಬ ಆ್ಯಪ್‌ ಬಿಡುಗಡೆ ಮಾಡಿದೆ. ಜಿಲ್ಲಾ ಉಸ್ತುವಾರಿ ಸಚಿವೆ ಡಾ.ಜಯಮಲಾ ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಆ್ಯಪ್‌ಗೆ ಚಾಲನೆ ನೀಡಿದರು.

ಆ್ಯಪ್‌ ಎಲ್ಲಿ ಲಭ್ಯ:

ಗೂಗಲ್ ಪ್ಲೇಸ್ಟೋರ್‌ನಲ್ಲಿ ಆ್ಯಪ್‌ ಲಭ್ಯವಿದ್ದು, ಆ್ಯಂಡ್ರಾಯ್ಡ್‌ ಸೌಲಭ್ಯವಿರುವ ಸ್ಮಾರ್ಟ್‌ ಫೋನ್‌ನಿಂದ ಡೌನ್‌ಲೋಡ್ ಮಾಡಿಕೊಂಡು ಉಪಯೋಗಿಸಬಹುದು.

ಆ್ಯಪ್ ಕಾರ್ಯ ನಿರ್ವಹಣೆ:

ಆ್ಯಪ್‌ ತೆರೆದ ತಕ್ಷಣ ಭಾಷೆ ಆಯ್ಕೆ ಮಾಡಿಕೊಳ್ಳಬೇಕು. ಬಳಿಕ ನಿಯಮ, ಷರತ್ತುಗಳಿಗೆ ಒಪ್ಪಿಗೆ ಸೂಚಿಸಿ, ಮೊಬೈಲ್ ಸಂಖ್ಯೆಯನ್ನು ನೋಂದಣಿ ಮಾಡಿದರೆ, ಮೊಬೈಲ್‌ಗೆ ಒಟಿಪಿ (ಒನ್‌ ಟೈಮ್ ಪಾಸ್‌ವರ್ಡ್‌) ಬರುತ್ತದೆ.ಬಳಿಕ ಲೊಕೇಷನ್‌ ಗುರುತಿಸಲು ಜಿಪಿಎಸ್‌ ಒಪ್ಪಿಗೆ ಸಂದೇಶ ಬರುತ್ತದೆ.

ಆ್ಯಪ್‌ ಬಳಕೆದಾರರ ಹೆಸರು, ಸಮೀಪದ ಲ್ಯಾಂಡ್‌ ಮಾರ್ಕ್‌ ಹಾಗೂ ಲಿಂಗದ ವಿವರ ನಮೂದಿಸಿದರೆ ಆ್ಯಪ್‌ ಬಳಸಲು ಸಿದ್ಧ. ಮುಖ್ಯ ಪುಟದಲ್ಲಿ ದೂರುಗಳನ್ನು ಸಲ್ಲಿಸಲು ಸೌಲಭ್ಯಗಳಿವೆ. ಜತೆಗೆ ಆ್ಯಪ್‌ ಹೇಗೆ ಬಳಸಬೇಕು ಎಂಬ ವಿಡಿಯೋ ಪ್ರಾತ್ಯಕ್ಷಿಕೆ ಕೂಡ ಇದೆ.

ಯಾವ ರೀತಿಯ ದೂರು ನೀಡಬಹುದು:

ಮಳೆಗಾಲದಲ್ಲಿ ಎದುರಾಗುವ ಎಲ್ಲ ವಿಪತ್ತುಗಳಿಗೂ ದೂರು ನೀಡಬಹುದು. ಉದಾಹರಣೆಗೆ ರಸ್ತೆಯ ಮೇಲೆ ವಿದ್ಯುತ್ ಕಂಬ ಬಿದ್ದರೆ, ಮನೆಯ ಮೇಲೆ ವಿದ್ಯುತ್ ಕಂಬ ಬಿದ್ದರೆ, ಪ್ರವಾಹಕ್ಕೆ ಸಿಲುಕಿದರೆ, ಸಿಡಿಲಿಗೆ ಮನೆ ಹಾನಿಯಾದರೆ, ಸಿಡಿಲಿನಿಂದ ಸಾವು–ನೋವುಗಳು ಸಂಭವಿಸಿದರೆ, ಮ್ಯಾನ್‌ಹೋಲ್ ತುಂಬಿ ಹೊಲಸು ರಸ್ತೆಗೆ ಹರಿಯುತ್ತಿದ್ದರೆ, ಭೂಕುಸಿತ, ಕಟ್ಟಡ ಕುಸಿತ ಉಂಟಾದರೆ, ವಿದ್ಯುತ್ ಕಡಿತವಾದರೆ, ಸೊಳ್ಳೆ ಉತ್ಪತ್ತಿ ಪ್ರದೇಶಗಳು ಕಂಡುಬಂದರೂ ದೂರು ನೀಡಬಹುದು.

ದೂರು ನೀಡುವುದು ಹೇಗೆ ?

ದೂರಿನ ಬಟನ್‌ ಕ್ಲಿಕ್ ಮಾಡಿದರೆ ನಿರ್ಧಿಷ್ಟ ಪುಟ ತೆರೆದುಕೊಳ್ಳುತ್ತದೆ. ಅಲ್ಲಿ ಫೋಟೊ ಹಾಗೂ ವಿಡಿಯೋ ಅಪ್‌ಲೋಡ್ ಮಾಡುವ ಸೌಲಭ್ಯಗಳಿರುತ್ತವೆ. ಉದಾಹರಣೆಗೆ ಮನೆಯ ಮುಂದೆ ಮರ ಬಿದ್ದಿದ್ದರೆ ಆ್ಯಪ್‌ನ ಕ್ಯಾಮೆರಾ ಮೂಲಕ ಮರದ ಫೋಟೊ ಅಥವಾ ವಿಡಿಯೋ ತೆಗೆದು, ಮರ ಬಿದ್ದ ಜಾಗದ ಮಾಹಿತಿಯನ್ನು ನಮೂದಿಸಿ ಪೋಸ್ಟ್ ಮಾಡಿದರೆ ಮುಗಿಯಿತು. ದೂರು ಸ್ವೀಕಾರದ ಕುರಿತು ಕಂಪ್ಲೇಂಟ್‌ ಐಡಿ ಬರುತ್ತದೆ.

ಕಾರ್ಯ ನಿರ್ವಹಣೆ ಹೇಗೆ?

ನಗರಸಭೆಯಲ್ಲಿರುವ ಐಟಿ ವಿಭಾಗ, ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ವಿಕೋಪ ನಿರ್ವಹಣಾ ವಿಭಾಗಕ್ಕೆ ದೂರು ರವಾನೆಯಾಗುತ್ತದೆ. ಅಲ್ಲಿರುವ ಐಟಿ ಎಂಜಿನಿಯರ್‌ಗಳು ಸಂಬಂಧಪಟ್ಟ ಇಲಾಖೆಗಳಿಗೆ ಹಾಗೂ ವಾರ್ಡ್‌ಗಳ ನೋಡೆಲ್ ಅಧಿಕಾರಿಗೆ ದೂರು ಕಳಿಸುತ್ತಾರೆ. ಜಿಪಿಎಸ್‌ ನೆರವಿನಿಂದ ಅಧಿಕಾರಿಗಳ ತಂಡ ಶೀಘ್ರವಾಗಿ ಅವಘಡಗಳು ಸಂಭವಿಸಿದ ಸ್ಥಳ ತಲುಪಿ ನೆರವು ನೀಡಲಿದೆ.

ನಗರದ 35 ವಾರ್ಡ್‌ಗಳನ್ನು ಮೂರು ವಿಭಾಗಗಳನ್ನಾಗಿ ವಿಂಗಡಿಸಿ ಮೂವರು ನೋಡೆಲ್‌ ಅಧಿಕಾರಿಗಳನ್ನು ದೂರುಗಳ ಇತ್ಯರ್ಥಕ್ಕೆ ನಿಯೋಜಿಸಲಾಗಿದೆ. ಬೆಸ್ಕಾಂ, ಅರಣ್ಯ ಇಲಾಖೆ, ನಗರಸಭೆಯಲ್ಲಿ ಪ್ರತ್ಯೇಕ ತಂಡವನ್ನು ರಚಿಸಲಾಗಿದೆ.

ನಗರಸಭೆ ವ್ಯಾಪ್ತಿ ಮಾತ್ರ:

ಸಧ್ಯಕ್ಕೆ 35 ವಾರ್ಡ್‌ ವ್ಯಾಪ್ತಿಯ ನಾಗರಿಕರು ಮಾತ್ರ ಆ್ಯಪ್‌ ಸೌಲಭ್ಯ ಪಡೆದುಕೊಳ್ಳಬಹುದು. ಮುಂದೆ ಇಡೀ ಜಿಲ್ಲೆಗೆ ವಿಸ್ತರಿಸುವ ಚಿಂತನೆ ಇದೆ ಎನ್ನುತ್ತಾರೆ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ.

ದೂರಿನ ಗರಿಷ್ಠ ಸಮಯ:

ದೂರು ನೀಡಿದ 6 ಗಂಟೆಯೊಳಗೆ ಸಮಸ್ಯೆ ಪರಿಹರಿಸುವ ಗುರಿಯನ್ನು ಜಿಲ್ಲಾಡಳಿತ ಹೊಂದಿದೆ. ದೂರಿನ ಸ್ಥಿತಿಗತಿಯನ್ನು ಆ್ಯಪ್‌ನಲ್ಲಿ ವೀಕ್ಷಣೆ ಮಾಡಬಹುದು. ಸಮಸ್ಯೆಗೆ ಪರಿಹಾರ ಸಿಕ್ಕ ಬಳಿಕ ಆ್ಯಪ್‌ನಲ್ಲಿಯೇ ಫಲಿತಾಂಶವನ್ನು ಚಿತ್ರ ಸಮೇತ ಲಭ್ಯವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT